ಬೆಂಗಳೂರು :
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಖುದ್ದಾಗಿ ಭೇಟಿ ನೀಡಿ ಅಲ್ಲಿನ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು. ಸ್ಥಳೀಯರಿಗೆ ಉದ್ಯೋಗ ನೇಮಕಾತಿಯಲ್ಲಿ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಸಂಸ್ಥೆಗಳ ಮುಖಂಡರು ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ನೇತೃತ್ವದಲ್ಲಿ ರಾಜ್ಯೋತ್ಸವದ ದಿನದಿಂದ ಪ್ರಾರಂಭಿಸಿರುವ ಆಗ್ರಹ ಅಭಿಯಾನದ ಅಂಗವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಿವಿಧ ಕಂಪನಿಗಳ ಸಿ ಇ ಓ ಹಾಗು ಎಚ್ ಆರ್ ಗಳನ್ನು ಒಮ್ಮೆಗೇ ಸಾಮೂಹಿಕವಾಗಿ ಭೇಟಿ ಮಾಡಿ. ಕರವೇ ಹಮ್ಮಿಕೊಂಡಿರುವ ಆಗ್ರಹ ಅಭಿಯಾನದ ಬಗ್ಗೆ ತಿಳಿಸಲಾಯಿತು.
ಟಿ.ಎ. ನಾರಾಯಣ ಗೌಡರ ನೇತೃತ್ವದ ಕರವೇ ನಾಯಕರುಗಳನ್ನು ಒಳಗೊಂಡ ನಿಯೋಗ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ಕೂಡಲೇ ಉನ್ನತ ಅಧಿಕಾರಿಗಳ ಒಂದು ದೊಡ್ಡ ಸಮೂಹ ಕನ್ನಡದ ಶಾಲುಗಳನ್ನು ತಮ್ಮ ಕೊರಳಿಗೆ ಧರಿಸಿಕೊಂಡೇ ಆತ್ಮೀಯವಾಗಿ ಬರಮಾಡಿಕೊಂಡಿತು.
ಪ್ರತಿಯೊಬ್ಬ ಅಧಿಕಾರಿಯೂ ಕೂಡ ಹುಮ್ಮಸ್ಸು ಹಾಗು ಲವಲವಿಕೆಯಿಂದ ಸಭೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಪಾಲ್ಗೊಂಡ ಸಂಸ್ಥೆಗಳು:
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ
- ಮೆಂಝಿಸ್ ಎವಿಯೇಷನ್
- ಡಿ ಹೆಚ್ ಎಲ್ ಎಕ್ಸ್ಪ್ರೆಸ್
- ಶಾಪರ್ ಶಾಪ್
- ಸ್ಟಾರ್ ಐರಲೈನ್ಸ್
- ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್
- ತಾಜ್ ಹೋಟೆಲ್
- ಹೆಚ್ ಎಂ ಎಸ್
- ಟ್ರಾವೆಲ್ ಟೂರ್ (ಟಿ ಎಫ್ ಎಸ್ )
- ಏರ್ ಇಂಡಿಯಾ ಸ್ಯಾಟ್ಸ್
- ಬ್ಲೂ ಡಾರ್ಟ್ ಇಂಡಿಯಾ
- ಡಬ್ಲ್ಯೂ ಯಫ್ ಎಸ್
- ಏರ್ ಇಂಡಿಯಾ
- ಟಿ ಆರ್ ಎಸ್
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ʻಆಗ್ರಹ ಅಭಿಯಾನʼದ ಉದ್ದೇಶವನ್ನು ವಿವರಿಸಿದರು. ನಾವು ಯಾವುದೇ ಉದ್ಯಮಗಳ ವಿರುದ್ಧವಾಗಿಲ್ಲ, ಕರ್ನಾಟಕದ ಎಲ್ಲ ಉದ್ಯಮಗಳೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ಆಗ್ರಹ. ಅದು ಸಂಸ್ಥೆಗಳ ನೈತಿಕ, ಸಾಮಾಜಿಕ, ಆಡಳಿತಾತ್ಮಕ ಜವಾಬ್ದಾರಿ ಕೂಡ. ಈ ಹಿನ್ನೆಲೆಯಲ್ಲಿ ಎಲ್ಲ ಸಂಸ್ಥೆಗಳ ಕರ್ತವ್ಯವನ್ನು ನೆನಪಿಸುವ ಕಾರ್ಯವನ್ನಷ್ಟೇ ನಾವು ಮಾಡುತ್ತಿದ್ದೇವೆ. ನಾವು ಕೇಳಿದ ಮಾಹಿತಿಗಳನ್ನು ಸಂಸ್ಥೆಗಳು ನೀಡಿದರೆ ರಾಜ್ಯ ಸರ್ಕಾರಕ್ಕೆ ಒಂದು ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಅತ್ಯಂತ ಅಗ್ಗದ ದರದಲ್ಲಿ ಭೂಮಿ ನೀಡಲಾಗಿದೆ. ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದೇ ವಿಮಾನ ನಿಲ್ದಾಣಕ್ಕೆ ಸಾವಿರಾರು ಎಕರೆ ಬೆಲೆಬಾಳುವ ಭೂಮಿಯಲ್ಲಿ ಇಲ್ಲಿನ ರೈತರು ಕೊಟ್ಟಿದ್ದಾರೆ. ಹೀಗಿರುವಾಗ ಇಲ್ಲಿ ಸೃಷ್ಟಿಯಾಗುವ ಉದ್ಯೋಗ ಕನ್ನಡಿಗರಿಗೆ ಸಿಗದೇ ಹೋದರೆ ಮಾಡಿದ ತ್ಯಾಗಕ್ಕೆ ಏನು ಅರ್ಥವಿರಲು ಸಾಧ್ಯವಿದೆ ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳು ಮಾತನಾಡಿ, ತಮ್ಮ ಎಲ್ಲ ಉದ್ಯಮಗಳಲ್ಲೂ ಕನ್ನಡಿಗರ ಸಂಖ್ಯೆ ಹೆಚ್ಚು ಇರುವಂತೆ ನೋಡಿಕೊಳ್ಳುತ್ತೇವೆ. ಇನ್ನೊಂದು ವರ್ಷದಲ್ಲಿ ಕನ್ನಡಿಗರ ಸಂಖ್ಯೆಯನ್ನು ದುಪ್ಪಟ್ಟು ಮಾಡುತ್ತೇವೆ. ಆಗ ಮತ್ತೆ ನೀವು ಇಲ್ಲಿಗೆ ಬಂದು ಪರಿಶೀಲಿಸಬಹುದು ಎಂಬ ಭರವಸೆಯನ್ನು ನೀಡಿದರು.
ಕರವೇ ನಿಯೋಗದಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ ದಾ.ಪಿ.ಆಂಜನಪ್ಪ, ಹಯಾತ್ ಕಾರ್ಗಲ್, ಪುಟ್ಟೇಗೌಡ, ಅಬ್ಬಿಗೆರೆ ವಿನೋದ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ರಾಜ್ಯ ಪ್ರಧಾನ ಸಂಚಾಲಕ ಮೋಹನ್ ಗೌಡ, ರಾಜ್ಯ ಕಾರ್ಯದರ್ಶಿ ಸುರೇಶ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಹನಾ ಶೇಖರ್, ರಾಜ್ಯ ಉಪಾಧ್ಯಕ್ಷೆ ಸಂಗೀತಾ ಚಂದನ್ ಗೌಡ, ಬೆಂಗಳೂರು ನಗರ ಘಟಕ ಅಧ್ಯಕ್ಷೆ ಶ್ವೇತಾ ಗೌಡ ಸೇರಿದಂತೆ ಹಲವರು ಇದ್ದರು.
ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL) ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ನಳಿನಿ ಜಾರ್ಜ್, ಮತ್ತೋರ್ವ ಅಧಿಕಾರಿ ನಾಗರಾಜ್ ಸೇರಿದಂತೆ ಹದಿನಾಲ್ಕು ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಾನವ ಸಂಪನ್ಮೂಲ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಉಪಸ್ಥಿತರಿದ್ದರು.

