ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ: ಮಸೂದೆ ಮರುಪರಿಶೀಲನೆಗೆ ರಾಜ್ಯ ಸರ್ಕಾರ ನಿರ್ಧಾರ

ಬೆಂಗಳೂರು ಅ.30: ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕಳೆದ ಮೂರು ವರ್ಷಗಳಿಂದ ಸರ್ಕಾರದ ಸಕ್ರಿಯ ಪರಿಶೀಲನೆಯಲ್ಲಿರುವ ಈ ಪ್ರಸ್ತಾವನೆಯನ್ನು ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಗೆ ಸರ್ಕಾರದೊಳಗೆ ಯಾವುದೇ ನೇರ ವಿರೋಧವಿಲ್ಲ. ಆದರೆ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇತರ ಇಲಾಖೆಗಳ ಅಭಿಪ್ರಾಯಗಳನ್ನು ಪಡೆಯಬೇಕಿದೆ ಎಂದು ಹೇಳಿದರು.

ಐಟಿ-ಬಿಟಿ ಇಲಾಖೆಯೂ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿಲ್ಲ. ಈ ಮಸೂದೆಯನ್ನು ಸರ್ಕಾರ ಕೈಬಿಟ್ಟಿಲ್ಲ. ಸೂಕ್ತ ಸಮಯದಲ್ಲಿ ಜಾರಿಗೆ ತರಲಾಗುವುದು ಎಂದು ಲಾಡ್ ಸ್ಪಷ್ಟಪಡಿಸಿದರು.

2024ರಲ್ಲಿ ಸಚಿವ ಸಂಪುಟವು ಕರ್ನಾಟಕ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿನ ಉದ್ಯೋಗ ಮಸೂದೆಗೆ ಅನುಮೋದನೆ ನೀಡಿತ್ತು. ಆದರೆ, ಮೀಸಲಾತಿಯ ಪ್ರಮಾಣ ಮತ್ತು ಅದರ ಪರಿಣಾಮಗಳ ಬಗ್ಗೆ ಕೈಗಾರಿಕಾ ವಲಯದ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಸೂದೆಯನ್ನು ತಡೆಹಿಡಿಯಲಾಗಿತ್ತು. ವಿಶೇಷವಾಗಿ ತಂತ್ರಜ್ಞಾನ ವಲಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದರು.

ಮೂಲ ಮಸೂದೆಯಲ್ಲಿ ಏನಿತ್ತು?

ಮೂಲ ಪ್ರಸ್ತಾವನೆಯ ಪ್ರಕಾರ, ಖಾಸಗಿ ಸಂಸ್ಥೆಗಳಲ್ಲಿನ ನಿರ್ವಹಣಾ ಹುದ್ದೆಗಳಲ್ಲಿ ಶೇ.50ರಷ್ಟು ಹಾಗೂ ನಿರ್ವಹಣೆಯೇತರ ಹುದ್ದೆಗಳಲ್ಲಿ ಶೇ.70ರಿಂದ 75ರಷ್ಟು ಉದ್ಯೋಗಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲು ಉದ್ದೇಶಿಸಲಾಗಿತ್ತು.

ಅಲ್ಲದೆ, ಖಾಸಗಿ ಕೈಗಾರಿಕೆಗಳಲ್ಲಿನ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯೂ ಮಸೂದೆಯಲ್ಲಿತ್ತು.

ಕಾನೂನು ಸವಾಲುಗಳ ಪರಿಶೀಲನೆ: ಪ್ರಿಯಾಂಕ್ ಖರ್ಗೆ

ಈ ಕುರಿತು ಪ್ರತಿಕ್ರಿಯಿಸಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಸ್ಥಳೀಯ ಜನರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ದೊರೆಯುವಂತೆ ಮಾಡುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.

ಸ್ಥಳೀಯವಾಗಿಯೇ ಕೌಶಲ್ಯ ಬೆಳೆಸಿಕೊಳ್ಳುವುದು ಮತ್ತು ಸ್ಥಳೀಯವಾಗಿಯೇ ಉದ್ಯೋಗ ಪಡೆಯುವುದು ಸರ್ಕಾರದ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ದೇಶದ ಅತಿದೊಡ್ಡ ಕೌಶಲ್ಯಾಭಿವೃದ್ಧಿ ಮತ್ತು ಮರುಕೌಶಲ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಒಂದನ್ನು ಸರ್ಕಾರ ನಡೆಸುತ್ತಿದೆ. ರಾಜ್ಯದ ಮಾನವ ಸಂಪನ್ಮೂಲ ಮತ್ತು ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅರ್ಹವಾಗುವಂತೆ ರೂಪಿಸುವುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಆದರೆ, ಇತರ ರಾಜ್ಯಗಳಲ್ಲಿ ಇದೇ ರೀತಿಯ ಉದ್ಯೋಗ ಮೀಸಲಾತಿ ಕ್ರಮಗಳು ಎದುರಿಸಿರುವ ಕಾನೂನು ಸವಾಲುಗಳನ್ನು ಪರಿಶೀಲಿಸಬೇಕಿದೆ. ತಮಿಳುನಾಡು ಸರ್ಕಾರದ ಮಸೂದೆಯನ್ನು ಪ್ರಶ್ನಿಸಲಾಗಿದೆ. ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿನ ಇಂತಹ ಕ್ರಮಗಳೂ ನ್ಯಾಯಾಲಯದಲ್ಲಿ ಸವಾಲು ಎದುರಿಸಿವೆ. ಹೀಗಾಗಿ, ಈ ಎಲ್ಲ ಕಾನೂನು ಅಡೆತಡೆಗಳನ್ನು ಅಧ್ಯಯನ ಮಾಡಿದ ಬಳಿಕ ರಾಜ್ಯದ ಜನರಿಗೆ ಅನುಕೂಲವಾಗುವ ಹಾಗೂ ಹೂಡಿಕೆ ಮತ್ತು ಕೈಗಾರಿಕೆಗಳ ಬೆಳವಣಿಗೆಗೂ ಪೂರಕವಾಗುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕನ್ನಡಿಗರ ಉದ್ಯೋಗದ ಹಕ್ಕು ಮತ್ತೆ ಚರ್ಚೆಗೆ

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವುದು ಮಹತ್ವ ಪಡೆದಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ, ಕೈಗಾರಿಕೆಗಳ ಆಕ್ಷೇಪಣೆ ಮತ್ತು ಕಾನೂನು ಅಡೆತಡೆಗಳನ್ನು ನೆಪವಾಗಿ ಇಟ್ಟುಕೊಳ್ಳದೆ ಮಸೂದೆಯನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬುದು ಈಗಿನ ಪ್ರಮುಖ ಪ್ರಶ್ನೆಯಾಗಿದೆ.

More articles

Latest article

Most read