ಬೆಂಗಳೂರು, ಅ 29: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರನ್ನು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 28ರಂದು ತಮ್ಮ ನಿವಾಸಕ್ಕೆ ಕರೆಸಿಕೊಂಡು ತನಿಖೆಯ ಪ್ರಗತಿಯ ಮಾಹಿತಿ ಪಡೆದಿರುವುದನ್ನು ಪ್ರಶ್ನಿಸಿ, ಸಾಮಾಜಿಕ ಕಾರ್ಯಕರ್ತೆ ರಮಾ ನಾಗರಾಜ ಎನ್. ಅವರು ಸುಪ್ರೀಂ ಕೋರ್ಟ್ನ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ದೂರು ಸಲ್ಲಿಸಿದ್ದಾರೆ.
ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2026ರ ಸೆಪ್ಟೆಂಬರ್ 21ರಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತನಿಖೆಯ ಗೌಪ್ಯತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಪಾಡಲು ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಅವರು ಕೋರಿದ್ದಾರೆ.
ದೂರಿನ ಪ್ರಕಾರ, ಅಕ್ಟೋಬರ್ 28ರಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸಕ್ಕೆ SIT ಮುಖ್ಯಸ್ಥ, ಐಜಿಪಿ ಎನ್. ಶಶಿಕುಮಾರ್ ಅವರನ್ನು ಕರೆಸಿಕೊಳ್ಳಲಾಗಿತ್ತು. ಅವರು ಪ್ರಕರಣದ ಕೇಸ್ ಡೈರಿಯನ್ನು ತಮ್ಮೊಂದಿಗೆ ಕೊಂಡೊಯ್ದು, ತನಿಖೆಯ ಪ್ರಗತಿ ಮತ್ತು ಇದುವರೆಗೆ ಕೈಗೊಂಡ ಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆ ಅಥವಾ ಲಿಖಿತ ವರದಿಯನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೌಜನ್ಯ ಪ್ರಕರಣದಲ್ಲಿ ಹೊಸದಾಗಿ, ಮೊದಲಿನಿಂದಲೇ ಮರುತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ಆದೇಶಿಸಿತ್ತು. ಈ ಹಿಂದೆ ಬೆಳ್ತಂಗಡಿ ಪೊಲೀಸರು, ಸಿಐಡಿ ಮತ್ತು ಸಿಬಿಐ ತನಿಖೆ ನಡೆಸಿದ್ದರೂ ಪ್ರಕರಣದ ತನಿಖೆಯ ರೀತಿಯ ಬಗ್ಗೆ ನ್ಯಾಯಾಲಯ ಗಂಭೀರ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಪ್ರಕರಣದ ತನಿಖೆಯ ವಿಧಾನವು ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸುವಂತಿದೆ ಎಂದು ಅಭಿಪ್ರಾಯಪಟ್ಟಿದ್ದು, ನಿಜವಾದ ಅಪರಾಧಿಗಳು ತನಿಖೆಯ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿರುವುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ತನಿಖೆಯಲ್ಲಿ ಭಾಗವಹಿಸದ ಅಧಿಕಾರಿಗಳನ್ನು ಒಳಗೊಂಡ SIT ರಚಿಸಿ, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಅದರಂತೆ ಸೆಪ್ಟೆಂಬರ್ 24ರಂದು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ SIT ರಚಿಸಲಾಗಿದ್ದು, ಅಕ್ಟೋಬರ್ 1ರಿಂದ ತನಿಖೆ ಆರಂಭವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, 2012ರಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ SIT ನೋಟಿಸ್ ನೀಡಿದ್ದು, ಅಕ್ಟೋಬರ್ 30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇಂತಹ ಸಂದರ್ಭದಲ್ಲಿ ತನಿಖೆಯ ಪ್ರಗತಿಯ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿರುವುದು ಏಕೆ ಎಂಬ ಪ್ರಶ್ನೆಯನ್ನು ರಮಾ ನಾಗರಾಜ ಎತ್ತಿದ್ದಾರೆ.
ಸುಪ್ರೀಂ ಕೋರ್ಟ್ನ ಆದೇಶದಂತೆ SIT ರಚಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ತನಿಖಾ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಹೀಗಿರುವಾಗ ತನಿಖೆಯ ಪ್ರಗತಿ, ವಿಚಾರಣೆಗೊಳಪಡಿಸಲಾದ ವ್ಯಕ್ತಿಗಳ ಹೇಳಿಕೆಗಳು ಮತ್ತು ಮುಂದಿನ ತನಿಖಾ ಕ್ರಮಗಳ ಕುರಿತು ರಾಜಕೀಯ ಕಾರ್ಯಾಂಗಕ್ಕೆ ಮಾಹಿತಿ ನೀಡುವ ಅಗತ್ಯವೇನಿದೆ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.
ಹಿಂದಿನ ತನಿಖಾಧಿಕಾರಿಗಳ ವಿಚಾರಣೆಗೆ ಕೇವಲ ಎರಡು ದಿನಗಳು ಬಾಕಿಯಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿರುವುದು ಮತ್ತಷ್ಟು ಕಳವಳಕಾರಿ ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿಗಳು ತನಿಖೆಯ ಮೇಲೆ ನಿಗಾ ಇಟ್ಟಿದ್ದಾರೆ ಎಂಬ ಭಾವನೆ SIT ಅಧಿಕಾರಿಗಳಲ್ಲಿ ಮೂಡಿದರೂ, ಅದು ತನಿಖೆಯ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರಬಹುದು. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ದೂಷಿಸುವ ಬದಲು, ಅವರನ್ನು ಕರೆಸಿಕೊಂಡ ಕ್ರಮದ ಔಚಿತ್ಯವನ್ನು ಪ್ರಶ್ನಿಸುತ್ತಿರುವುದಾಗಿ ದೂರಿನಲ್ಲಿ ಸ್ಪಷ್ಟಪಡಿಸಲಾಗಿದೆ.
ರಮಾ ನಾಗರಾಜ ಅವರು ತಮ್ಮ ದೂರಿನಲ್ಲಿ ಸುಪ್ರೀಂ ಕೋರ್ಟ್ನಿಂದ ನಾಲ್ಕು ಪ್ರಮುಖ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
- ಪ್ರಮಾಣಪತ್ರ ಸಲ್ಲಿಕೆಗೆ ನಿರ್ದೇಶನ: ಅಕ್ಟೋಬರ್ 28ರಂದು ಮುಖ್ಯಮಂತ್ರಿ ಮತ್ತು SIT ಮುಖ್ಯಸ್ಥರ ನಡುವೆ ನಡೆದ ಭೇಟಿಯ ಉದ್ದೇಶವೇನು, ಯಾರ ಸೂಚನೆಯ ಮೇರೆಗೆ ಭೇಟಿ ನಡೆಯಿತು ಮತ್ತು ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಲಾಗಿದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರ ಹಾಗೂ SIT ಮುಖ್ಯಸ್ಥರಿಂದ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶಿಸಬೇಕು.
- ರಾಜಕೀಯ ಕಾರ್ಯಾಂಗಕ್ಕೆ ಮಾಹಿತಿ ನೀಡದಂತೆ ನಿರ್ದೇಶನ: ತನಿಖೆಯ ಕುರಿತು ಮುಖ್ಯಮಂತ್ರಿ, ಸಚಿವರು ಅಥವಾ ರಾಜಕೀಯ ಕಾರ್ಯಾಂಗದ ಇತರ ಅಧಿಕಾರಿಗಳಿಗೆ SIT ಮಾಹಿತಿ ನೀಡದಂತೆ ನಿರ್ದೇಶಿಸಬೇಕು.
- ಮುಚ್ಚಿದ ಲಕೋಟೆಯಲ್ಲಿ ವರದಿ: ತನಿಖೆ ಪೂರ್ಣಗೊಂಡು ಪೊಲೀಸ್ ವರದಿ ಸಲ್ಲಿಕೆಯಾಗುವವರೆಗೆ ತನಿಖೆಯ ಪ್ರಗತಿಯ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ಸಲ್ಲಿಸುವಂತೆ ಸೂಚಿಸಬೇಕು.
- ಸಾಕ್ಷಿಗಳ ರಕ್ಷಣೆಗೆ ಕ್ರಮ: ಏಪ್ರಿಲ್ 29ರಂದು ನ್ಯಾಯಾಲಯ ಆದೇಶಿಸಿದ ಎಂಟು ಸಾಕ್ಷಿಗಳ ರಕ್ಷಣೆಯ ವ್ಯವಸ್ಥೆಯನ್ನು ಪರಿಶೀಲಿಸುವುದರ ಜೊತೆಗೆ, ಅಗತ್ಯವಿರುವ ಇತರ ಸಾಕ್ಷಿಗಳಿಗೂ ರಕ್ಷಣೆ ಒದಗಿಸಬೇಕು.
ಸೌಜನ್ಯ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುವುದು ನ್ಯಾಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಹದಿನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯಳ ಕುಟುಂಬಕ್ಕೆ ನ್ಯಾಯ ದೊರೆಯಬೇಕಾದರೆ ತನಿಖೆಯ ಸ್ವಾತಂತ್ರ್ಯ ಮತ್ತು ಸಾಕ್ಷಿಗಳ ಸುರಕ್ಷತೆ ಖಚಿತವಾಗಬೇಕು ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿದೆ.

