ಪಾಟ್ನಾ (ಬಿಹಾರ),ಅ.26 : ‘ಮೋದಿ ಅಷ್ಟೇ ಅಲ್ಲ, ಅವರಪ್ಪನೂ ಹೋಗಬೇಕಾಗುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.
ಬಿಹಾರದ ಮೊದಲ ಮುಖ್ಯಮಂತ್ರಿ ಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪಾಟ್ನಾದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಖರ್ಗೆ ಮಾತನಾಡುವ ವೇಳೆ, ಕಾಂಗ್ರೆಸ್ ಕಾರ್ಯಕರ್ತರೊಬ್ಬರು, ಮೋದಿ ನಹೀಂ ಜಾಯೇಗಾ (ಮೋದಿ ಹೋಗುವುದಿಲ್ಲ) ಎಂದು ಕೂಗಿದ್ದಾರೆ. ತಕ್ಷಣ ಕೋಪಗೊಂಡ ಖರ್ಗೆಯವರು, ಮೋದಿ ಕಾ ಬಾಪ್ ಭಿ ಜಾಯೇಗಾ(ಅವರ ತಂದೆಯೂ ಹೋಗಬೇಕಾಗುತ್ತದೆ) ಎಂದು ಒಂದೇ ಸಾಲನ್ನು ಮೂರು ಬಾರಿ ಪುನರಾವರ್ತಿಸಿ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಮೋದಿ ಹೋಗಲ್ಲ ಎಂದು ಕೂಗಿದ ವ್ಯಕ್ತಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಥಳಿಸಿ ಸಭಾಂಗಣದಿಂದ ಹೊರಹಾಕಿದ್ದಾರೆ. ಇನ್ನೂ ಸಭಾಂಗಣದಿಂದ ಹೊರ ಹಾಕಿದ ಬಳಿಕ ಮಾತನಾಡಿರುವ ಸಂತೋಷ್ ಕುಮಾರ್, ದಂಗೆ ನಡೆಯದ ಹೊರತು ಮೋದಿ ಹೋಗುವುದಿಲ್ಲ ಎಂದು ನಾನು ಹೇಳುತ್ತಿದ್ದೆ. ಆದರೆ ವಾಕ್ಯದ ಒಂದು ಭಾಗವನ್ನು ಮಾತ್ರ ಖರ್ಗೆಯವರಿಗೆ ಕೇಳಿತು. ಇದರಿಂದಾಗಿ ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು ಎಂದಿದ್ದಾರೆ.
ಖರ್ಗೆ ವಿರುದ್ಧ ಬಿಜೆಪಿ ಆಕ್ರೋಶ
ಖರ್ಗೆಯವರ ಹೇಳಿಕೆ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಹಾಕಿ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ‘ಖರ್ಗೆ ಅವರು ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿ ವರ್ತಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮೋದಿ ಅಥವಾ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಅವರು ಮೋದಿಯವರ ತಾಯಿಯನ್ನು ನಿಂದಿಸಿದ್ದಾರೆ, ‘ಮರಣದ ವ್ಯಾಪಾರಿ’, ‘ಚಾಯ್ವಾಲಾ’ಎಂದು ಕರೆಯುವ ಮೂಲಕ ಅವರ ಬಡತನವನ್ನು ಅಪಹಾಸ್ಯ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ಪಕ್ಷವು ಪ್ರತಿದಿನವೂ ಅಸಭ್ಯತೆಯ ಎಲ್ಲ ಮಿತಿಗಳನ್ನು ದಾಟುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

