ಕೊಚ್ಚಿ, ಅ.26: ಕೇರಳದ ಕೊಚ್ಚಿಯಲ್ಲಿ ನ್ಯಾಯಾಧೀಶರೊಬ್ಬರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಪಘಾತಕ್ಕೆ ಕಾರಣನಾದ ಆರೋಪ ಎದುರಿಸುತ್ತಿರುವ ಬಾಲಕನ ತಂದೆ ನ್ಯಾಯಾಧೀಶರಾಗಿರುವುದರಿಂದ ಪ್ರಕರಣದ ತನಿಖೆಯನ್ನು ಪ್ರಭಾವಿಸುವ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ತ್ರಿಶೂರ್ನ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ 17 ವರ್ಷದ ಪುತ್ರ ಚಲಾಯಿಸುತ್ತಿದ್ದ ಕಾರು ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಜಖಂಗೊಂಡಿದೆ. ಘಟನೆ ಸಂಬಂಧ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮನೆಗೆ ಮರಳುತ್ತಿದ್ದಾಗ ದುರಂತ
ಮೃತರನ್ನು ಮಂಜಲಿ ನಿವಾಸಿ ಜಯಬಾಲಕೃಷ್ಣನ್ ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ಉಪಹಾರ ಗೃಹ ನಡೆಸುತ್ತಿದ್ದ ಅವರು, ಎಂದಿನಂತೆ ವ್ಯಾಪಾರ ಮುಗಿಸಿ ತಡರಾತ್ರಿ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು. ಭಾನುವಾರ ನಸುಕಿನ ಸುಮಾರು 2.20ರ ವೇಳೆಗೆ ಚೇರನಲ್ಲೂರಿನ ಕಂಟೈನರ್ ರಸ್ತೆಯ ಮಾರಪರಂಬು ಸಮೀಪ ಅಪಘಾತ ಸಂಭವಿಸಿದೆ.
ವಲ್ಲಾರ್ಪಾಡಮ್ನಿಂದ ಕಳಮಸ್ಸೇರಿ ಕಡೆಗೆ ಸಾಗುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಜಯಬಾಲಕೃಷ್ಣನ್ ಅವರ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪೋಷಕರಿಗೆ ತಿಳಿಯದೆ ಕಾರು ತಂದಿದ್ದೆ ಎಂದ ಬಾಲಕ
ಅಪಘಾತದ ಬಳಿಕ ಪೊಲೀಸರು ನಡೆಸಿದ ವಿಚಾರಣೆಯಲ್ಲಿ 17 ವರ್ಷದ ಬಾಲಕ, ತಂದೆ-ತಾಯಿಗೆ ತಿಳಿಯದಂತೆ ಕಾರನ್ನು ಚಾಲನೆ ಮಾಡಲು ತೆಗೆದುಕೊಂಡು ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಕಾರನ್ನು ಚಲಾಯಿಸುವ ಆಸೆಯಿಂದ ವಾಹನ ತೆಗೆದುಕೊಂಡು ಬಂದಿದ್ದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಈ ವೇಳೆ ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನ ಏಕಾಏಕಿ ದಿಕ್ಕು ಬದಲಾಯಿಸಿದ್ದರಿಂದ ಡಿಕ್ಕಿ ಸಂಭವಿಸಿತು ಎಂದು ಬಾಲಕ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ನ್ಯಾಯಾಧೀಶರ ಪುತ್ರನಿಗೆ ವಿಶೇಷ ರಕ್ಷಣೆ? ಕುಟುಂಬಸ್ಥರ ಅನುಮಾನ
ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಾಲಕನ ತಂದೆ ನ್ಯಾಯಾಧೀಶರಾಗಿರುವ ಹಿನ್ನೆಲೆಯಲ್ಲಿ ತನಿಖೆಯ ನಿಷ್ಪಕ್ಷಪಾತತೆ ಕುರಿತು ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ಹಾಗೂ ಪ್ರಕರಣದ ತನಿಖೆಯನ್ನು ಹಾದಿತಪ್ಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

