ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಭಾನುವಾರ ನಸುಕಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶೀತಲಮಾತಾ ದೇವಸ್ಥಾನದ ಸಮೀಪ ಕಾಯುತ್ತಿದ್ದ ಭಕ್ತರ ಮೇಲೆ ಲಾರಿ ನುಗ್ಗಿದ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ. ಸುಮಾರು 40 ಮಂದಿ ಗಾಯಗೊಂಡಿದ್ದು, ಅವರಲ್ಲಿ ನಾಲ್ಕೈದು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಯಂತ್ರಣ ತಪ್ಪಿ ಭಕ್ತರ ಮೇಲೆ ನುಗ್ಗಿದ ಲಾರಿ
ಭಾನುವಾರ ನಸುಕಿನ ಜಾವ ಸುಮಾರು 1.30ರ ವೇಳೆಗೆ ಶೀತಲಮಾತಾ ಮಂದಿರ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಭತ್ತ ತುಂಬಿಕೊಂಡು ಸಾಗುತ್ತಿದ್ದ ಲಾರಿಯ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ರಸ್ತೆಬದಿಯಲ್ಲಿ ನಿಂತಿದ್ದ ಹಾಗೂ ಕುಳಿತಿದ್ದ ಭಕ್ತರ ಮೇಲೆ ಲಾರಿ ನುಗ್ಗಿದೆ. ಬಳಿಕ ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದ ನಂತರ ಲಾರಿ ನಿಂತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳದಲ್ಲೇ 13 ಮಂದಿ ಸಾವು
ಅಪಘಾತದ ಕುರಿತು ಮಾಹಿತಿ ನೀಡಿರುವ ಗ್ವಾಲಿಯರ್ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಯಾದವ್, ಶೀತಲಮಾತಾ ದೇವಸ್ಥಾನದ ಸಮೀಪ ರಸ್ತೆಬದಿಯಲ್ಲಿ ಕಾಯುತ್ತಿದ್ದ ಭಕ್ತರಿಗೆ ನಿಯಂತ್ರಣ ತಪ್ಪಿದ ಭತ್ತ ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಪಘಾತದಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದು, ಅವರಲ್ಲಿ ನಾಲ್ಕರಿಂದ ಐದು ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ.
ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಲಾರಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಳ್ಳಲು ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

