ಮೈಸೂರು, ಅ. 13 : ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾದ ಮೈಸೂರು ಯುವ ದಸರಾ ಅಕ್ಟೋಬರ್ 13 ರಿಂದ 17 ರವರೆಗೆ ಮೈಸೂರಿನ ರಿಂಗ್ ರಸ್ತೆಯಲ್ಲಿ ಇರುವ, ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನದ ಸಮೀಪ ನಡೆಯಲಿದೆ.
ಅಕ್ಟೋಬರ್ 13ರಂದು ಸಂಜೆ 6:30 ಕ್ಕೆ ಖ್ಯಾತ ಚಲನಚಿತ್ರ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರು ಉದ್ಘಾಟಿಸುವರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕ ಜಿ.ಟಿ. ದೇವೇಗೌಡ ಭಾಗವಹಿಸುವರು.
ಆಕರ್ಷಣೆಯಾದ ಯುವ ದಸರಾ ಆಲ್ಬಂ ಸಾಂಗ್ ಅನ್ನು ಬಿಡುಗಡೆ ಮಾಡಿದ್ದು, ಈ ಗೀತೆಗೆ ಜಿ.ಎಸ್. ಸೋಮಶೇಖರ್. ಮತ್ತು ಮನೋಜ್ ಸೌಗಂಧ್ ಅವರು ಸಾಹಿತ್ಯ ರಚಿಸಿದ್ದು, ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಗೀತೆ ಯುವಜನರ ಉತ್ಸಾಹ, ಮೈಸೂರಿನ ಸಾಂಸ್ಕೃತಿಕ ವೈಭವ ಮತ್ತು ದಸರಾ ಸಂಭ್ರಮವನ್ನು ಪ್ರತಿಬಿಂಬಿಸಲಿದೆ.
ಆಹಾರ ಮೇಳಕ್ಕೆ ಚಾಲನೆ
ಯುವ ದಸರಾ 2026ರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ 100ಕ್ಕೂ ಹೆಚ್ಚು ಆಹಾರ ಮಳಿಗೆಗಳನ್ನು ಒಳಗೊಂಡ ಬೃಹತ್ ಆಹಾರ ಮೇಳ ಆಯೋಜಿಸಲಾಗಿದೆ.
ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ದೂರದ ಊರುಗಳಿಂದ ಆಗಮಿಸುವ ಕಲಾಭಿಮಾನಿಗಳು, ಯುವಜನರು ಮತ್ತು ಸಾರ್ವಜನಿಕರಿಗೆ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸವಿಯುವ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಆಹಾರ ಮೇಳದಲ್ಲಿ ದಕ್ಷಿಣ ಭಾರತದ ಹಾಗೂ ಉತ್ತರ ಭಾರತದ ವಿವಿಧ ಶೈಲಿಯ ಆಹಾರ ಪದಾರ್ಥಗಳು ಲಭ್ಯವಿರಲಿದ್ದು, ಇದು ಯುವ ದಸರಾಕ್ಕೆ ಆಗಮಿಸುವವರಿಗೆ ವಿಶೇಷ ಆಕರ್ಷಣೆಯಾಗಲಿದೆ.
ಅತ್ಯಾಧುನಿಕ ವೇದಿಕೆ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸುಮಾರು 14 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಸುಮಾರು 80 × 60 ಅಡಿ ಅಳತೆಯ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಾರ್ಯಕ್ರಮಗಳಿಗೆ ಅನುಗುಣವಾಗಿ ಜರ್ಮನ್ ತಂತ್ರಜ್ಞಾನ ಆಧಾರಿತ ಧ್ವನಿ ವ್ಯವಸ್ಥೆ, ಮಿಕ್ಸರ್ ಹಾಗೂ ಅತ್ಯಾಧುನಿಕ ಲೈಟಿಂಗ್ ಮತ್ತು ಲೇಸರ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದು ಪ್ರೇಕ್ಷಕರಿಗೆ ಉನ್ನತ ಗುಣಮಟ್ಟದ ಧ್ವನಿ ಮತ್ತು ಬೆಳಕಿನ ಅನುಭವ ನೀಡುವುದು ಇದರ ಉದ್ದೇಶವಾಗಿದೆ.
ಏನೇನು ಕಾರ್ಯಕ್ರಮ
ಅ.13: ಉದ್ಘಾಟನಾ ಸಮಾರಂಭ ಹಾಗೂ ಅಜನೀಶ್ ಲೋಕನಾಥ್ ಅವರ ಸಂಗೀತ ಕಾರ್ಯಕ್ರಮ
ಅ. 14: ಶಂಕರ್–ಎಹ್ಸಾನ್–ಲಾಯ್
ಅ.15: ಸಿದ್ ಶ್ರೀರಾಮ್
ಅ. 16: ಸ್ಯಾಂಡಲ್‌ವುಡ್ ನೈಟ್ಸ್
ಅ,17: ಜಾಸ್ಮಿನ್ ಸ್ಯಾಂಡ್ಲಾಸ್

