ನವದೆಹಲಿ, ಸೆ.18: ವಿದೇಶಾಂಗ ಸಚಿವಾಲಯವು ಪಾಸ್‌ಪೋರ್ಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಅಪ್ರಾಪ್ತ ಮಕ್ಕಳ ಪಾಸ್‌ಪೋರ್ಟ್‌ನ ಸಿಂಧುತ್ವಕ್ಕೆ ಸಂಬಂಧಿಸಿದ ನಿಯಮವನ್ನು ಪರಿಷ್ಕರಿಸಿದೆ. ಹೊಸ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಹೊಸ ನಿಯಮದಂತೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುವ 26 ಪುಟಗಳ ಪಾಸ್‌ಪೋರ್ಟ್ ಗರಿಷ್ಠ ಐದು ವರ್ಷಗಳವರೆಗೆ ಅಥವಾ ಮಗುವಿಗೆ 18 ವರ್ಷ ತುಂಬುವವರೆಗೆ—ಇವೆರಡರಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ—ಮಾನ್ಯವಾಗಿರುತ್ತದೆ.
18ನೇ ವಯಸ್ಸಿನಲ್ಲಿ ಹೊಸ ಪಾಸ್‌ಪೋರ್ಟ್ ಕಡ್ಡಾಯ
1980ರ ಪಾಸ್‌ಪೋರ್ಟ್ ನಿಯಮಾವಳಿಯ ರೂಲ್ 12(1ಎ)ಗೆ ತಿದ್ದುಪಡಿ ಮಾಡಲಾಗಿದೆ. ಉದಾಹರಣೆಗೆ, ಮಗುವಿಗೆ 14ನೇ ವಯಸ್ಸಿನಲ್ಲಿ ಪಾಸ್‌ಪೋರ್ಟ್ ನೀಡಿದರೆ, ಐದು ವರ್ಷಗಳ ಲೆಕ್ಕದಲ್ಲಿ ಅದು 19ನೇ ವಯಸ್ಸಿನವರೆಗೆ ಮಾನ್ಯವಾಗಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ, ಮಗುವಿಗೆ 18 ವರ್ಷ ಪೂರ್ಣಗೊಂಡ ತಕ್ಷಣ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದೆ. ನಂತರ ವಯಸ್ಕರ ವಿಭಾಗದಲ್ಲಿ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಹಿಂದೆ 15 ವರ್ಷದೊಳಗಿನ ಮಕ್ಕಳಿಗೆ ನೀಡುತ್ತಿದ್ದ ಪಾಸ್‌ಪೋರ್ಟ್ ಐದು ವರ್ಷಗಳವರೆಗೆ ಅಥವಾ ಮಗು 15 ವರ್ಷ ತಲುಪುವವರೆಗೆ ಮಾತ್ರ ಮಾನ್ಯವಾಗಿತ್ತು. ಇದೀಗ ವಯೋಮಿತಿಯನ್ನು 18 ವರ್ಷಕ್ಕೆ ಬದಲಾಯಿಸಲಾಗಿದೆ.
ಪಾಸ್‌ಪೋರ್ಟ್ ಶುಲ್ಕದಲ್ಲೂ ಪರಿಷ್ಕರಣೆ
ರೂಲ್ 8(1)ರ ತಿದ್ದುಪಡಿಯ ಹಿನ್ನೆಲೆಯಲ್ಲಿ ವಿವಿಧ ವರ್ಗಗಳ ಪಾಸ್‌ಪೋರ್ಟ್ ಅರ್ಜಿಗಳಿಗೆ ಪರಿಷ್ಕೃತ ಶುಲ್ಕವನ್ನು ಜಾರಿಗೆ ತರಲಾಗಿದೆ.
ವಯಸ್ಕರ ಸಾಮಾನ್ಯ ಪಾಸ್‌ಪೋರ್ಟ್ (36 ಪುಟ): ₹1,500ರಿಂದ ₹2,500
ವಯಸ್ಕರ ಜಂಬೋ ಪಾಸ್‌ಪೋರ್ಟ್ (60 ಪುಟ): ₹2,000ರಿಂದ ₹2,500
ತತ್ಕಾಲ್ 36 ಪುಟ: ₹3,500ರಿಂದ ₹5,000
ತತ್ಕಾಲ್ 60 ಪುಟ: ₹4,000ರಿಂದ ₹6,000
18 ವರ್ಷಕ್ಕೆ ಬಯೋಮೆಟ್ರಿಕ್ ಬದಲಾವಣೆ
ಮಕ್ಕಳು ಬೆಳೆಯುವ ಅವಧಿಯಲ್ಲಿ ಅವರ ಮುಖಚಹರೆ ಮತ್ತು ದೈಹಿಕ ಲಕ್ಷಣಗಳಲ್ಲಿ ವೇಗವಾಗಿ ಬದಲಾವಣೆಗಳಾಗುವುದರಿಂದ, ಗುರುತಿನ ಪರಿಶೀಲನೆ ಸುಲಭವಾಗಲು 18 ವರ್ಷವನ್ನು ಸ್ಪಷ್ಟ ಮಿತಿಯಾಗಿ ನಿಗದಿಪಡಿಸಲಾಗಿದೆ. 18 ವರ್ಷ ಪೂರ್ಣಗೊಂಡ ಬಳಿಕ ವಯಸ್ಕರ ವಿಭಾಗದಲ್ಲಿ ಹೊಸ ಪಾಸ್‌ಪೋರ್ಟ್ ಪಡೆಯುವ ಸಂದರ್ಭದಲ್ಲಿ ಅಗತ್ಯ ಬಯೋಮೆಟ್ರಿಕ್ ಮತ್ತು ಬೆರಳಚ್ಚುಗಳನ್ನು ನೀಡಬೇಕಾಗುತ್ತದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ
ಪೋಷಕರು ‘ಪಾಸ್‌ಪೋರ್ಟ್ ಸೇವಾ’ ಪೋರ್ಟಲ್ ಅಥವಾ ಆ್ಯಪ್ ಮೂಲಕ ತಮ್ಮ ಅಪ್ರಾಪ್ತ ಮಕ್ಕಳ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಮಗುವಿನ ಜನನ ಪ್ರಮಾಣಪತ್ರ ಹಾಗೂ ಪೋಷಕರ ಪಾಸ್‌ಪೋರ್ಟ್ ಪ್ರತಿಗಳನ್ನು ಸಲ್ಲಿಸುವುದು ಅಗತ್ಯವಾಗಿದೆ.

