ಶಿಶುಗಳ ಪೋಷಣೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳ ಉಲ್ಲಂಘನೆಯ ಆರೋಪದ ಮೇರೆಗೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ನೆಸ್ಲೆ ಇಂಡಿಯಾ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದೆ.
ಇದರಲ್ಲಿ ಎರಡು ಪ್ರಕರಣಗಳು ‘NAN Excella Pro Stage 1’ ಮತ್ತು ‘Lactogen Pro 1’ ಉತ್ಪನ್ನಗಳ ಕುರಿತು ಮಾಡಲಾದ ಪ್ರಚಾರದ ಹೇಳಿಕೆಗಳಿಗೆ ಸಂಬಂಧಿಸಿವೆ; ಮೂರನೇ ಪ್ರಕರಣವು ನೆಸ್ಲೆಯ ‘ಫಾಲೋ-ಅಪ್ ಫಾರ್ಮುಲಾ’ದ (ಶಿಶುಗಳಿಗೆ ನೀಡುವ ಪೂರಕ ಆಹಾರ) ಮಾದರಿಗೆ ಸಂಬಂಧಿಸಿದ್ದು, ಇದರಲ್ಲಿ ಬಯೋಟಿನ್ನ ಪ್ರಮಾಣವು ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲದಿರುವುದು ನಿಯಂತ್ರಕ ಸಂಸ್ಥೆಯ ತಪಾಸಣೆಯಲ್ಲಿ ಕಂಡುಬಂದಿದೆ.
ಇ-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಪ್ರಚಾರ ಸಾಮಗ್ರಿಗಳನ್ನು FSSAI ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಶಿಶುಗಳಿಗಾಗಿನ ಎರಡು ‘ಫಾರ್ಮುಲಾ’ (infant formula) ಉತ್ಪನ್ನಗಳ ಕುರಿತು ಮಾಡಲಾದ ಹಕ್ಕುಪಾದನೆಗಳು ಹಾಗೂ ‘ಫಾಲೋ-ಅಪ್ ಫಾರ್ಮುಲಾ’ (follow-up formula) ಮಾದರಿಯ ಪೌಷ್ಟಿಕಾಂಶದ ಸಂಯೋಜನೆಯ ಬಗ್ಗೆ ನಿಯಂತ್ರಕ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ.
FSSAI ಯಾವ ವಿಷಯಗಳನ್ನು ಗುರುತಿಸಿ ಪ್ರಶ್ನಿಸಿದೆ?
‘NAN Excella Pro Stage 1’ ವಿಷಯದಲ್ಲಿ, ‘ವೇ ಪ್ರೋಟೀನ್’ (whey protein) ಮತ್ತು ಮಾನವನ ಎದೆಹಾಲಿನಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಸಂಕೀರ್ಣ ಸಕ್ಕರೆಗಳಾದ ಐದು ಬಗೆಯ ‘ಹ್ಯೂಮನ್ ಮಿಲ್ಕ್ ಒಲಿಗೋಸ್ಯಾಕರೈಡ್’ಗಳಿಗೆ (HMOs) ಸಂಬಂಧಿಸಿದ ಹೇಳಿಕೆಗಳನ್ನು FSSAI ಪ್ರಶ್ನಿಸಿದೆ. ಇನ್ನು ‘Lactogen Pro 1’ ವಿಷಯದಲ್ಲಿ, ‘ವೇ ಪ್ರೋಟೀನ್’ ಹಾಗೂ ಅದರ ಜೀರ್ಣವಾಗುವಿಕೆಯ ಸಾಮರ್ಥ್ಯಕ್ಕೆ ಸಂಬಂಧಿಸಿದ ಹೇಳಿಕೆಯ ಬಗ್ಗೆ ನಿಯಂತ್ರಕ ಸಂಸ್ಥೆಯು ಆಕ್ಷೇಪ ವ್ಯಕ್ತಪಡಿಸಿದೆ.
ನೆಸ್ಲೆ ಇಂಡಿಯಾ ಹೇಳಿದ್ದೇನು?
ಮೂರು ಉತ್ಪನ್ನಗಳಿಗೆ ಸಂಬಂಧಿಸಿದ ಪ್ರಚಾರದ ಹೇಳಿಕೆಗಳು ಮತ್ತು ಆರೋಪಿತ ನಿಯಮ ಉಲ್ಲಂಘನೆಗಳ ಕುರಿತು FSSAI ಕೈಗೊಂಡ ಕ್ರಮಕ್ಕೆ ಪ್ರತಿಕ್ರಿಯೆಯಾಗಿ, ತಮ್ಮ ಶಿಶು ಪೋಷಣಾ ಉತ್ಪನ್ನಗಳು ಅನ್ವಯವಾಗುವ ಎಲ್ಲಾ ನಿಯಮಗಳಿಗೆ ಬದ್ಧವಾಗಿವೆ ಎಂದು ನೆಸ್ಲೆ ಇಂಡಿಯಾ ತಿಳಿಸಿದೆ.

