ಅಡ್ಡ ಮತದಾನ ಮಾಡಿದ ಶಾಸಕ ಸೋಮಶೇಖರ್, ಹೆಬ್ಬಾರ್ ಬಿಜೆಪಿಗೆ ಗುಡ್ ಬೈ; ಶಾಸಕತ್ವ ಅನರ್ಹತೆಗೆ ಬಿಜೆಪಿ ಸಿದ್ದತೆ!

Most read

ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿರುವ ಹಿನ್ನೆಲೆಯಲ್ಲಿ ಈ ಶಾಸಕ ಸೋಮಶೇಖರ್, ಹೆಬ್ಬಾರ್ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ರಾಜ್ಯಸಭೆಯ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಶಾಸಕ ಶಿವರಾಮ್ ಹೆಬ್ಬಾರ್ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಕ್ಕೆ ಇಂದು ಸಂಜೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಶಾಸಕತ್ವ ಅನರ್ಹತೆಗೆ ಮುಂದಾದ ಬಿಜೆಪಿ

ಬಿಜೆಪಿಯಿಂದ (BJP) ಗೆದ್ದ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್‌ (ST Somashekhar) ಮತ್ತು ಶಿವರಾಮ ಹೆಬ್ಬಾರ್‌ ಅವರು ರಾಜ್ಯಸಭಾ ಚುನಾವಣೆಯಲ್ಲಿ (Karnataka Rajyasabha Election 2024) ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹೀಗಾಗಿ ಅವರ ವಿರುದ್ಧ ಶಾಸಕತ್ವ ಅನರ್ಹತೆಗೆ ಬಿಜೆಪಿ ಮುಂದಾಗಿದ್ದು, ಸದ್ಯ, ಈ ಇಬ್ಬರು ನಾಯಕರ ವಿರುದ್ಧ ಕ್ರಮಕ್ಕೆ ಮುಂದಾದ ರಾಜ್ಯ ಬಿಜೆಪಿ ನಾಯಕರು ನಾಳೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್​ಗೆ ದೂರು ನೀಡಲು ಮುಂದಾಗಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಎಸ್​.ಟಿ.ಸೋಮಶೇಖರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಸ್ಪೀಕರ್ ಯುಟಿ ಖಾದರ್​ಗೆ ದೂರು ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹೀಗೆ ದೂರು ನೀಡಲು ಬಿಜೆಪಿಗೆ 15 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ಕೋರ್ಟ್​ ಮೊರೆ ಹೋಗಲು ಬಿಜೆಪಿ ನಾಯಕರು ಚಿಂತಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashok), ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಕೊನೆಯ ಕ್ಷಣದವರೆಗೂ ನಮ್ಮ ಜೊತೆ ಮಾತಾಡಿದ್ದರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದಿದ್ದರು. ತಾಯಿಗೆ ಮೋಸ ಮಾಡಲ್ಲ ಅಂದಿದ್ದರು. ಆದ್ರೆ, ಸೋಮಶೇಖರ್ ಅಡ್ಡ ಮತದಾನ ಮಾಡಿದಾರೆ ಅಂತ ಗೊತ್ತಾಗಿದೆ. ಈ ರೀತಿ ಪದೇ ಪದೇ ಮೋಸ ಮಾಡುವುದನ್ನು ಜನ ಸಹಿಸಲ್ಲ. ಸೋಮಶೇಖರ್ ಮಂತ್ರಿ ಮಾಡಿ, ಮೈಸೂರು ಉಸ್ತುವಾರಿ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ? ಇಂದು ಸೋಮಶೇಖರ್ ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿ ದ್ರೋಹ ಬಗೆಯಲ್ಲ ಎಂದು ಹೇಳಿದ್ದರು. ಸೋಮಶೇಖರ್ ಡಿ.ಕೆ. ಶಿವಕುಮಾರ್ ಜೊತೆಗೆ, ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನು ಕ್ಷಮಿಸಲ್ಲ ಎಂದು ಕಿಡಿಕಾರಿದರು.

ಇನ್ನು ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಿಜೆಪಿ ತೊರೆಯುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿ ಬಂದರು. ಇವರೂ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು. ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಸ್ಪರ್ಧೆ ಆಗಬೇಕು ಎನ್ನುವ ದೃಷ್ಟಿಯಿಂದ ಸ್ಪರ್ಧೆ ಆಗಿದೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇದೆ. ಇದು ಬಿಜೆಪಿ, ಜೆಡಿಎಸ್‌ ಸೋಲು ಅಂತ ಅಲ್ಲ ಎಂದು ಸಮಜಾಯಿಷಿ ನೀಡಿದರು.

ಹೈಕಮಾಂಡ್​ಗೆ ಮಾಹಿತಿ ನೀಡಲಿರುವ ರಾಜ್ಯ ಬಿಜೆಪಿ

ಎಸ್​ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು​ ಬಿಜೆಪಿ ವಿಪ್ ಉಲ್ಲಂಘನೆ ಮಾಡಿದ ಕುರಿತು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್​ಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಮಾಹಿತಿ ನೀಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

More articles

Latest article