ಈ ಪಾದಯಾತ್ರೆ ಬಿ. ವೈ.ವಿಜಯೇಂದ್ರ ಅವರಿಗೆ ಮಾಡು ಇಲ್ಲವೆ ಮಡಿ. ಅದು ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ಕೂಡ. ಅವೆಲ್ಲವೂ 2028ರ ಚುನಾವಣಾ ಫಲಿತಾಂಶದ ಬಳಿಕ ತಿಳಿಯುತ್ತದೆ. ಆದರೆ ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಆಕ್ರೋಶ ಹಾಗೂ ಅಸಮಾಧಾನವು ಇನ್ನಷ್ಟು ಪ್ರಖರವಾಗಿ ರೂಪಗೊಳ್ಳುತ್ತಿರುವುದಂತು ಸತ್ಯ. ಒಂದು ವೇಳೆ ಈ ಹೋರಾಟ ಸಫಲವಾಗದಿದ್ದರೆ ರಾಜ್ಯಾಧ್ಯಕ್ಷನ ಹೊಣೆ ಹೊತ್ತು ಬಿ.ವೈ. ವಿಜಯೇಂದ್ರ ದೊಡ್ಡ ಬೆಲೆ ತೆರಲೇಬೇಕಾಗುವುದಂತು ನಿಶ್ಚಿತ – ಆಕಾಶ್ ಆರ್ ಎಸ್, ಯುವ ಪತ್ರಕರ್ತ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ ನೇತೃತ್ವದಲ್ಲಿ ಕಾಂಗ್ರೆಸ್ ವಿರುದ್ಧ ಆರಂಭಿಸಿದ ಬಳ್ಳಾರಿ ಚಲೋ ಹೋರಾಟದಲ್ಲಿ ದಿನದಿಂದ ದಿನೇ ಭಿನ್ನಮತ ಸೃಷ್ಟಿಯಾಗುತ್ತಿದ್ದು, ನಿಧಾನವಾಗಿ ಬಿಜೆಪಿ ನಾಯಕರು ಇದರಿಂದ ದೂರ ಸರಿದಿದ್ದಾರೆ. ಮೈತ್ರಿ ನಾಯಕರು ಇದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಮೌನವಹಿಸಿದ್ದು, ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ಮುಲಾಜಿಲ್ಲದೆ ತಿರಸ್ಕರಿಸಿರುವುದು ಕಾಣುತ್ತಿದೆ.
ಪಾದಯಾತ್ರೆ ಆರಂಭವಾದಾಗಿನಿಂದ ಇದು ಪಕ್ಷದ ಹೋರಾಟವಾಗದೆ ವ್ಯಕ್ತಿಯ ಹೋರಾಟದಂತೆ ರೂಪುಗೊಳ್ಳುತ್ತಿದೆ. ಇದು ಮೇಲ್ನೋಟಕ್ಕೆ ಕಾಂಗ್ರೆಸ್ ವಿರುದ್ಧದ ಹೋರಾಟದಂತೆ ಕಂಡು ಬಂದಿದ್ದು ಇದರ ಮುಖ್ಯ ಅಜೆಂಡಾ ಬಿ.ವೈ.ವಿಜಯೇಂದ್ರನ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ಚುನಾವಣೆಯ ಪಟ್ಟಾಭಿಷೇಕಕ್ಕೆ ತಯಾರಿಗೊಳ್ಳುವ ಸಿದ್ಧಸೂತ್ರವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದರಿಂದ ದೂರ ಉಳಿದಿರುವುದು ಅದನ್ನು ಮತ್ತಷ್ಟು ಸಾಕ್ಷೀಕರಿಸಿದೆ.
ಬಿಡದಿ ಟೌನ್ ಶಿಪ್ ಹೋರಾಟದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರಲ್ಲಿದ್ದ ಒಗ್ಗಟ್ಟು ಈ ಹೋರಾಟದಲ್ಲಿಲ್ಲ. ಇಲ್ಲಿ ಬಿ.ವೈ.ವಿಜಯೇಂದ್ರ ಏಕಾಂಗಿಯಾಗಿ ಕಂಡರೂ ಇದು ಅವರ ರಾಜಕೀಯ ಬೆಳವಣಿಗೆಗೆ ಸ್ವತಃ ಆಯ್ಕೆ ಮಾಡಿಕೊಂಡಿರುವ ದಾರಿಯಾಗಿದೆ. ಅದರಂತೆ ಪಾದಯಾತ್ರೆಯ ಆರಂಭದಲ್ಲಿ ಬೊಬ್ಬೆ ಹೊಡೆದ ಆರ್.ಅಶೋಕ್, ಶ್ರೀರಾಮುಲು ಈಗ ನಮಗೂ ಆ ಪಾದಯಾತ್ರೆಗೂ ಸಂಬಂಧವಿಲ್ಲವೆಂಬಂತೆ ಇದ್ದಾರೆ. ಹಾಗೆ ನೋಡಿದರೆ ಇಂತಹ ಒಡಕು ಇದೇ ಮೊದಲೇನಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ, ಬಿ.ವೈ.ವಿಜಯೇಂದ್ರ ಬಿಜೆಪಿಯ ರಾಜ್ಯಾಧ್ಯಕ್ಷನಾದಾಗಿನಿಂದಲೂ ಇದೆ.
ವಿಜಯೇಂದ್ರನ ಒಪ್ಪದ ಬಿಜೆಪಿ ನಾಯಕರು

ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕನನ್ನು ಸೃಷ್ಟಿಸಲು ಆರ್‌ಎಸ್‌ಎಸ್ ವಿಫಲವಾಗಿದೆ. ಅದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಯಡಿಯೂರಪ್ಪನವರು ಬಿ.ವೈ.ವಿಜಯೇಂದ್ರ ಅವರನ್ನು ಉತ್ತರಾಧಿಕಾರಿಯಾಗಿ ಮಾಡಲು ಹೊರಟಿದ್ದರು. ಅದರ ಮುಂದುವರೆದ ಭಾಗವಾಗಿ ಈ ಪಾದಯಾತ್ರೆ ನಡೆಯುತ್ತಿದೆ.
ಬಿಜೆಪಿಯಲ್ಲಿ ಹಿರಿಯ ನಾಯಕರು ಇದ್ದರೂ ಕೂಡ ಯಾವುದೇ ರಾಜಕೀಯ ಅನುಭವವಿಲ್ಲದ ಬಿ.ವೈ.ವಿಜಯೇಂದ್ರ ಅವರನ್ನು ಹೈಕಮಾಂಡ್ ರಾಜ್ಯಾಧ್ಯಕ್ಷನನ್ನಾಗಿ ಮಾಡುತ್ತದೆ ಎಂದರೆ ಯಡಿಯೂರಪ್ಪನವರ ರಾಜಕಾರಣ ಹಾಗೂ ಜಾತಿ ಬಂಡವಾಳ ಅರಿಯಲೇ ಬೇಕು. ಅಲ್ಲಿಂದ ಹತ್ತಿಕೊಂಡಿರುವ ಅಸಮಾಧಾನ, ತಿರಸ್ಕಾರದ ಬೆಂಕಿ ಇಂದಿನ ಪಾದಯಾತ್ರೆಯವರೆಗೆ ಹೊತ್ತಿ ಉರಿಯುತ್ತಿದೆ.
2024 ರಲ್ಲಿ ವಿಜಯೇಂದ್ರನ ನಾಯಕತ್ವ ಹಾಗೂ ಕಾರ್ಯವೈಖರಿಯನ್ನು ಖಂಡಿಸಿ ಅವರನ್ನು ಬದಲಾಯಿಸುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್ ಹಾಗೂ ಜಿ.ಎಂ.ಸಿದ್ಧೇಶ್ವರ ಸೇರಿದಂತೆ 38 ಬಿಜೆಪಿ ಬಂಡಾಯ ನಾಯಕರು ಸಹಿ ಮಾಡಿ ಹೈಕಮಾಂಡ್ ಗೆ ದೂರು ಸಲ್ಲಿಸಿದರು.
ಇನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಎಲ್ಲಾ ರಾಜಕೀಯ ಚಟುವಟಿಕೆ ಹಾಗೂ ಸಚಿವರು ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ವಿಜಯೇಂದ್ರ ಬಳಿ ಹೋಗಿ ಕಾಯಬೇಕಿತ್ತು ಎಂದು ಮೂಲಗಳಿಂದ ಕೇಳಿ ಬರುತ್ತಿದ್ದವು. ಹಾಗಾಗಿ ಬಿಜೆಪಿ ನಾಯಕರು ವಿಜಯೇಂದ್ರನ ರಾಜ್ಯಾಧ್ಯಕ್ಷ ಪಟ್ಟವನ್ನು ಖಂಡಿಸಿದ್ದು, ಈಗ ಪಾದಯಾತ್ರೆಯಿಂದ ದೂರ ಉಳಿದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಜನರ ಅಭಿವೃದ್ಧಿಯಲ್ಲಿ ಅಧಿಕಾರದ ಕನಸು
ಕಾಂಗ್ರೆಸ್ ಅಧಿಕಾರಕ್ಕೆ ಬಂದು 4 ವರ್ಷಗಳಾಗುತ್ತಿವೆ. ಆದರೆ ಈ ನಾಲ್ಕು ವರ್ಷಗಳಲ್ಲಿ ಒಳ ಮೀಸಲಾತಿ, ದಲಿತರ ಹತ್ಯೆ, ನೀಟ್ ಪರೀಕ್ಷೆಯಂತಹ ಘಟನೆಗಳು ಇನ್ನೂ ಜೀವಂತವಾಗಿ ಇವೆ. ಅದರ ಬಗ್ಗೆ ಚಕಾರೆತ್ತದ ವಿಜಯೇಂದ್ರ ಇಂದು ಅದೇ ದಲಿತರು, ರೈತರು, ಜೆನ್‌ಝೀ ಗಳ ಪರವಾಗಿ ಬೀದಿಗಿಳಿದಿದ್ದಾರೆ. ಇದು ಅಧಿಕಾರದ ಅಸೆಯಲ್ಲದೆ ಮತ್ತೇನು ಅಲ್ಲ.
ಕಳೆದ 4 ವರ್ಷದಲ್ಲಿ ಸರ್ಕಾರದ ವೈಫಲ್ಯವನ್ನು ಟೀಕಿಸದೆ, ಜನಪರವಾದ ನಿಲುವನ್ನು ತಾಳದೆ ಈಗ ಚುನಾವಣಾ ಪೂರ್ವ ತಯಾರಿಯಾಗಿ ಪಾದಯಾತ್ರೆ ಕೈಗೊಂಡಿದ್ದಾರೆ. ಬಳ್ಳಾರಿ ಚಲೋ ಮೂಲಕ ರಾಜ್ಯಕ್ಕೆ ಸಮರ್ಥ ನಾಯಕನೆಂದು ಬಿಂಬಿಸಿಕೊಳ್ಳಲು ವಿಜಯೇಂದ್ರ ದುಂಬಾಲು ಬಿದ್ದಂತಿದೆ.
ತಮ್ಮ ಸರ್ಕಾರವೇ ಜಂತರ್‌ಮಂತರ್‌ನಲ್ಲಿ ಜೆನ್‌ಝೀ ಹೋರಾಟವನ್ನು ಹತ್ತಿಕ್ಕುವಾಗ ತುಟಿ ಬಿಚ್ಚದೆ ಈಗ ಸಂವಾದಕ್ಕೆ ಆಹ್ವಾನ ನೀಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ರೈತರಿಗೆ ಆಗುವ ಸಂಕಷ್ಟದ ಬಗ್ಗೆ ಸೊಲ್ಲೆತ್ತದೆ ಈಗ ರೈತರ ಹೊಲಕ್ಕೆ ಹೋಗಿ ಅನ್ನ ಉಣ್ಣುವಂತಾಗಿದ್ದಾರೆ. ರಾಜಕೀಯಕ್ಕಾಗಿ ದಲಿತ ಮನೆಗೆ ಹೋಗಿ ಊಟ ಮಾಡಿದ ಯಡಿಯೂರಪ್ಪನವರ ಮಾದರಿಯನ್ನು ಮಗ ಚಾಚೂ ತಪ್ಪದೆ ಪಾಲಿಸಿದಂತೆ ಕಾಣುತ್ತಿದೆ.
ಒಟ್ಟಾರೆ ಈ ಪಾದಯಾತ್ರೆ ಬಿ. ವೈ.ವಿಜಯೇಂದ್ರಗೆ ಮಾಡು ಇಲ್ಲವೆ ಮಡಿ. ಅದು ವೈಯಕ್ತಿಕವಾಗಿಯೂ ಹಾಗೂ ರಾಜಕೀಯವಾಗಿಯೂ ಕೂಡ. ಅವೆಲ್ಲವೂ 2028ರ ಚುನಾವಣಾ ಫಲಿತಾಂಶದ ನಂತರ ತಿಳಿಯುತ್ತದೆ. ಆದರೆ ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಆಕ್ರೋಶ ಹಾಗೂ ಅಸಮಾಧಾನವು ಇನ್ನಷ್ಟು ಪ್ರಖರವಾಗಿ ರೂಪಗೊಳ್ಳುತ್ತಿರುವುದಂತು ಸತ್ಯ. ಒಂದು ವೇಳೆ ಈ ಹೋರಾಟ ಸಫಲವಾಗದಿದ್ದರೆ ರಾಜ್ಯಾಧ್ಯಕ್ಷನ ಹೊಣೆ ಹೊತ್ತು ಬಿ.ವೈ. ವಿಜಯೇಂದ್ರ ದೊಡ್ಡ ಬೆಲೆ ತೆರಲೇಬೇಕಾಗುವುದಂತು ನಿಶ್ಚಿತ.
ಆಕಾಶ್. ಆರ್. ಎಸ್
ಯುವ ಪತ್ರಕರ್ತ
ಇದನ್ನೂ ಓದಿ- ಮೇಲುಗೈ ಸಾಧಿಸುತ್ತಿರುವ ಮನುವಾದಿಗಳು, ಹಿನ್ನಡೆಯತ್ತ ಸೆಕ್ಯುಲರ್ ದೇಶ


