ಬೆಂಗಳೂರು ಸೆ.7: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ನಾಳೆ (ಸೆ.8) ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಗಳು ನಡೆಯಲಿವೆ.
ನವದೆಹಲಿಯ CWMA ಕಚೇರಿಯಲ್ಲಿ ಸಭೆಗಳು ನಡೆಯಲಿದ್ದು, ಬೆಳಗ್ಗೆ 11.30ಕ್ಕೆ CWRC ಸಭೆ ನಡೆಯಲಿದೆ. CWRC ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಮಧ್ಯಾಹ್ನ 2.30ಕ್ಕೆ CWMA ಸಭೆ ನಡೆಯಲಿದ್ದು, ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದಾರ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ CWRC ಈ ಹಿಂದೆ ನೀಡಿರುವ ಶಿಫಾರಸಿನ ಹಿನ್ನೆಲೆಯಲ್ಲಿ ನಾಳಿನ ಸಭೆಗಳು ಮಹತ್ವ ಪಡೆದುಕೊಂಡಿವೆ. ಸಭೆಯ ಹಿನ್ನೆಲೆಯಲ್ಲಿ ಕರ್ನಾಟಕ ಈಗಾಗಲೇ ಮೇಲ್ಮನವಿ ಸಲ್ಲಿಸಿದ್ದು, ರಾಜ್ಯದಿಂದ ತಮಿಳುನಾಡಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ಕಡಿತಗೊಳಿಸುವಂತೆ ಮನವಿ ಮಾಡಿದೆ.
ಪ್ರಸ್ತುತ ದಿನಕ್ಕೆ 9 ಸಾವಿರ ಕ್ಯೂಸೆಕ್ ನೀರು ಹರಿಸುವ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್ಗೆ ಇಳಿಸಬೇಕು ಎಂಬುದು ಕರ್ನಾಟಕದ ಪ್ರಮುಖ ಮನವಿಯಾಗಿದೆ. ರಾಜ್ಯದ ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಒಳಹರಿವು ಹಾಗೂ ಕರ್ನಾಟಕದ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪರಿಗಣಿಸಿ ನೀರು ಹರಿಸುವ ಪ್ರಮಾಣವನ್ನು ಕಡಿತಗೊಳಿಸುವಂತೆ ರಾಜ್ಯ ವಾದ ಮಂಡಿಸುವ ಸಾಧ್ಯತೆಯಿದೆ.
ನಾಳಿನ CWRC ಸಭೆಯಲ್ಲಿ ಕರ್ನಾಟಕದ ಮನವಿ ಹಾಗೂ ತಮಿಳುನಾಡಿನ ಬೇಡಿಕೆ ಕುರಿತು ಚರ್ಚೆ ನಡೆಯಲಿದ್ದು, ಬಳಿಕ CWMA ಸಭೆಯಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಗೆ ಬರಲಿದೆ. ಹೀಗಾಗಿ ಎರಡೂ ಸಭೆಗಳು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರ್ಣಾಯಕವಾಗಿವೆ.

