ಬೆಂಗಳೂರು: ಪೌರಕಾರ್ಮಿಕರ ಹಾಜರಾತಿ ಮತ್ತು ಕರ್ತವ್ಯನಿರ್ವಹಣೆ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ನೀಡಿರುವ ಹೇಳಿಕೆ ಹಾಗೂ ಪೌರಕಾರ್ಮಿಕರೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಚಿವರ ನಡವಳಿಕೆ ಪೌರಕಾರ್ಮಿಕರ ಘನತೆಗೆ ಧಕ್ಕೆ ತರುವಂತಿದೆ ಎಂದು ಸಾಮಾಜಿಕ ಚಿಂತಕರು, ಪತ್ರಕರ್ತರು, ಹೋರಾಟಗಾರರು ಸೇರಿದಂತೆ ಹಲವರು ಟೀಕಿಸಿದ್ದು, ಸಚಿವರು ಪೌರಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಸಾಮಾಜಿಕ ಚಿಂತಕ ನಾಗೇಗೌಡ ಕೀಲಾರ ಅವರು ಸಚಿವರ ನಡವಳಿಕೆಯನ್ನು ಪ್ರಜಾಸತ್ತಾತ್ಮಕ ಮೌಲ್ಯಗಳ ಹಿನ್ನೆಲೆಯಲ್ಲಿ ಪ್ರಶ್ನಿಸಿದ್ದಾರೆ. “ಮೊನ್ನೆ ಮೊನ್ನೆ ದಕ್ಷತೆ ಅನ್ನುವ ಹೆಸರಿನಲ್ಲಿ ಪೌರ ಕಾರ್ಮಿಕರನ್ನು ನೀವು ತರಾಟೆಗೆ ತೆಗೆದುಕೊಂಡಿದ್ದು ಜಮೀನ್ದಾರಿ ಪ್ಯೂಡಲಿಸಂನ ನಡವಳಿಕೆ” ಎಂದು ಅವರು ಟೀಕಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದಕ್ಷತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ನಡುವೆ ಸಂಘರ್ಷ ಎದುರಾದಾಗ ರಾಜಕಾರಣಿಯ ಆಯ್ಕೆ ಪ್ರಜಾಸತ್ತಾತ್ಮಕ ಮೌಲ್ಯಗಳ ಪರವಾಗಿರಬೇಕು ಎಂದು ಅಭಿಪ್ರಾಯಪಟ್ಟಿರುವ ಅವರು, “ಮೊನ್ನೆ ಪ್ಯೂಡಲ್ ದರ್ಪದಿಂದ ನೀವು ರೇಗಿದ ಆ ಪೌರ ಕಾರ್ಮಿಕರ ಬಳಿ ಕ್ಷಮೆ ಕೇಳುತ್ತೀರಿ ಎಂದು ಆಶಿಸುತ್ತೇನೆ” ಎಂದು ಹೇಳಿದ್ದಾರೆ.
ಪತ್ರಕರ್ತ ಹಾಗೂ ಸಂಶೋಧಕ ಹರ್ಷ ಕುಮಾರ್ ಕುಗ್ವೆ ಅವರು ಪೌರಕಾರ್ಮಿಕರ ಸಮಸ್ಯೆಯನ್ನು ಕೇವಲ ಹಾಜರಾತಿಯ ಪ್ರಶ್ನೆಯಾಗಿ ನೋಡುವುದು ಸರಿಯಲ್ಲ ಎಂದು ಹೇಳಿದ್ದಾರೆ. “ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದೇ ಹೊಸ ರೂಪದಲ್ಲಿ bondage labor ನಡೆಸುವಂತೆ. ಗುತ್ತಿಗೆ ಕಾರ್ಮಿಕರಿಗೆ ಸಿಗುವ ಸಂಬಳವೂ ಕಡಿಮೆ. ಅಸಲಿಗೆ ಇದೇ ಒಂದು ಅಮಾನವೀಯ ವ್ಯವಸ್ಥೆ” ಎಂದು ಅವರು ಹೇಳಿದ್ದಾರೆ.
“ಒಬ್ಬ ಜನಪರ ಸಚಿವರ ಕಾಳಜಿ ಬಡ ಜನರ ಮೇಲೆ ಅತಿಯಾದ ದಬ್ಬಾಳಿಕೆ ಮಾಡದೇ ಏನಾದರೂ ಮಧ್ಯದಾರಿ ಹುಡುಕುವುದು ಆಗಬೇಕಿತ್ತು” ಎಂದು ಅಭಿಪ್ರಾಯಪಟ್ಟಿರುವ ಕುಗ್ವೆ, ಫುಟ್‌ಪಾತ್ ತೆರವು ಸೇರಿದಂತೆ ನಗರ ಸ್ವಚ್ಛತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ದುರ್ಬಲ ವರ್ಗಗಳ ಬದುಕಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. “ಹತ್ತು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿ 90 ಜನರ ಬದುಕನ್ನು ಸುಂದರಗೊಳಿಸಿದರೆ ಅದನ್ನು ‘ನಗರ ಅಭಿವೃದ್ಧಿ’ ಎನ್ನಲು ಸಾಧ್ಯವೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಡಾ. ಎಚ್.ವಿ. ವಾಸು ಅವರು ತಮ್ಮ ಹಲವು ವರ್ಷಗಳ ಪೌರಕಾರ್ಮಿಕರೊಂದಿಗಿನ ಅನುಭವವನ್ನು ಉಲ್ಲೇಖಿಸಿ ಸಚಿವರ ಸಾರ್ವಜನಿಕ ವರ್ತನೆಯನ್ನು ಖಂಡಿಸಿದ್ದಾರೆ. “ಪೌರಕಾರ್ಮಿಕರ ಕಾಲು ತೊಳೆಯುವುದು, ಸಾಂಕೇತಿಕವಾಗಿ ಅವರನ್ನು ಕರೆದು ಉದ್ಘಾಟನೆ ಮಾಡಿಸುವುದು – ಆದರೆ, ಅವರ ಬದುಕನ್ನು ಬದಲಿಸುವ ಯಾವುದನ್ನೂ ಎಷ್ಟೂ ಮಾಡದೇ ಇರುವ, ನಮ್ಮ ನಿಜ ಬದುಕಿನಲ್ಲಿ ಸಹಜವಾಗಿ ಗೌರವಿಸದ ವೈಚಿತ್ರ್ಯವನ್ನು ನಿರಂತರವಾಗಿ ಕಾಣುತ್ತೇವೆ” ಎಂದು ಅವರು ಹೇಳಿದ್ದಾರೆ.
ಪೌರಕಾರ್ಮಿಕರ ಗೈರುಹಾಜರಿಗೆ ಸಾಮಾಜಿಕ ಕಾರಣಗಳೂ ಇವೆ ಎಂದು ಹೇಳಿರುವ ಡಾ. ವಾಸು, “ಈ ವಿಚಾರದಲ್ಲಿ ಅವರು ಸಾರ್ವಜನಿಕವಾಗಿ ನಡೆದುಕೊಂಡ ರೀತಿ ಖಂಡನೀಯ” ಎಂದು ನೇರವಾಗಿ ಟೀಕಿಸಿದ್ದಾರೆ. ಪೌರಕಾರ್ಮಿಕರ ಬದುಕಿನ ಕಥನವನ್ನು ಮೇಲಿನಿಂದ ನೋಡುವ ಬದಲು “ಸಹ-ಮನುಷ್ಯನಾಗಿ” ನೋಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಹಿರಿಯ ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಅವರು ಸಚಿವರಿಗೆ ಪೌರಕಾರ್ಮಿಕರ ಕೆಲಸದ ಕಠಿಣತೆಯನ್ನು ಸ್ವತಃ ಅನುಭವಿಸುವಂತೆ ಸವಾಲು ಹಾಕಿದ್ದಾರೆ. “ಮಿಸ್ಟರ್ ಕೃಷ್ಣ ಬೈರೇಗೌಡರೆ, ಕೇವಲ ಒಂದು ಗಂಟೆ ನೀವು ಪೌರಕಾರ್ಮಿಕನಾಗಿ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್‌ನಲ್ಲಿ ಕಸ ಬಾಚಿ ನೋಡಿ ಸಾಕು” ಎಂದು ಅವರು ಹೇಳಿದ್ದಾರೆ.
ಪೌರಕಾರ್ಮಿಕರು ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಮತ್ತು ಕುಟುಂಬಕ್ಕೆ ಭದ್ರತೆ ಕಲ್ಪಿಸುವಂತೆ ಕೇಳುತ್ತಿದ್ದಾರೆ ಎಂದು ಹೇಳಿರುವ ಅವರು, “ನಿಮ್ಮ ದಕ್ಷತೆ, ಪ್ರಾಮಾಣಿಕತೆ ಅನ್ನೋದು ದುರ್ಬಲ ಸಮುದಾಯದ ಮೇಲೆ ಹೇರುವ ಆಯುಧವಾಗಬಾರದು” ಎಂದು ಎಚ್ಚರಿಸಿದ್ದಾರೆ. ಸಚಿವರ ವರ್ತನೆಯಲ್ಲಿ ಮಾನವೀಯತೆಯ ಕೊರತೆ ಇದೆ ಎಂದು ಟೀಕಿಸಿರುವ ಟೆಲೆಕ್ಸ್, “ನಿಮ್ಮ ಅಸೂಕ್ಷ್ಮ ವರ್ತನೆಗೆ ನೀವು ಈ ನಾಡಿನ ಪೌರ ಕಾರ್ಮಿಕರ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಚಿಂತಕ ವಿಕಾಸ್ ಆರ್. ಮೌರ್ಯ ಅವರು ಪೌರಕಾರ್ಮಿಕ ವೃತ್ತಿ ನಿರ್ದಿಷ್ಟ ಸಮುದಾಯದವರ ಮೇಲೆಯೇ ಹೆಚ್ಚು ಅವಲಂಬಿತವಾಗಿರುವುದನ್ನು ಪ್ರಶ್ನಿಸಿದ್ದಾರೆ. “ಪೌರಕಾರ್ಮಿಕ ವೃತ್ತಿಗೆ ಈ ನೆಲದ ಮೂಲನಿವಾಸಿಗಳಾದ ದಲಿತರನ್ನು ಮಾತ್ರ ನೂಕಿರುವುದಕ್ಕೆ ಮೊದಲು ಇಲ್ಲಿನ ಸರ್ಕಾರಗಳು ಮತ್ತು ಸಮಾಜ ತಲೆ ತಗ್ಗಿಸಬೇಕು” ಎಂದು ಅವರು ಹೇಳಿದ್ದಾರೆ.
ಪೌರಕಾರ್ಮಿಕರ ಶ್ರಮಕ್ಕೆ ಸಮಾಜ ನೀಡುತ್ತಿರುವ ಗೌರವದ ಬಗ್ಗೆ ಪ್ರಶ್ನಿಸಿರುವ ಮೌರ್ಯ, “ಪ್ರತಿ ಹಬ್ಬಗಳಲ್ಲೂ ರಸ್ತೆಗಳನ್ನ ಗಬ್ಬು ಹೊಡೆಸುವ ನಾವುಗಳೆಲ್ಲಿ, ನಾವು ಮಲಗಿರುವಾಗ ನಮ್ಮ ಕಸಗಳನ್ನು ತೊಳೆಯುವ ಪೌರಕಾರ್ಮಿಕರೆಲ್ಲಿ?” ಎಂದು ಪ್ರಶ್ನಿಸಿದ್ದಾರೆ. ಪೌರಕಾರ್ಮಿಕರ ಸೇವೆಯ ಮಹತ್ವವನ್ನು ಜನಪ್ರತಿನಿಧಿಗಳು ಮಾತ್ರವಲ್ಲ, ಇಡೀ ಸಮಾಜ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರು ಕೃಷ್ಣ ಬೈರೇಗೌಡರ ಹೇಳಿಕೆಯನ್ನು ವಿಶಾಲ ಸಾಮಾಜಿಕ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿದ್ದಾರೆ. “ಕೃಷ್ಣ ಬೈರೇಗೌಡರು ಈ ದೇಶದ ಲಕ್ಷಾಂತರ ಫ್ಯೂಡಲ್ ಮನಸ್ಸುಗಳ ಯೋಚನಾ ಕ್ರಮವನ್ನು ಬಹಿರಂಗಗೊಳಿಸಿದ್ದಾರೆ ಅಷ್ಟೇ” ಎಂದು ಅವರು ಹೇಳಿದ್ದಾರೆ.
“ಮನುಷ್ಯ ಸಾಮಾನ್ಯವಾಗಿ, ತೀರ ಸಿಟ್ಟಿಗೆದ್ದಾಗ ಸಾರ್ವಜನಿಕ ಸಭ್ಯತೆಗಳನ್ನು ಮೀರಿ ತನ್ನೊಳಗಿನ ನಿಜವನ್ನು ಹೊರಹಾಕಿಬಿಡುತ್ತಾನೆ” ಎಂದು ಅಭಿಪ್ರಾಯಪಟ್ಟಿರುವ ರಕ್ಷಿದಿ, ಪೌರಕಾರ್ಮಿಕರು ಹಾಗೂ ಇತರ ದುಡಿಯುವ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಮಾತನಾಡಿದಾಗ ಸಮಾಜದ ಒಂದು ವರ್ಗಕ್ಕೆ ಏಕೆ ಸಿಟ್ಟು ಬರುತ್ತದೆ ಎಂಬುದನ್ನು ಪ್ರಶ್ನಿಸಿದ್ದಾರೆ. ಪೌರಕಾರ್ಮಿಕರ ಸಮಸ್ಯೆ ಕುರಿತು ಮಾತನಾಡುವಾಗ ಸಾಮಾಜಿಕ ನ್ಯಾಯದ ಬಗ್ಗೆ ರಾಜಕಾರಣಿಗಳು ಮತ್ತು ಸಮಾಜ ಎರಡೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಯುವ ಹೋರಾಟಗಾರ ಸರೋವರ್ ಬೆಂಕಿಕೆರೆ ಅವರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. “ಕ್ಲೀನ್ ಆಗಿರಬೇಕು ಅನ್ನುವ ಮೇಲ್ಜಾತಿಯ ಗೀಳು ಇಂದು ನೆನ್ನೆಯದಲ್ಲ. ಅದಕ್ಕೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ” ಎಂದು ಅವರು ಹೇಳಿದ್ದಾರೆ. ಪೌರಕಾರ್ಮಿಕರ ಘನತೆಯ ಪ್ರಶ್ನೆಯನ್ನು ಜಾತಿ ವ್ಯವಸ್ಥೆಯೊಂದಿಗೆ ಜೋಡಿಸಿರುವ ಅವರು, ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ನೀತಿಗಳ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ಚಂದ್ರು ತರಹುಣಿಸೆ ಅವರು ಸಚಿವರಿಗೆ ನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. “ಕೆಲಸ ಮಾಡಿಲ್ಲ ಅಂದ್ರೆ ಅದರ ಬಗ್ಗೆ ಮಾತಾಡಿ; ಅದನ್ನು ಬಿಟ್ಟು ನಿಮ್ಮನ್ನು ಪರ್ಮನೆಂಟ್ ಬೇರೆ ಮಾಡಬೇಕಾ ಎಂದು ಕೇಳ್ತೀರಲ್ಲ ಸ್ವಾಮಿ. ಇದು ನಿಮಗೆ ಅವರ ಮೇಲಿರುವ ಅಸಹನೆ ಎದ್ದು ಕಾಣುತ್ತಿದೆಯೇ ಹೊರತು ಅವರ ಕೆಲಸದಲ್ಲಿನ ತಪ್ಪುಗಳಲ್ಲ” ಎಂದು ಅವರು ಹೇಳಿದ್ದಾರೆ.
ತಮ್ಮ ವಿದ್ಯಾಭ್ಯಾಸದ ನಂತರದ ಬದುಕು ಪೌರಕಾರ್ಮಿಕರೊಂದಿಗೆ ಆರಂಭವಾಗಿದ್ದು, ಅವರ ದಿನನಿತ್ಯದ ಅವಮಾನಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿರುವ ಚಂದ್ರು, “ನಿಮ್ಮ ಇತ್ತೀಚಿನ ಮಾತುಗಳು ಯಾವ ಬಿಜೆಪಿ ಮನುವಾದಿಗಳಿಗಿಂತ ಕಡಿಮೆಯಿಲ್ಲ” ಎಂದು ಟೀಕಿಸಿದ್ದಾರೆ.
ಸಿಪಿಐಎಂ ಮುಖಂಡ ಮುನೀರ್ ಕಾಟಿಪಳ್ಳ ಅವರು ಪೌರಕಾರ್ಮಿಕರ ಕೆಲಸದ ಸ್ವರೂಪ, ಆರೋಗ್ಯದ ಅಪಾಯ ಮತ್ತು ವೇತನದ ವಿಚಾರವನ್ನು ಮುಂದಿಟ್ಟಿದ್ದಾರೆ. “ಗುತ್ತಿಗೆ ಆಧಾರದಲ್ಲಿ ದುಡಿಯುವ ಪೌರ ಕಾರ್ಮಿಕರಿಗೆ ಸಿಗುವ ವೇತನದ ಮಾಹಿತಿಯು ಈ ನಿರ್ದಯಿ ಬೆಂಬಲಿಗರಿಗೆ ಇಲ್ಲ. ಬಹುತೇಕ ಕಡೆ ಪೌರ ಕಾರ್ಮಿಕರ ವೇತನ 15 ಸಾವಿರ ರೂಪಾಯಿಯ ಆಸುಪಾಸು ಮಾತ್ರ” ಎಂದು ಅವರು ಹೇಳಿದ್ದಾರೆ.
ಪೌರಕಾರ್ಮಿಕರ ಬಗ್ಗೆ ಸಚಿವರನ್ನು ಸಮರ್ಥಿಸುವವರೂ ಅವರ ಬದುಕಿನ ವಾಸ್ತವವನ್ನು ಅರಿತುಕೊಳ್ಳಬೇಕು ಎಂದು ಹೇಳಿರುವ ಕಾಟಿಪಳ್ಳ, ಪೌರಕಾರ್ಮಿಕರ ಕೆಲಸದಿಂದ ಉಂಟಾಗುವ ಅನಾರೋಗ್ಯ, ಮಾನಸಿಕ ಕ್ಷೋಭೆ ಹಾಗೂ ಅಪಾಯಗಳ ಕುರಿತು ಗಮನಹರಿಸಬೇಕಿದೆ ಎಂದು ಹೇಳಿದ್ದಾರೆ.
ಹಿರಿಯ ಸಾಹಿತಿ ರಂಜಾನ್ ದರ್ಗಾ ಅವರು ಪೌರಕಾರ್ಮಿಕರ ಸೇವೆಯ ಅನಿವಾರ್ಯತೆಯನ್ನು ಒಂದೇ ಉದಾಹರಣೆಯ ಮೂಲಕ ವಿವರಿಸಿದ್ದಾರೆ. “ಇಡೀ ದೇಶದ ಪೌರ ಕಾರ್ಮಿಕರೆಲ್ಲ ಸೇರಿ ಒಂದು ತಿಂಗಳು ಮುಷ್ಕರ ಹೂಡಿದರೆ, ದೇಶ ಕೊಳೆತು ನಾರುವುದು. ನಾವು ರೋಗ ರುಜಿನುಗಳಿಂದ ಸಾವು ನೋವು ಅನುಭವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಪೌರಕಾರ್ಮಿಕರ ಹಾಜರಾತಿ ಮತ್ತು ದಕ್ಷತೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಅವರ ವೇತನ, ಉದ್ಯೋಗ ಭದ್ರತೆ, ಆರೋಗ್ಯ ಸುರಕ್ಷತೆ, ಸಾಮಾಜಿಕ ಘನತೆ ಮತ್ತು ಗುತ್ತಿಗೆ ಪದ್ಧತಿಯಂತಹ ಮೂಲಭೂತ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಸಚಿವರ ಹೇಳಿಕೆಯನ್ನು ಟೀಕಿಸಿರುವ ಬಹುತೇಕರು, ನಗರ ಸ್ವಚ್ಛತೆಯ ಅಗತ್ಯವನ್ನು ಒಪ್ಪಿಕೊಂಡರೂ ಅದನ್ನು ಪೌರಕಾರ್ಮಿಕರ ಘನತೆ ಮತ್ತು ಹಕ್ಕುಗಳನ್ನು ಕಡೆಗಣಿಸುವ ರೀತಿಯಲ್ಲಿ ಜಾರಿಗೆ ತರಬಾರದು ಎಂದು ಒತ್ತಾಯಿಸಿದ್ದಾರೆ.
ಪೌರಕಾರ್ಮಿಕರ ಕೆಲಸದಲ್ಲಿ ದಕ್ಷತೆಯ ಜವಾಬ್ದಾರಿ ನಿಗದಿಪಡಿಸುವಾಗ ಅವರ ಬದುಕಿನ ಸಾಮಾಜಿಕ ಮತ್ತು ಆರ್ಥಿಕ ವಾಸ್ತವ, ಆರೋಗ್ಯದ ಅಪಾಯ ಹಾಗೂ ಉದ್ಯೋಗ ಭದ್ರತೆಯನ್ನೂ ಸರ್ಕಾರ ಪರಿಗಣಿಸಬೇಕು ಎಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವ ಕೃಷ್ಣ ಬೈರೇಗೌಡರು ತಮ್ಮ ಹೇಳಿಕೆ ಮತ್ತು ವರ್ತನೆಯ ಕುರಿತು ಸ್ಪಷ್ಟನೆ ನೀಡಿ, ಪೌರಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕು ಎಂಬ ಆಗ್ರಹವೂ ತೀವ್ರಗೊಂಡಿದೆ.

