ಮಂಗಳೂರು : ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಮತ್ತು ಕಿರುಕುಳಮುಕ್ತ ಕೆಲಸದ ವಾತಾವರಣವನ್ನು ಖಾತ್ರಿಪಡಿಸುವ ಉದ್ದೇಶದಿಂದ ಅಭಿವೃದ್ಧಿ ಶಿಕ್ಷಣ ಸೇವೆ ʼDEEDSʼ ವತಿಯಿಂದ ಪದವಿ ಪೂರ್ವ ಕಾಲೇಜುಗಳ ಆಂತರಿಕ ಸಮಿತಿ (Internal Committee – IC)ಯ ಸದಸ್ಯರು ಹಾಗೂ ಆಡಳಿತ ಪ್ರತಿನಿಧಿಗಳಿಗಾಗಿ “POSH Act Masterclass” ಎಂಬ ಒಂದು ದಿನದ ಕಾರ್ಯಾಗಾರವನ್ನು ಮಂಗಳೂರಿನ ಶ್ರೀನಿವಾಸ್ ಸ್ಯಾಫ್ರನ್ ಹೋಟೆಲ್ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಉದ್ಘಾಟಿಸಿದರು. ವಕೀಲರಾದ ಮರ್ಲಿನ್ ಮಾರ್ಟಿಸ್ ಹಾಗೂ ಡಾ. ಲಕ್ಷ್ಮೀಶ್ ರೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ POSH ಕಾಯ್ದೆಯ ಪ್ರಮುಖ ಅಂಶಗಳು, ಆಂತರಿಕ ಸಮಿತಿಯ ರಚನೆ ಮತ್ತು ಜವಾಬ್ದಾರಿಗಳು, ದೂರು ಸ್ವೀಕರಿಸುವ ಮತ್ತು ನಿರ್ವಹಿಸುವ ವಿಧಾನ, ವಿಚಾರಣಾ ಪ್ರಕ್ರಿಯೆ ಹಾಗೂ ಗೌಪ್ಯತೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಶ್ರಿಧರ್ ಎಂ.ಎಸ್, ದಕ್ಷಿಣ ಕನ್ನಡದ ಸ್ಥಳೀಯ ಸಮಿತಿ (Local Committee) ಸದಸ್ಯರು ಹಾಗೂ ಡಾ. ವಿನಿತಾ ರೈ ಉಪಸ್ಥಿತರಿದ್ದರು

ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 20 ಪದವಿ ಪೂರ್ವ ಕಾಲೇಜುಗಳ ಆಂತರಿಕ ಸಮಿತಿ ಸದಸ್ಯರು ಹಾಗೂ ಆಡಳಿತ ಪ್ರತಿನಿಧಿಗಳು ಭಾಗವಹಿಸಿದರು. POSH ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶೈಕ್ಷಣಿಕ ಸಂಸ್ಥೆಗಳ ಜ್ಞಾನ ಮತ್ತು ಸಾಮರ್ಥ್ಯವನ್ನು ಬಲಪಡಿಸುವುದರ ಜೊತೆಗೆ, ಮಹಿಳೆಯರಿಗೆ ಸುರಕ್ಷಿತ, ಗೌರವಯುತ ಮತ್ತು ಘನತೆಯುತ ಕೆಲಸದ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವು ಮಹತ್ವದ ವೇದಿಕೆಯಾಯಿತು.
ಸರಿತಾ ಸ್ವಾಗತಿಸಿದರು. ಜಾಕ್ಲಿನ್ ವಂದನಾರ್ಪಣೆ ಮಾಡಿದರು.


