ಮಣಿಪುರ : ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ಬೆಳಿಗ್ಗೆ ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಗ್ರಾಮಸ್ಥರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಟಿ ವೈಚಾಂಗ್ ಉಪವಿಭಾಗದ ವ್ಯಾಪ್ತಿಯಲ್ಲಿರುವ ಕುಕಿ ಸಮುದಾಯದವರು ವಾಸಿಸುವ ‘ಎನ್ ಟೈಖಾಂಗ್’ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಜಿಲ್ಲಾ ಅಧಿಕಾರಿಯೊಬ್ಬರ ಪ್ರಕಾರ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸಶಸ್ತ್ರ ವ್ಯಕ್ತಿಗಳು ಗ್ರಾಮದ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಲ್ಲದೆ, ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ಮೃತರನ್ನು 35 ವರ್ಷದ ಲ್ಯಾಮ್ಟಿಂಥಾಂಗ್ ಮತ್ತು ನೀಚಿನ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯಲ್ಲಿ ಸೈಲುನ್ ಎಂಬ 65 ವರ್ಷದ ಗ್ರಾಮಸ್ಥರೊಬ್ಬರು ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ಮುಂದುವರಿದಿದ್ದರಿಂದ, ಅನೇಕ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸಮೀಪದ ಕಾಡುಗಳಲ್ಲಿ ಆಶ್ರಯ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಸಮುದಾಯಗಳ ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದುದರಿಂದ, ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ತಕ್ಷಣವೇ ಆ ಪ್ರದೇಶಕ್ಕೆ ಧಾವಿಸಿದವು.
ಜಿಲ್ಲೆಯಲ್ಲಿ ಶಂಕಿತ ಉಗ್ರರು ವಾಹನದ ಮೇಲೆ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ನಾಲ್ವರು ನಾಗಾ ನಾಗರಿಕರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ.
ಫೆಬ್ರವರಿಯಲ್ಲಿ ರಾಜ್ಯದಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗಿನಿಂದ, ಪ್ರತ್ಯೇಕ ಗುಂಡಿನ ದಾಳಿಯ ಘಟನೆಗಳಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಂಘರ್ಷಗಳಲ್ಲಿ ಹಲವಾರು ಮನೆಗಳನ್ನು ಕೂಡ ಸುಡಲಾಗಿದೆ.
ಏತನ್ಮಧ್ಯೆ, ಜನಗಣತಿ ಪ್ರಕ್ರಿಯೆಗೂ ಮುನ್ನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ನವೀಕರಿಸುವಂತೆ ಒತ್ತಾಯಿಸಿ ಭಾನುವಾರ ರಾತ್ರಿ ಕಾಕ್ಚಿಂಗ್ ಜಿಲ್ಲೆಯಲ್ಲಿ ನಡೆಸಲಾದ ‘ಟಾರ್ಚ್ಲೈಟ್ ಮೆರವಣಿಗೆ’ಯು ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಸಲಾಗಿದೆ. ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

