ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ಗೆ ಮತ್ತೆ ಕಂಟಕ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ಕಾರ್ಯಕ್ರಮ ನಡೆಸಲು ಅಗತ್ಯ ಅನುಮತಿಗಳನ್ನು ಪಡೆದಿಲ್ಲ ಎಂಬ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಜಾಲಿವುಡ್ ಸ್ಟುಡಿಯೋದಲ್ಲಿರುವ STP (Sewage Treatment Plant–ಕೊಳಚೆ ನೀರಿನ ಸಂಸ್ಕರಣಾ ಘಟಕ) ವಿಚಾರವಾಗಿ ಕಾನೂನುಬದ್ಧ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, STPಗೆ ಸಂಬಂಧಿಸಿದಂತೆ ಅಗತ್ಯ ಅನುಮತಿ ಪಡೆದಿಲ್ಲ ಎಂದು ಹೇಳಿದ್ದಾರೆ. ಕಾನೂನುಬದ್ಧವಾಗಿ ಅನುಮತಿ ಇದ್ದರೆ ಮಾತ್ರ ಮುಂದಿನ ಕ್ರಮ ಸಾಧ್ಯವಾಗಲಿದೆ. ಬಿಗ್ ಬಾಸ್ ಕಾರ್ಯಕ್ರಮ ನಡೆಸಲು ತಮ್ಮ ಇಲಾಖೆಯಿಂದ ಯಾವುದೇ ಅನುಮತಿ ನೀಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹೇಳಿಕೆ ಬೆನ್ನಲ್ಲೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮತ್ತೆ ಸಂಕಷ್ಟ ಎದುರಾಗಬಹುದೇ ಎಂಬ ಚರ್ಚೆ ಆರಂಭವಾಗಿದೆ.
ಹಿಂದೆಯೂ ಜಾಲಿವುಡ್ಗೆ ಬೀಗ ಬಿದ್ದಿತ್ತು. ಜಾಲಿವುಡ್ ಸ್ಟುಡಿಯೋಗೆ ಸಂಬಂಧಿಸಿದ ಪರಿಸರ ನಿಯಮ ಉಲ್ಲಂಘನೆ ಆರೋಪ ಇದೇ ಮೊದಲೇ ವಿವಾದಕ್ಕೆ ಕಾರಣವಾಗಿತ್ತು. 2025ರ ಅಕ್ಟೋಬರ್ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ವಿರುದ್ಧ ಕ್ರಮ ಕೈಗೊಂಡಿತ್ತು.
ಸ್ಟುಡಿಯೋ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಅಗತ್ಯ ಅನುಮತಿಗಳನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿದೆ ಎಂಬುದು ಮಂಡಳಿಯ ಆರೋಪವಾಗಿತ್ತು. ಜೊತೆಗೆ, 250 KLD ಸಾಮರ್ಥ್ಯದ STP ಅಳವಡಿಸಿದ್ದರೂ ಅದು ಕಾರ್ಯನಿರ್ವಹಿಸುತ್ತಿರಲಿಲ್ಲ; STPಗೆ ಒಳಚರಂಡಿ ನೀರಿನ ಹರಿವು ಕೂಡ ಕಂಡುಬಂದಿರಲಿಲ್ಲ ಎಂದು ಅಧಿಕಾರಿಗಳ ಪರಿಶೀಲನೆಯಲ್ಲಿ ತಿಳಿದುಬಂದಿತ್ತು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದು ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಾಲಿವುಡ್ ಆವರಣವನ್ನು ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ಪರಿಣಾಮವಾಗಿ ಬಿಗ್ ಬಾಸ್ ಕನ್ನಡದ ಚಿತ್ರೀಕರಣವೂ ಸ್ಥಗಿತಗೊಂಡು, ಸ್ಪರ್ಧಿಗಳನ್ನು ಹೊರಗೆ ಸ್ಥಳಾಂತರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಂತರ ಪರಿಸರ ನಿಯಮಗಳನ್ನು ಪಾಲಿಸುವ ಭರವಸೆ ಹಾಗೂ ಅಗತ್ಯ ಕ್ರಮಗಳ ಹಿನ್ನೆಲೆಯಲ್ಲಿ ಸ್ಟುಡಿಯೋ ಪುನರಾರಂಭಗೊಂಡಿತ್ತು. STP ಸೇರಿದಂತೆ ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಆದರೆ ಇದೀಗ STPಗೆ ಸಂಬಂಧಿಸಿದ ಅನುಮತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವುದು ಬಿಗ್ ಬಾಸ್ ಆಯೋಜಕರಿಗೆ ಹೊಸ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
“ಕಾನೂನಿನ ಪ್ರಕಾರ ಅನುಮತಿ ಇದ್ದರೆ ಮಾತ್ರ ಕಾರ್ಯಕ್ರಮ ನಡೆಸಲು ಅವಕಾಶ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಾವು ಯಾವುದೇ ಅನುಮತಿ ನೀಡಿಲ್ಲ” ಎಂಬ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಹೀಗಾಗಿ, ಹಿಂದಿನ ಪರಿಸರ ನಿಯಮ ಉಲ್ಲಂಘನೆ ವಿವಾದದ ಬೆನ್ನಲ್ಲೇ ಇದೀಗ STP ಅನುಮತಿ ವಿಚಾರದಲ್ಲಿ ಜಾಲಿವುಡ್ ಮತ್ತು ಬಿಗ್ ಬಾಸ್ ಆಯೋಜಕರು ಯಾವ ದಾಖಲೆಗಳನ್ನು ಸಲ್ಲಿಸುತ್ತಾರೆ ಎಂಬುದು ಮಹತ್ವ ಪಡೆದಿದೆ.

