ನಾಟಕ |ರಂಗಾಸಕ್ತರೆಲ್ಲರೂ ನೋಡಲೇಬೇಕಾದ ರಂಗ ಪ್ರಯೋಗ ʼ ಒಥೆಲೊ ʼ

ವಿಶ್ವದ ಶ್ರೇಷ್ಠ ‌ ಕವಿ, ನಾಟಕಕಾರ  ವಿಲಿಯಂ ಷೇಕ್ಷ್‌ಪಿಯರ್‌ ನ ದುರಂತ ನಾಟಕಗಳಲ್ಲಿ ಒಂದಾದ ʼ ಒಥೆಲೊʼ  ಶತಮಾನಗಳು ಕಳೆದರೂ ಇಂದಿಗೂ ಸಾಹಿತ್ಯ ಪ್ರಿಯರನ್ನು, ರಂಗಾಸಕ್ತರನ್ನು ಆಯಸ್ಕಾಂತದಂತೆ ಸೆಳೆಯುವ ನಾಟಕಗಳಲ್ಲೊಂದು. ಮನುಷ್ಯ ಸಂಬಂಧಗಳಲ್ಲಿ ಸಹಜವಾಗಿ ಕಾಣಬಹುದಾದ ಭಾವನೆಗಳ ಉತ್ಕರ್ಷ, ಉತ್ಕಟತೆ ಮತ್ತು ಇದರಿಂದಾಗಿಯೇ ಎದೆಯಾಳದಲ್ಲಿ ಸೃಷ್ಟಿಯಾಗುವ ಪ್ರೀತಿ, ವಾತ್ಸಲ್ಯ, ಮಮತೆ ಮತ್ತು ಬಾಂಧವ್ಯ ಇವೆಲ್ಲವನ್ನೂ ಒಂದು ಹಂದರದಡಿ ಹಿಡಿದಿಡುವ ಷೇಕ್ಸ್‌ಪಿಯರ್‌ ಶೈಲಿಯೇ ಆತನ ನಾಟಕಗಳನ್ನು ಹೃದಯ ಸ್ಪರ್ಶಿಯಾಗಿಸುತ್ತದೆ. ಈ ಕಾರಣಕ್ಕಾಗಿಯೇ ಷೇಕ್ಸ್‌ಪಿಯರ್‌ ನಾಟಕಗಳನ್ನು ಕನ್ನಡೀಕರಿಸುವಷ್ಟೇ ರಂಗರೂಪಕ್ಕೆ ಅಳವಡಿಸುವುದೂ ಸವಾಲಿನ ಪ್ರಶ್ನೆಯಾಗುತ್ತದೆ. ಪರಿವರ್ತನ ರಂಗ ಸಮಾಜ ಮೈಸೂರು ಪ್ರಸ್ತುತಪಡಿಸಿದ ಎಸ್.ಆರ್..‌ ರಮೇಶ್‌ ಅವರ ನಿರ್ದೇಶನದ ʼ ಒಥೆಲೊʼ (ಒಥೆಲೊ ನಾಟಕ ಆಗಸ್ಟ್‌ 16ರಂದು ಮೈಸೂರಿನ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಂಡಿತ್ತು )ಈ ಎರಡೂ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸುತ್ತದೆ. ಕೆ. ಪಿ. ವಾಸುದೇವನ್‌ ಅವರ ಉತ್ತಮ ಅನುವಾದ, ಮನಸ್ಪರ್ಶಿಯಾದ ಸಂಭಾಷಣೆ, ಎಸ್‌.ಆರ್.‌ ರಮೇಶ್‌ ಅವರ ದಕ್ಷ ನಿರ್ದೇಶನ, ಎಲ್ಲ ಕಲಾವಿದರ ಉತ್ತಮ ಅಭಿನಯ ʼ ಒಥೆಲೊ ʼ ನಾಟಕಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಮೂಲ ನಾಟಕದ ರೂಪ

ಇಟಲಿಯ ಸಿಯಾಂಥಿಯೋ ವಿರಚಿತ ಕತೆಯೊಂದನ್ನು ಆಧರಿಸಿರುವ ಒಥೆಲೊ ನಾಟಕ ನಾಲ್ಕು ಶತಮಾನಗಳಿಂದಲೂ ವಿಶ್ವದ ರಂಗಾಸಕ್ತರನ್ನು ಆಕರ್ಷಿಸುತ್ತಲೇ ಇದೆ. ವಿಲಿಯಂ ಷೇಕ್ಸ್‌ಪಿಯರ್‌ ಅವರ ದುರಂತ ನಾಟಕಗಳ ಪೈಕಿ ʼ ಒಥೆಲೊ ʼ ವಿಭಿನ್ನ ಕಾರಣಗಳಿಗಾಗಿ ವಿಶೇಷ ಎನಿಸುತ್ತದೆ. ಮೂಲತಃ ರಾಜಪ್ರಭುತ್ವದ ಕಾಲದಲ್ಲಿ ಸಹಜ ಪ್ರವೃತ್ತಿಯಾಗಿದ್ದ ಅಸೂಯೆ, ಕುತಂತ್ರ, ಮತ್ಸರ ಮತ್ತು ವಿಶ್ವಾಸದ್ರೋಹ ಇತ್ಯಾದಿಗಳು ಈ ನಾಟಕದಲ್ಲೂ ಪ್ರಧಾನವಾಗಿ ಪ್ರವಹಿಸುತ್ತದೆ. ಅಧಿಕಾರಕ್ಕಾಗಿ ಎಂತಹ ಘೋರ ಅಪರಾಧ ಮಾಡಲೂ ಹಿಂಜರಿಯದ ಕ್ರೌರ್ಯದ ಚಿತ್ರಣವನ್ನು ವ್ಯಕ್ತಿಗತ ನೆಲೆಯಲ್ಲಿ ಒಥೆಲೊ ಪ್ರಸ್ತುತಪಡಿಸುತ್ತದೆ. ಸಮಕಾಲೀನವಾಗಿಯೂ ವಾಸ್ತವ ಎನಿಸುವ ಈ ಅಮಾನುಷ ವರ್ತನೆ ಮತ್ತು ಹಿಂಸಾತ್ಮಕ ಮನಸ್ಥಿತಿಯನ್ನು ಕೆಲವೇ ಪಾತ್ರಗಳ ಮುಖಾಮುಖಿಯಲ್ಲಿ ತೆರೆದಿಡುವುದು ನಾಟಕಕಾರನ ಸೃಜನಶೀಲತೆಯ ದ್ಯೋತಕ.

ನಾಟಕದ ವೈಶಿಷ್ಟ್ಯ ಎಂದರೆ ಎಲ್ಲ ಪಾತ್ರಗಳಲ್ಲೂ ಪ್ರೇಕ್ಷಕರು ಕಾಣುವುದು ಅಮೂರ್ತ ಅಥವಾ ಅಲೌಕಿಕ ಕಲ್ಪನೆಗಳನ್ನಲ್ಲ. ಬದಲಾಗಿ ವ್ಯಕ್ತಿನಿಷ್ಠ (Subjective) ನೆಲೆಯಲ್ಲಿ ಲೌಕಿಕ ದೃಷ್ಟಿಕೋನವನ್ನು. ಹಾಗಾಗಿ ಅಮೂರ್ತ ಆದರ್ಶಗಳನ್ನಾಗಲೀ, ಸಾಮಾಜಿಕ ಔನ್ನತ್ಯಗಳನ್ನಾಗಲೀ ಪಾತ್ರಗಳಲ್ಲಿ ಗುರುತಿಸಲಾಗುವುದಿಲ್ಲ. ಬದಲಾಗಿ ಯಾವುದೇ ಸಮಾಜದಲ್ಲಿ ಮನುಷ್ಯ ಜೀವಿಗಳು ಮುಖಾಮುಖಿಯಾಗುವ ವಾಸ್ತವಿಕ ಸನ್ನಿವೇಶಗಳು ಮತ್ತು ಅಲ್ಲಿ ಸೃಷ್ಟಿಯಾಗುವ ಮನುಷ್ಯ ಸ್ವಭಾವಗಳು ಒಥೆಲೊ ನಾಟಕದ ಮೂಲ ಹಂದರವಾಗುತ್ತದೆ. ತನ್ನ ಸ್ವಾರ್ಥ ಸಾಧನೆಗಾಗಿ ಒಳಸಂಚು ನಡೆಸಿ ಸುಮಧುರ ದಾಂಪತ್ಯವನ್ನು ಭಂಗಗೊಳಿಸಿ ದುರಂತಮಯವಾಗಿಸುವ, ಕೇಡಿಗ ಮನಸ್ಸಿನ ಒಂದು ಪಾತ್ರ ನಾಟಕದ ಉದ್ದಕ್ಕೂ ಚಾಚಿಕೊಳ್ಳುತ್ತದೆ.

ರಂಗರೂಪದ ಸುಂದರ ವಿನ್ಯಾಸ

ವೆನಿಸ್‌ನ ಶೂರ ಸೇನಾನಾಯಕ ಒಥೆಲೊ ಡೆಸ್ಡಿಮೋನಾ ಎಂಬ ಅಪ್ರತಿಮ ಸುಂದರಿಯ ವ್ಯಾಮೋಹಕ್ಕೆ ಒಳಗಾಗಿ ಆಕೆಯನ್ನೇ ವರಿಸುತ್ತಾನೆ. ಇದನ್ನು ಸಹಿಸದೆ ಹೇಗಾದರೂ ಡೆಸ್ಡಿಮೋನಾಳನ್ನು ಒಲಿಸಿಕೊಳ್ಳಬೇಕು ಎಂಬ ಅತಿಯಾದ ಹಂಬಲವಿರುವ ರಾಡ್ರಿಗೋ ಇಯಾಗೋನ ಷಡ್ಯಂತ್ರಗಳಿಗೆ ಬಲಿಪಶುವಾಗಿ ದಾರುಣ ಅಂತ್ಯ ಕಾಣುತ್ತಾನೆ. ಇದರ ನಡುವೆ ಇಯಾಗೋ ತನ್ನ ಪದೋನ್ನತಿಗೆ ಅಡ್ಡಿಯಾಗುವ ಒಥೆಲೊ ವಿರುದ್ಧ ಸೇಡು ತೀರಿಸಿಕೊಳ್ಳಲು ತನ್ನೊಳಗಿನ ತಂತ್ರಗಾರಿಕೆಗಳೆಲ್ಲವನ್ನೂ ಬಳಸಿಕೊಳ್ಳಲಾರಂಭಿಸುತ್ತಾನೆ. ಇಯಾಗೋ ತನ್ನ ಪತ್ನಿ ಹಾಗೂ ಡೆಸ್ಡಿಮೋನಾಳ ಆಪ್ತ ಸಹಾಯಕಿಯಾದ ಎಮಿಲಿಯಾಳನ್ನು ಆಕೆಯ ಅರಿವಿಲ್ಲದೆಯೇ ಷಡ್ಯಂತ್ರದ ಭಾಗವಾಗಿ ಬಳಸಿಕೊಳ್ಳುತ್ತಾನೆ.

ಸೇನಾ ನಾಯಕ ಪದವಿಯ ಮಹತ್ವಾಕಾಂಕ್ಷೆಯುಳ್ಳ ಕ್ಯಾಸಿಯೋ ಮತ್ತು ಡೆಸ್ಡಿಮೋನಾಳ ನಡುವೆ ಇರುವ ಸ್ನೇಹ ಬಾಂಧವ್ಯವನ್ನೇ ತನ್ನ ಕುತಂತ್ರದ ಸೇತುವೆಯಾಗಿ ಬಳಸಿಕೊಳ್ಳುವ  ಇಯಾಗೋ, ತನ್ನ ಕುಟಿಲೋಪಾಯಗಳ ಮೂಲಕ ಒಥೆಲೊ ಮನಸ್ಸಿನಲ್ಲಿ ಡೆಸ್ಡಿಮೋನಾಳ ನಿಷ್ಠೆ ಮತ್ತು ಪ್ರಾಮಾಣಿಕ ದಾಂಪತ್ಯ ಪ್ರೇಮದ ಬಗ್ಗೆ ಅನುಮಾನಗಳನ್ನು ಸೃಷ್ಟಿಸುತ್ತಾನೆ. ತನ್ನೊಳಗೆ ಬೇಯುತ್ತಲೇ ಇರುವ ಅನುಮಾನಗಳ ಪರಿಣಾಮವಾಗಿ ದಾಂಪತ್ಯದ ಸುಂದರ ಅನುಭವಗಳನ್ನೂ ಲೆಕ್ಕಿಸದೆ, ಡೆಸ್ಡಿಮೋನಾಳ ನಿಷ್ಕಲ್ಮಷ ಪ್ರೀತಿಯನ್ನೂ ಸಂದೇಹಿಸುವ ಒಥೆಲೊ ಆಕೆಯ ಕೊಲೆ ಮಾಡುತ್ತಾನೆ. ಈ ಘೋರ ಅನ್ಯಾಯಕ್ಕೆ ತನ್ನ ಪತಿಯೇ ಕಾರಣ ಎಂದರಿತು ಪ್ರತಿಭಟಿಸುವ ಎಮಿಲಿಯಾ ಸಹ ಅವನಿಂದಲೇ ಕೊಲೆಗೀಡಾಗುತ್ತಾಳೆ.

ಷಡ್ಯಂತ್ರದ ವಿಷವ್ಯೂಹ

ಕ್ಯಾಸಿಯೋ ಮನಸ್ಸಿನಲ್ಲಿ ಉನ್ನತ ಸೇನಾನಾಯಕ ಪದವಿಯ ಸಹಜ ಹಂಬಲ ಇರುವಂತೆಯೇ ಡೆಸ್ಡಿಮೋನಾಳ ಸ್ನೇಹದ ಬಗ್ಗೆ ನಿಷ್ಕಲ್ಮಶ ಪ್ರೀತಿಯೂ ಇರುತ್ತದೆ. ಆದರೆ ಈ ನಿಸ್ಪೃಹ ಮನೋವೃತ್ತಿಯನ್ನೇ ಇಯಾಗೋ ತನ್ನ ಸೇಡಿನ ಬತ್ತಳಿಕೆಯ ಅಸ್ತ್ರಗಳಾಗಿ ಬಳಸಿಕೊಳ್ಳುತ್ತಾನೆ. ಇದಕ್ಕೆ ಬಲಿಯಾಗುವುದು ನಿರಪರಾಧಿ ಡೆಸ್ಡಿಮೋನಾ ಮತ್ತು ಅಮಾಯಕ ಎಮಿಲಿಯಾ. ಇಯಾಗೋ ತಾನೇ  ಹೆಣೆಯುವ ಪಾತ್ರಗಳ ಮೂಲಕ ಷಡ್ಯಂತ್ರ ಬಯಲಾಗುವ ಹೊತ್ತಿಗೆ ಡೆಸ್ಡಿಮೋನಾ ಕೊಲೆಯಾಗಿರುತ್ತದೆ. ಒಥೆಲೋಗೆ ತನ್ನ ತಪ್ಪಿನ ಅರಿವಾಗುತ್ತದೆ ಆದರೆ ಸಮಯ ಮೀರಿ ಹೋಗಿರುತ್ತದೆ. ಪಶ್ಚಾತ್ತಾಪದ ಕುಲುಮೆಯಲ್ಲಿ ಬೇಯುವ ಒಥೆಲೊ ಆತ್ಮಹತ್ಯೆಗೆ ಶರಣಾಗುತ್ತಾನೆ. ಇಯಾಗೋ ಶಿಕ್ಷೆಗೊಳಪಡುತ್ತಾನೆ. ಕ್ಯಾಸಿಯೋ ಮೂಕ ಪ್ರೇಕ್ಷಕನಾಗಿ ಎಲ್ಲವನ್ನೂ ನೋಡಬೇಕಾಗುತ್ತದೆ.

ತಾನು ಕಾಣುವ ಹೊರ ಪ್ರಪಂಚದಲ್ಲಿ ದುಷ್ಟರನ್ನು ಮಾತ್ರ ಕಲ್ಪಿಸಿಕೊಳ್ಳುವ ಇಯಾಗೋ ತನ್ನ ಪದವಿಯಾಕಾಂಕ್ಷೆಗೆ ಬಲಿಯಾಗಿ, ಸುತ್ತಲಿನ ಎಲ್ಲ ವ್ಯಕ್ತಿಗಳನ್ನೂ ಸೂತ್ರದ ಗೊಂಬೆಗಳಂತೆ ಆಟವಾಡಿಸುವುದು ಈ ನಾಟಕದ ವಿಶಿಷ್ಟ ಲಕ್ಷಣ. ಈ ಚದುರಂಗದಾಟದಲ್ಲಿ ಇಯಾಗೋ ತೋರಿಸುವ ಸ್ನೇಹ, ಪ್ರೀತಿ, ಆದರ ಮತ್ತು ಬಾಂಧವ್ಯ ಎಲ್ಲವೂ ಸಹ ನಾಟಕೀಯವೇ ಆಗಿರುತ್ತದೆ. ಇದಕ್ಕೆ ಬಲಿಯಾಗುವ ಕ್ಯಾಸಿಯೋ, ರಾಡ್ರಿಗೋ ತಮ್ಮ ಹಂಬಲದ ಬೆನ್ನೇರಿ ಇಯಾಗೋನ ಪಗಡೆಯಲ್ಲಿ ಅಟಕಾಯಿಗಳಾಗುತ್ತಾರೆ. ಯಾವುದೇ ಅನುಕಂಪ, ಸಹಾನುಭೂತಿ ಇಲ್ಲದ ಇಯಾಗೋ ತನ್ನ ತಪ್ಪಿಗೆ ಪರಿತಪಿಸುವುದೂ ಇಲ್ಲ. ಇಂತಹ ಒಂದು ಖೂಳ ವ್ಯಕ್ತಿತ್ವವನ್ನು ಸಮಕಾಲೀನ ರಾಜಕಾರಣದಲ್ಲೂ ಕಾಣಬಹುದು.

ನಿಜವಾದ ದುರಂತ ಕಾಣುವುದು ಡೆಸ್ಡಿಮೋನಾಳ ಅಸಹಾಯಕತೆ ಮತ್ತು ಕ್ರೂರ ಅಂತ್ಯದಲ್ಲಿ. ತನ್ನ ದಾಂಪತ್ಯ ನಿಷ್ಠೆಯನ್ನು ಸಾಬೀತುಪಡಿಸುವ ಆಕೆಯ ಯಾವ ಪ್ರಯತ್ನಗಳೂ ಫಲಗೂಡದಿದ್ದಾಗ ನಿಸ್ಸಹಾಯಕಳಾಗಿ ಸಾವಿಗೆ ಸಿದ್ಧಳಾಗುವ ಡೆಸ್ಡಿಮೋನಾ ತನ್ನ ಅಂತರಾಳದ ಯಾತನೆಯನ್ನು ಎಮಿಲಿಯಾಳಲ್ಲಿ ನಿವೇದಿಸಿಕೊಳ್ಳುತ್ತಾಳೆ. ಅಪನಂಬಿಕೆ ಮತ್ತು ಅನುಮಾನಗಳು ಪ್ರೀತಿ-ಪ್ರೇಮದ ಅಂತರ್‌ಭಾವದ ಅಭಿವ್ಯಕ್ತಿಯನ್ನು ಸಮ್ಮಾನಿಸುವ  ಎಲ್ಲ ಅವಕಾಶಗಳನ್ನೂ ಕಸಿದುಕೊಳ್ಳುವುದನ್ನು ನಾಟಕದಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ.

ಸಹಜಾಭಿನಯದ ರಂಗ ಹೂರಣ

ಪಾತ್ರಗಳ ಹೊರನಿಂತು ನೋಡಿದಾಗ ʼ ಒಥೆಲೊ ʼ ವ್ಯಕ್ತಿಯೊಳಗೆ ಇರಬಹುದಾದ ನಿಷ್ಕಲ್ಮಶ ಪ್ರೀತಿ, ಅಪ್ರತಿಮ ನಿಷ್ಠೆ, ಸೇಡಿನ ಮನೋಭಾವ, ಅಸೂಯೆ-ಮತ್ಸರ, ಮಹತ್ವಾಕಾಂಕ್ಷೆ,  ಕ್ರೌರ್ಯ ಮತ್ತು ಪಾಪಪ್ರಜ್ಞೆಯೇ ಇಲ್ಲದ ಅಪರಾಧಿ ಮನೋಭಾವ ಇವೆಲ್ಲವನ್ನೂ ಕೆಲವೇ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಡುತ್ತದೆ. ಆದರೆ ಎರಡು ಗಂಟೆ ಅವಧಿಯ ಈ ನಾಟಕವನ್ನು ತಮ್ಮ ಅತ್ಯಂತ ದಕ್ಷ ನಿರ್ದೇಶನದ ಮೂಲಕ ಬಿಗಿಯಾಗಿ ಹಿಡಿದಿಡುವ ನಿರ್ದೇಶಕ ಎಸ್. ಆರ್. ರಮೇಶ್‌ ಪಾತ್ರಗಳ ನಿರೂಪಣೆಯಲ್ಲಿ ಮತ್ತು ನಿರ್ವಹಣೆಯಲ್ಲಿ, ಒಂದು ಕ್ಷಣವೂ ಸಡಿಲವಾಗದಂತೆ ಎಚ್ಚರ ವಹಿಸಿರುವುದು ಪ್ರಶಂಸಾರ್ಹ. ಮೊನಚಾದ ಸಂಭಾಷಣೆಗಳಲ್ಲಿ, ಅಸೂಯೆಯ ಅಭಿವ್ಯಕ್ತಿಯಲ್ಲಿ, ಮಧುರ ಪ್ರೀತಿಯ ಸಂವಾದಗಳಲ್ಲಿ ಅಷ್ಟೇ ಬಿಗಿಯನ್ನು, ಸ್ಪಷ್ಟತೆಯನ್ನು ಕಾಣಬಹುದು.

ಈ ದಕ್ಷ ನಿರ್ದೇಶನಕ್ಕೆ ಪೂರಕವಾಗಿ ಕಲಾವಿದರ ಸಂಭಾಷಣೆಯ ನಿರ್ವಹಣೆಯೂ ಸಹ ಪರಿಣಾಮಕಾರಿಯಾಗಿದೆ. ಎಲ್ಲಿಯೂ ನೀರಸ ಎನಿಸದಂತೆ ಅಥವಾ ಸನ್ನಿವೇಶಗಳು ಸಡಿಲವಾಗದಂತೆ ರಂಗದ ಮೇಲಿನ ಕಲಾವಿದರು ತಮ್ಮ ಸಂವಹನದ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಶ್ರೀಮಂತ ಗಾಂಭೀರ್ಯದ  ಡ್ಯೂಕ್‌ ಪಾತ್ರದಲ್ಲಿ ಎಂ ದ್ವಾರಕಾನಾಥ್‌, ಚಂಚಲ ಮನಸ್ಸಿನ ರಾಡ್ರಿಗೋ ಪಾತ್ರದಲ್ಲಿ ಎಸ್‌ ಮಾಧವರಾವ್‌, ಪದವಿ ಹಂಬಲಿಸುವ ಕ್ಯಾಸಿಯೋ ಪಾತ್ರದಲ್ಲಿ  ಎನ್ ಎಸ್‌ ಜನಾರ್ಧನ್‌, ಸದಾ ಅಸಹಾಯಕ ಸ್ಥಿತಿಯ ಲುಡೋವಿಕೋ ಪಾತ್ರದಲ್ಲಿ ಬೆನಕ ನಾಗರಾಜ್‌, ಉತ್ಕಟ ಪ್ರೇಮವಿಲಾಸದ ಮನೋಭಾವದ ಡೆಸ್ಡಿಮೋನಾ ಪಾತ್ರದಲ್ಲಿ ಸಿ. ಲಿಖಿತ , ಸ್ನೇಹನಿಷ್ಠೆಯ ಪ್ರತೀಕವಾದ ಎಮಿಲಿಯಾ ಪಾತ್ರದಲ್ಲಿ ಬಿ. ಸುರಭಿ, ವ್ಯಾವಹಾರಿಕ ಮನಸ್ಥಿತಿಯ ಬ್ರಂಬಾಷಿಯೋ ಪಾತ್ರದಲ್ಲಿ ಹೆಚ್.ಆರ್‌ ಅಧ್ಯಾಪಕ್‌, ಹೀಗೆ ರಂಗದ ಮೇಲೆ ಪಾತ್ರಗಳಿಗೆ ಜೀವ ತುಂಬಿರುವ ಕಲಾವಿದರು ಕಿಂಚಿತ್ತೂ ವ್ಯತ್ಯಯವಿಲ್ಲದೆ ಪ್ರೇಕ್ಷಕರ ಮನಸ್ಸಿಗೆ ನಾಟುತ್ತಾರೆ. ಈ ನಾಟಕದ ಎರಡು ಮುಖ್ಯ ಪಾತ್ರಗಳಾದ ಇಯಾಗೋ ಪಾತ್ರದಲ್ಲಿ ಬಿ.ಎಸ್.‌ ಸತೀಶ್‌  ಮತ್ತು ಒಥೆಲೊ ಪಾತ್ರಧಾರಿ ಕೆ. ರವಿಕುಮಾರ್‌ ತಮ್ಮ ಸಹಜಾಭಿನಯದಿಂದ ಮನಸೆಳೆಯುತ್ತಾರೆ.

ಭಾವಾಭಿನಯದ ಉತ್ಕೃಷ್ಟ ಪ್ರದರ್ಶನ

ಒಥೆಲೊ ತನ್ನ ಪತ್ನಿಯ ನಿಷ್ಠೆಯನ್ನು ಶಂಕಿಸುವಾಗಲೂ ಎದೆಯಾಳದಲ್ಲಿ ಹುದುಗಿರುವ ಪ್ರೀತಿಯನ್ನು ಮತ್ತೆ ಮತ್ತೆ ಹೊರಗೆಳೆದು, ಮಾನಸಿಕ ತುಮುಲ ಮತ್ತು ತಳಮಳಗಳನ್ನು ಅಭಿವ್ಯಕ್ತಿಸುವಾಗ, ಪ್ರೇಕ್ಷಕರಲ್ಲೂ ಒಂದು ರೀತಿಯ ತುಮುಲ ಸೃಷ್ಟಿಯಾಗುತ್ತದೆ. ಒಥೆಲೊ ಪಾತ್ರಧಾರಿ ರವಿಕುಮಾರ್‌ ಅವರ ಭಾವಾಭಿನಯ ಪ್ರೇಕ್ಷಕ ವೃಂದವನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದೇ ರೀತಿ ಡೆಸ್ಡಿಮೋನಾ ತನ್ನ ನಿರಪರಾಧಿತ್ವವನ್ನು ನೆನೆದು ಪರಿತಪಿಸುವಾಗ, ಎದುರಾಗುತ್ತಿರುವ ಸಾವನ್ನು ಸ್ವೀಕರಿಸುವಾಗ ಯುವ ನಟಿ ಲಿಖಿತ ಅವರ ಅಭಿನಯ ಮೆಚ್ಚುಗೆ ಪಡೆಯುತ್ತದೆ. ಅತ್ಯಂತ ಕ್ಲಿಷ್ಟವಾದ ಇಯಾಗೋ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿರುವ ಬಿ.ಎಸ್. ಸತೀಶ್‌, ಪಾತ್ರದೊಳಗಿನ ಸೇಡು ಪ್ರತೀಕಾರದ ಭಾವವನ್ನು ಕಣ್ಣಲ್ಲೇ ಅಭಿವ್ಯಕ್ತಿಸಿರುವುದು ಮೆಚ್ಚಬೇಕಾದ ಅಂಶ.

ಷೇಕ್ಸ್‌ಪಿಯರ್‌ ದುರಂತ ನಾಟಕಗಳಲ್ಲಿ ಸೃಷ್ಟಿಸುವ ಪಾತ್ರಗಳು ಆಂಗಿಕ ಅಭಿನಯಕ್ಕಿಂತಲೂ ಭಾವಾಭಿನಯಕ್ಕೆ ಹೆಚ್ಚು ತೆರೆದುಕೊಳ್ಳುತ್ತವೆ. ಎಸ್.ಆರ್.‌ ರಮೇಶ್‌ ನಿರ್ದೇಶನದ ಒಥೆಲೊ ಈ ಸೂಕ್ಷ್ಮವನ್ನು ಸಾಕಾರಗೊಳಿಸುತ್ತದೆ. ಎಲ್ಲ ಪಾತ್ರಧಾರಿಗಳೂ ತಮ್ಮ ಭಾವಾಭಿನಯದಲ್ಲಿ ಮೆಚ್ಚುಗೆ ಪಡೆಯುತ್ತಾರೆ. ಕೊನೆಯ ದೃಶ್ಯದಲ್ಲಿ ಇಯಾಗೋ ಶಿಕ್ಷೆಗೊಳಗಾಗಿ ಮಂಡಿಯೂರಿ ಕೂರುವ ದೃಶ್ಯದಲ್ಲಿ, ಒಥೆಲೋ ತನ್ನ ತಪ್ಪಿನ ಅರಿವಾಗಿ ಪರಿತಪಿಸುವ ದೃಶ್ಯದಲ್ಲಿ, ಡೆಸ್ಡಿಮೋನಾ ತನ್ನ ಅಂತ್ಯವನ್ನು ಸ್ವೀಕರಿಸುವ ದೃಶ್ಯದಲ್ಲಿ, ಎಮಿಲಿಯಾ ತನ್ನ ಪತಿಯ ವಿಶ್ವಾಸ ದ್ರೋಹವನ್ನು ಧಿಕ್ಕರಿಸುವ ದೃಶ್ಯದಲ್ಲಿ ಈ ಭಾವಾಭಿನಯದ ನಮೂನೆಯನ್ನು ಕಾಣಬಹುದು. ಕಣ್ಣುಗಳಲ್ಲೇ ಎಲ್ಲ ರೀತಿಯ ಭಾವನೆಗಳನ್ನು ಅಭಿವ್ಯಕ್ತಿಸುವ ದೃಶ್ಯಗಳಲ್ಲಿ ಕಿರಿಯ ಕಲಾವಿದರು ಇನ್ನೂ ಹೆಚ್ಚಿನ ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕಿದೆ.

ಭಾವಾಭಿನಯವೇ ಪ್ರಧಾನವಾಗಿರುವ ನಾಟಕಗಳಲ್ಲಿ ಪ್ರೇಕ್ಷಕರೊಡನೆ ಸಂವಾದಿಸುವುದು ಕಣ್ಣುಗಳೇ ಹೊರತು ಸಂಭಾಷಣೆಗಳಲ್ಲಿ ಅಲ್ಲ. ಈ ಅಂಶವನ್ನು ಕಿರಿಯ ಕಲಾವಿದರು ತಮ್ಮ ರಂಗಪಯಣದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಎಸ್.ಆರ್.‌ ರಮೇಶ್‌ ನಿರ್ದೇಶನದ ಒಥೆಲೊ ಈ ಸಣ್ಣ ಪುಟ್ಟ ಕೊರತೆಗಳನ್ನು ಮೀರಿ ಪ್ರೇಕ್ಷಕರ ಎದೆಯೊಳಗಿಳಿಯುತ್ತದೆ. ಹನ್ನೆರಡು ಪಾತ್ರಧಾರಿಗಳ ನಾಟಕ ಪ್ರೇಕ್ಷಕರ ಮನಸ್ಸಿನಲ್ಲಿ ಹತ್ತಾರು ವ್ಯಕ್ತಿತ್ವಗಳನ್ನು ಸ್ಥಾಪಿಸುವಂತೆ ನಾಟಕದ ಕಥಾ ಹಂದರ ಇರುವುದರಿಂದ, ಸಹಜವಾಗಿ ಪ್ರೇಕ್ಷಕ ವೃಂದ ಮಂತ್ರಮುಗ್ಧತೆಯಿಂದ ವೀಕ್ಷಿಸುತ್ತದೆ. ಇದು ಯಾವುದೇ ಉತ್ಕೃಷ್ಟ ನಾಟಕಕ್ಕೆ ಮೆರುಗು ನೀಡುವ ಒಂದು ಅಂಶ.

ಒಥೆಲೊ ಮಡಿದ ನಂತರದಲ್ಲಿ ತಮ್ಮದಲ್ಲದ ತಪ್ಪಿಗೆ ಸಾವಿನ ಹಾದಿ ಹಿಡಿದ ಎರಡು ಆತ್ಮಗಳ ಮುಖಾಮುಖಿಯನ್ನು ಎಮಿಲಿಯಾ-ಡೆಸ್ಡಿಮೋನಾ ಮೃತ ದೇಹಗಳು ಎದ್ದು ಕೂರುವ ದೃಶ್ಯದ ಮೂಲಕ ನಾಟಕ ಕೊನೆಯಾಗುತ್ತದೆ. ಒಥೆಲೋನ ಉತ್ಕಟವಾದ ಪ್ರೀತಿ ಮತ್ತು ದ್ವೇಷಭಾವನೆಗೆ ಬಲಿಯಾಗುವ ಡೆಸ್ಡಿಮೋನಾ, ಇಯಾಗೋನ ಸೇಡು ಪ್ರತೀಕಾರಕ್ಕೆ ಬಲಿಯಾಗುವ ಎಮಿಲಿಯಾ, ಒಂದು ಕ್ರೂರ ಸಾಮಾಜಿಕ ವ್ಯವಸ್ಥೆಯಲ್ಲಿ ಬಲಿಪೀಠ ಏರುವ ಎರಡು ಅಸಹಾಯಕ ಜೀವಗಳಾಗಿ ಮಂದ ಬೆಳಕಿನಲ್ಲಿ ಗೋಚರಿಸುತ್ತವೆ. ಈ ಅಂತಿಮ ದೃಶ್ಯವೇ ಕೆಲವು ಪ್ರೇಕ್ಷಕರ ಕಣ್ಣುಗಳನ್ನಾದರೂ ಒದ್ದೆ ಮಾಡುತ್ತದೆ. ಅಂತಿಮವಾಗಿ ಪ್ರೇಕ್ಷಕ ವೃಂದದ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿಯುವುದು ಪಾತ್ರಗಳಿಗಿಂತಲೂ ಹೆಚ್ಚಾಗಿ ʼ ಒಥೆಲೊ ʼ ರಂಗ ಪ್ರಯೋಗ.

ಇದಕ್ಕೆ ನಟವರ್ಗದಷ್ಟೇ ಕಾರಣವಾಗುವುದು ಉತ್ತಮ ರಂಗಸಜ್ಜಿಕೆ, ಬೆಳಕಿನ ವಿನ್ಯಾಸ, ವಸ್ತ್ರವಿನ್ಯಾಸ, ಪ್ರಸಾಧನ, ಹಿನ್ನೆಲೆ ಸಂಗೀತ ಮತ್ತಿತರ ತಾಂತ್ರಿಕ ವರ್ಗದ ಪ್ರಾಮಾಣಿಕ ಪರಿಶ್ರಮ.

ಎಸ್.ಆರ್.ರಮೇಶ್‌ ಅವರ ದಕ್ಷ ನಿರ್ದೇಶನ, ನಾಟಕದ ಮೇಲಿನ ಬಿಗಿಹಿಡಿತ ಮತ್ತು ರಂಗರೂಪದ ಅತ್ಯುತ್ತಮ ವಿನ್ಯಾಸ-ನಿರ್ವಹಣೆಗೆ ಹೃದಯ ಪೂರ್ವಕ ಅಭಿನಂದನೆಗಳು.

ನಾ ದಿವಾಕರ
ಲೇಖಕರು

ಇದನ್ನೂ ಓದಿ- ಆತಂಕಕಾರಿಯೂ, ಶಿಕ್ಷೆಯಂತೆಯೂ ಆಗಿರುವ ಶಿಕ್ಷಣ ವ್ಯವಸ್ಥೆ

More articles

Latest article

Most read