ಲೇಖಕಿ ಹಾಗೂ ಸಾಮಾಜಿಕ ಮಾನವಶಾಸ್ತ್ರಜ್ಞೆ ಎ.ಆರ್. ವಾಸವಿ ಅವರು ಬರೆದಿರುವ ಈ ಲೇಖನವು ಭಾರತದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಎದುರಿಸುತ್ತಿರುವ ತೀವ್ರ ಬಿಕ್ಕಟ್ಟುಗಳು ಹಾಗೂ ಅಸಮಾನತೆಗಳನ್ನು ಆಳವಾಗಿ ವಿಶ್ಲೇಷಿಸುತ್ತದೆ. ಅವರ ಲೇಖನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಶ್ರೀನಿವಾಸ ಕಾರ್ಕಳ
‘ಶಾಲೆಗಳನ್ನು ಸರಿಪಡಿಸಿʼ (‘ಸ್ಕೂಲ್ ಟೀಕ್ ಕರೋ’) ಕಾರ್ಯಕ್ರಮದ ಮೂಲಕ, ಶಾಲೆಗಳತ್ತ ಗಮನ ಕೇಂದ್ರೀಕರಿಸುವುದರೊಂದಿಗೆ, ಕಾಕ್ರೋಚ್ ಜನತಾ ಪಾರ್ಟಿ (ಸಿ.ಜೆ.ಪಿ) ಯ ಸದಸ್ಯರು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಭೂತ ಕೊರತೆಯನ್ನು ಸರಿಯಾಗಿಯೇ ಗುರುತಿಸಿದ್ದಾರೆ. ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ) ಇವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ತೀವ್ರ ಕೊಳೆತ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆಯಾದರೂ, ಇದು ಬೆಳೆಯುತ್ತಾ ಮತ್ತು ಕಾರ್ಯನಿರ್ವಹಿಸುತ್ತಾ, ಮುಂದೆ, ತಾನು ಸೇವೆ ಸಲ್ಲಿಸಬೇಕಾದ ಉದ್ದೇಶಕ್ಕೇ ಸವಾಲೊಡ್ಡುವ ಒಂದು ಸಂಕೀರ್ಣ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಷ್ಟೇ ಆಗಿದೆ. ಶಿಕ್ಷಣವು ತಲುಪಿರುವ ಈ ಸಂಕೀರ್ಣ ಬಿಕ್ಕಟ್ಟನ್ನು ಪರಿಹರಿಸುವ ಯಾವುದೇ ಪ್ರಯತ್ನವು, ಇಲ್ಲಿನ ಅಸಮಾನ ಮೂಲಭೂತ ರಚನೆಗಳು, ವ್ಯವಸ್ಥಿತ ರಾಜಕೀಯ, ಉದಾ – ವಿವಿಧ ಹಂತದ ಗೇಟ್‌ಕೀಪಿಂಗ್ (ಪ್ರವೇಶ ತಡೆ) ತಂತ್ರಗಳು ಮತ್ತು ಇತ್ತೀಚೆಗೆ ಶಿಕ್ಷಣ ಕ್ಷೇತ್ರಕ್ಕೆ ಹಣಕಾಸು ಬಂಡವಾಳದ ಹರಿವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಇವೆಲ್ಲವೂ ಸೇರಿ, ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಳವಾದ ಅಸಮಾನತೆಯಿಂದ ಕೂಡಿರುವಂತೆ ಮಾಡಿದೆಯಲ್ಲದೆ, ಹೆಚ್ಚಿನ ಯುವಜನರ ಪಾಲಿಗೆ ಒಂದು ಶಿಕ್ಷೆಯ ವ್ಯವಸ್ಥೆಯನ್ನಾಗಿ ಮಾಡಿ, ಅವರ ವಿದ್ಯಾರ್ಥಿ ಜೀವನವನ್ನು ಆತಂಕದ ಸ್ಥಿತಿಯತ್ತ ತಳ್ಳಿದೆ.
ಮೂಲಭೂತ ಹಂತದಲ್ಲಿ, ಅತ್ಯಂತ ಭಿನ್ನವಾಗಿರುವ ಶಾಲಾ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಅವರ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗೆ ತಕ್ಕಂತೆ ಗುರುತಿಸಿ, ಅಲ್ಲೇ ಉಳಿಸುವ ಕೆಲಸ ಮಾಡುತ್ತದೆ. ಒಂದು ‘ವ್ಯವಸ್ಥೆ’ಯಾಗಿ, ಇದು ಶಿಕ್ಷಣದಲ್ಲಿ ಸಮಾನ ಪ್ರವೇಶಾವಕಾಶ ಅಥವಾ ಸಮಾನ ಗುಣಮಟ್ಟ ಇವೆರಡನ್ನೂ ಒದಗಿಸಲು ವಿಫಲವಾಗಿದೆ. ವಿಶೇಷವಾಗಿ, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಆದಿವಾಸಿಗಳಿಗಾಗಿ ಸ್ಥಾಪಿಸಲಾದ, ಕಡಿಮೆ ಅನುದಾನ ಮತ್ತು ಕೆಟ್ಟ ರೀತಿಯ ಆಡಳಿತ ಹೊಂದಿರುವ ಆಶ್ರಮಶಾಲೆಗಳಿಂದ ಹಿಡಿದು, ಮಹಾನಗರಗಳಲ್ಲಿ ಗಣ್ಯರ ಅಗತ್ಯಗಳನ್ನು ಪೂರೈಸುವ, ಅಣಬೆಗಳಂತೆ ಬೆಳೆಯುತ್ತಿರುವ ಇಂಟರ್‌ನ್ಯಾಷನಲ್ ಶಾಲೆಗಳವರೆಗೆ, ಭಾರತದಲ್ಲಿನ ಶಾಲೆಗಳು, ವಿವಿಧ ಗುಣಮಟ್ಟ ಮತ್ತು ಅವಕಾಶಗಳ ವ್ಯಾಪ್ತಿಯನ್ನು ಪ್ರತಿನಿಧಿಸುತ್ತವೆ. ಈ ಎರಡು ತೀವ್ರ ಸ್ವರೂಪದ ಶಾಲೆಗಳ ನಡುವೆ ಪ್ರಾದೇಶಿಕ ರಾಜ್ಯ ಸರ್ಕಾರ ನಡೆಸುವ ಶಾಲೆಗಳು, ವಿವಿಧ ಶಾಲಾ ಮಂಡಳಿಗಳಿಗೆ ಸಂಯೋಜಿತಗೊಂಡ ಖಾಸಗಿ ಶಾಲೆಗಳು ಮತ್ತು ಧಾರ್ಮಿಕ ಸಂಸ್ಥೆಗಳು, ರಕ್ಷಣಾ ಇಲಾಖೆ ಹಾಗೂ ಕೆಲವು ಟ್ರಸ್ಟ್‌ಗಳು ನಡೆಸುವ ವಿಶೇಷ ಶಾಲೆಗಳಿವೆ. ಇವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಗುಣಮಟ್ಟ, ದೃಷ್ಟಿಕೋನ ಮತ್ತು ಪರಿಣಾಮಗಳನ್ನು ಹೊಂದಿರುವ ವಿವಿಧ ಮಂಡಳಿಗಳಿಗೆ (ರಾಜ್ಯ ಮಂಡಳಿಗಳು, ಐಸಿಎಸ್‌ಇ, ಸಿಬಿಎಸ್‌ಇ, ಐಬಿ, ಐಜಿಸಿಇ ಇತ್ಯಾದಿ) ಸಂಯೋಜಿತಗೊಂಡಿವೆ. ಇದರ ಪರಿಣಾಮವಾಗಿ, ವಿದ್ಯಾರ್ಥಿಗಳು ತೀವ್ರ ಸ್ಪರ್ಧೆ, ಅಸಮಾನ ಗುಣಮಟ್ಟ ಮತ್ತು ಅನಿಶ್ಚಿತ ಉದ್ಯೋಗಾವಕಾಶಗಳನ್ನು ಒಳಗೊಂಡಿರುವ ಅತ್ಯಂತ ಭಿನ್ನವಾದ ಶಿಕ್ಷಣದತ್ತ ಹರಿದು ಹಂಚಿಹೋಗುತ್ತಿದ್ದಾರೆ.

ಒಂದು, ʼಸಾಮಾನ್ಯ ಶಾಲಾ ವ್ಯವಸ್ಥೆʼಯನ್ನು ಸ್ಥಾಪಿಸುವಲ್ಲಿ ಪ್ರಭುತ್ವವು (ಸ್ಟೇಟ್) ವಿಫಲವಾಗಿದ್ದು, ಶಿಕ್ಷಣವು ಸಮಾನ ಅವಕಾಶದ ಕ್ಷೇತ್ರವಾಗದೆ, ಜಾತಿ ಮತ್ತು ವರ್ಗ ಆಧಾರಿತ ಆರ್ಥಿಕ ಹಾಗೂ ಸಾಂಸ್ಕೃತಿಕ ಬಂಡವಾಳದ ಇರುವಿಕೆ ಅಥವಾ ಇಲ್ಲದಿರುವಿಕೆಯ ಮೇಲೆಯೇ ರೂಪುಗೊಳ್ಳುವಂತೆ ಮಾಡಿದೆ. ಈ ತುಂಡು ತುಂಡಾದ ಮತ್ತು ಅತ್ಯಂತ ಭಿನ್ನವಾದ ಶಾಲಾ ವ್ಯವಸ್ಥೆಯಲ್ಲಿ ಸಂಭವಿಸಿದ ಅತಿ ದೊಡ್ಡ ನಷ್ಟವೆಂದರೆ, ಸಾಮಾಜಿಕ ಸೌಹಾರ್ದತೆ ಮತ್ತು ಸಹೋದರತೆಯನ್ನು ಬೆಳೆಸಬಲ್ಲ ಸಾಮಾನ್ಯ ಸಂಸ್ಥೆಯಾಗಿ ಹಳ್ಳಿಯ ಸರ್ಕಾರಿ ಶಾಲೆಯು ಹೊರಹೊಮ್ಮುವ ಸಾಧ್ಯತೆ ಇಲ್ಲದಂತಾದುದು. ಕಳೆದ ಎರಡು ದಶಕಗಳಲ್ಲಿ, ವಿಶೇಷವಾಗಿ ಇಂಗ್ಲಿಷ್ ಮಾಧ್ಯಮವೆಂದು ಹೇಳಿಕೊಳ್ಳುವ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿದಿದೆ. ಹಳ್ಳಿಯ ಸರ್ಕಾರಿ ಶಾಲೆಗಳು ಈಗ ಮುಖ್ಯವಾಗಿ ವಂಚಿತ ಮತ್ತು ಕೆಳಹಂತದ ಜಾತಿ ಗುಂಪುಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ, ಇತರರು ತಮ್ಮ ಪೋಷಕರ ಆರ್ಥಿಕ ಪರಿಸ್ಥಿತಿ ಮತ್ತು ಆಕಾಂಕ್ಷೆಗಳಿಗೆ ತಕ್ಕಂತೆ ವಿವಿಧ ಶಾಲೆಗಳಿಗೆ ತೆರಳುತ್ತಿದ್ದಾರೆ.
ಶಿಕ್ಷಣದ ಅವಕಾಶಗಳ ಈ ವಿಘಟನೆಯು, ಸರಿಯಾದ ಯೋಜನೆಯಿಲ್ಲದ ಮತ್ತು ಕಳಪೆಯಾಗಿ ನಿರ್ವಹಿಸಲ್ಪಡುವ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸಿದೆ. ಹೆಚ್ಚಿನ ಬಡ ವಿದ್ಯಾರ್ಥಿಗಳ ಪಾಲಿಗೆ, ಉನ್ನತ ಶಿಕ್ಷಣವು, ಆಯ್ಕೆ, ಪ್ರಸ್ತುತತೆ ಅಥವಾ ಅವರ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ಸಾಕಾರಗೊಳಿಸುವ ಅವಕಾಶಗಳನ್ನು ಕಡಿಮೆ ನೀಡುತ್ತದೆ. ಶಾಲೆಯ ಆನಂತರದ ಶಿಕ್ಷಣವನ್ನು ಆಸಕ್ತಿಗಳು, ಸಾಮರ್ಥ್ಯಗಳು ಮತ್ತು ಕೌಶಲಗಳನ್ನು ವೃದ್ಧಿಸುವ ಹಾಗೂ ಯುವಜನರಿಗೆ ಸೂಕ್ತ ಉದ್ಯೋಗವನ್ನು ಪಡೆಯಲು ನೆರವಾಗುವ ಅವಕಾಶವೆಂದು ಕಲ್ಪಿಸಿಕೊಳ್ಳಲು ವಿಫಲವಾಗಿರುವುದೇ ಹೆಚ್ಚಿನ ಸಂಖ್ಯೆಯ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿರಲು ಕಾರಣವಾಗಿದೆ. ದೂರದೃಷ್ಟಿಯ ಮಟ್ಟಿಗೆ, ಅತ್ಯಂತ ಕೊರತೆಯನ್ನು ಹೊಂದಿರುವ ಶಿಕ್ಷಣ ನೀತಿಗಳಲ್ಲಿ ಒಂದೆಂದರೆ, ‘ಕಮ್ಯುನಿಟಿ ಕಾಲೇಜು’ಗಳನ್ನು (ಸಮುದಾಯ ಕಾಲೇಜುಗಳು) ರೂಪಿಸಲು ಮತ್ತು ಸ್ಥಾಪಿಸಲು ವಿಫಲವಾಗಿರುವುದು. ಇಂತಹ ಕಾಲೇಜುಗಳು ಅತ್ಯಂತ ಅವಕಾಶವಂಚಿತ ಹಿನ್ನೆಲೆಯ ಯುವಜನರ ವೃತ್ತಿಪರ ಆಸಕ್ತಿಗಳನ್ನು ಪೂರೈಸುವುದರ ಜೊತೆಗೆ, ಗ್ರಾಮೀಣ ಹಾಗೂ ಕೃಷಿ ಆರ್ಥಿಕತೆ ಮತ್ತು ಉತ್ಪಾದನಾ ಕ್ಷೇತ್ರಗಳಿಗೆ ಅಗತ್ಯವಿರುವ ವೃತ್ತಿಪರ ಸಾಮರ್ಥ್ಯಗಳನ್ನು ಒದಗಿಸಬಹುದಿತ್ತು.
ಮಣ್ಣಿನ ಪರೀಕ್ಷೆ, ನೀರಾವರಿ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಎಲೆಕ್ಟ್ರಿಕಲ್ ಕೆಲಸಗಳು, ಸ್ಥಳೀಯ ಸಾವಯವ ಕೃಷಿ ಪರಿಕರಗಳ ಉತ್ಪಾದನೆ, ಸ್ಥಳೀಯ ನಿರ್ಮಾಣ, ಪೂರಕ ವೈದ್ಯಕೀಯ (ಮಾನವ ಮತ್ತು ಪಶು ವೈದ್ಯಕೀಯ) ಮತ್ತು ತಾಂತ್ರಿಕ ಸೇವೆಗಳಲ್ಲಿ ಯುವಜನರಿಗೆ ಕೌಶಲ ನೀಡುವ ಕೋರ್ಸ್‌ಗಳು ಇವು ಹೊಸ ವೃತ್ತಿಪರ ಮತ್ತು ಜೀವನೋಪಾಯದ ಅವಕಾಶಗಳಿಗೆ ನೆರವು ನೀಡುವ ಸಾಧ್ಯತೆ ಇತ್ತು. ಬದಲಾಗಿ, ಒಟ್ಟು ದಾಖಲಾತಿ ಅನುಪಾತದ (ಜಿಇಆರ್) ಹೆಚ್ಚಳದ ಅಂತಾರಾಷ್ಟ್ರೀಯ ದತ್ತಾಂಶವನ್ನು ತಲುಪುವ ಯತ್ನದಲ್ಲಿ, ಗ್ರಾಮೀಣ ಆರ್ಥಿಕತೆಗೆ ಅಥವಾ ಕೈಗಾರಿಕಾ ಉತ್ಪಾದನಾ ಅಗತ್ಯಗಳಿಗೆ ಸೂಕ್ತವಲ್ಲದ ಕಾಲೇಜುಗಳು ಮತ್ತು ಸಂಸ್ಥೆಗಳು ಅಣಬೆಗಳಂತೆ ಬೆಳೆದಿವೆ. ಕೆಲವೇ ಕೆಲವು ಐಟಿಐಗಳು ಮತ್ತು ಹೊಸ ಯುವ ಕೌಶಲ ಕಾರ್ಯಕ್ರಮಗಳು ಹುಡುಗರ ಪಾಲಿಗೆ ಯಾಂತ್ರಿಕ ಕೈಗಾರಿಕಾ ಕೆಲಸಗಳತ್ತ ಮತ್ತು ಹುಡುಗಿಯರ ಪಾಲಿಗೆ ಬ್ಯೂಟಿ ಪಾರ್ಲರ್ ತರಬೇತಿಯತ್ತ ಮಾತ್ರ ಗಮನ ಹರಿಸುತ್ತವೆ; ಗ್ರಾಮೀಣ ಆರ್ಥಿಕತೆಗೆ ಸೇವೆ ಸಲ್ಲಿಸುವ ಸಾಮರ್ಥ್ಯವಿರುವ ವ್ಯಾಪಕ ಜ್ಞಾನ ವ್ಯವಸ್ಥೆಗಳು ಮತ್ತು ಕೌಶಲಗಳನ್ನು ಅಲಕ್ಷಿಸುತ್ತವೆ. ಇದರ ಮುಂದುವರಿಕೆಯಾಗಿ, ತರಬೇತಿ, ಪ್ರಮಾಣೀಕರಣ ಮತ್ತು ಕುಂಠಿತಗೊಂಡ ಉತ್ಪಾದನಾ ಆರ್ಥಿಕತೆಯ ನಡುವಿನ ಈ ಅಸಮತೋಲನದಿಂದಾಗಿ, ನಿರುದ್ಯೋಗಿ ಮತ್ತು ಸಂಕಷ್ಟದಲ್ಲಿರುವ ಯುವಕರ ದೊಡ್ಡ ಪಡೆಯು ಈಗ ನಗರಗಳಿಂದ ಸಣ್ಣ ನಗರಗಳಿಗೂ (ಮಫ್ಸಿಲ್ ಪ್ರದೇಶಗಳು) ತನ್ನ ಅಪಾಯಕಾರಿ ರೆಕ್ಕೆಗಳನ್ನು ಚಾಚಿ ಬೆಳೆಯುತ್ತಿರುವ ‘ಗಿಗ್ ಎಕಾನಮಿ’ (ತಾತ್ಕಾಲಿಕ/ಒಪ್ಪಂದ ಉದ್ಯೋಗ ಕ್ಷೇತ್ರ) ಯಲ್ಲಿದ್ದಾರೆ.
ವಿವಿಧ ಪ್ರವೇಶ ಪರೀಕ್ಷೆಗಳ (CAT, NEET, JEE, CLAT ಇತ್ಯಾದಿ) ಉದ್ದೇಶವು, ವೃತ್ತಿಪರ (ಕಾನೂನು, ವೈದ್ಯಕೀಯ, ನಿರ್ವಹಣೆ, ಎಂಜಿನಿಯರಿಂಗ್ ಇತ್ಯಾದಿ) ಶಿಕ್ಷಣಕ್ಕೆ ಮೆರಿಟ್ ಆಧಾರಿತವಾಗಿ ಪ್ರವೇಶ ಆಗುವಂತೆ ನೋಡಿಕೊಳ್ಳುವುದಾಗಿತ್ತು. ಆದಾಗ್ಯೂ, ವಾಸ್ತವದಲ್ಲಿ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಗೈ ಸ್ಟ್ಯಾಂಡಿಂಗ್ ಅವರು ‘ನೆರಳು ಶಿಕ್ಷಣ’ (‘shadow schooling’) ವ್ಯವಸ್ಥೆ ಎಂದು ಹೆಸರಿಸಿದ ವ್ಯವಸ್ಥೆಯು ಇಲ್ಲಿ ಬೆಳೆದಿದೆ. ಇದು ಭಾರಿ ಶುಲ್ಕಗಳು ಮತ್ತು ವೆಚ್ಚಗಳಿಗೆ ಪ್ರತಿಯಾಗಿ, ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅನುಕೂಲ ಮಾಡುವ ಏಜೆನ್ಸಿಗಳು ಮತ್ತು ಯೋಜನೆಗಳ ವಿಶಾಲ ಜಾಲವಾಗಿದೆ. ಭಾರತದಲ್ಲಿ, ಟ್ಯೂಷನ್ ಸೆಂಟರ್‌ಗಳು ಮಾತ್ರವಲ್ಲ, ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆಗಳು ಮತ್ತು ಅವುಗಳ ಜಾಲಗಳ ಬೆಳವಣಿಗೆಯು ಇದಕ್ಕೆ ಸಾಕ್ಷಿಯಾಗಿದೆ. ಶಿಕ್ಷಣದ ಮೂಲ ಕಲ್ಪನೆಯೆಂದರೆ, ಮನೋಧರ್ಮವನ್ನು ವಿಸ್ತರಿಸುವುದು ಮತ್ತು ಸಾಮರ್ಥ್ಯಗಳನ್ನು ವೃದ್ಧಿಸುವುದು. ತಮ್ಮ ಕಾರ್ಯನಿರ್ವಹಣೆ ಮತ್ತು ದೃಷ್ಟಿಕೋನದಲ್ಲಿ, ಈ ಪರೀಕ್ಷಾ ತರಬೇತಿ ಕೇಂದ್ರಗಳು ಆ ಕಲ್ಪನೆಯನ್ನೇ ವಿರೂಪಗೊಳಿಸುವುದು ಮಾತ್ರವಲ್ಲ, ಈ ತರಬೇತಿ ಪ್ರಕ್ರಿಯೆಯನ್ನು ಹಣ ವೆಚ್ಚ ಮಾಡಲು ಇರುವ ತಾಕತ್ತು ಮತ್ತು ಪರೀಕ್ಷಾ ತಯಾರಿಯ ಪ್ರಕ್ರಿಯೆಯ ನರಕಯಾತನೆಯನ್ನು ಸಹಿಸಿಕೊಳ್ಳುವ ವಿದ್ಯಾರ್ಥಿಯ ಸಾಮರ್ಥ್ಯವೇ ಪ್ರವೇಶವನ್ನು ನಿರ್ಧರಿಸುತ್ತದೆ ಎಂಬ ಕಲ್ಪನೆಯನ್ನು ಬಲಪಡಿಸುತ್ತವೆ.
ಗರಿಷ್ಠ ಫಲಿತಾಂಶದ ಸಾಧನೆಗಾಗಿ ಪರಸ್ಪರ ಪೈಪೋಟಿಗಿಳಿದಿರುವ ಈ ‘ನೆರಳು ಶಿಕ್ಷಣ’ ಕೇಂದ್ರಗಳು ಈಗ ವಿದ್ಯಾರ್ಥಿಗಳನ್ನು ಪ್ರಶ್ನಾರ್ಹ ರೀತಿಯಲ್ಲಿ ನಡೆಸಿಕೊಳ್ಳುವ ತಾಣಗಳಾಗಿವೆ. ಅಲ್ಲದೆ, ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಕಾರಣವಾಗುವ ಪ್ರಕ್ರಿಯೆಗಳೊಂದಿಗೆ ಅವು ಸಂಪರ್ಕವನ್ನು ಹೊಂದಿವೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬೆಟ್ಟು ಮಾಡಿದಂತೆ, ನೀಟ್ ವ್ಯವಸ್ಥೆಯು ಸಮರ್ಥ, ಪಾರದರ್ಶಕ ಅಥವಾ ಅತ್ಯಂತ ಮೆರಿಟ್ ಹೊಂದಿರುವವರನ್ನು ಆಯ್ಕೆ ಮಾಡುವ ಭರವಸೆ ನೀಡುತ್ತಿಲ್ಲ. ಒಂದು ಕೇಂದ್ರೀಕೃತ ಮತ್ತು ಶಕ್ತಿಶಾಲಿ ಸಂಸ್ಥೆಯಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA), ಪರಸ್ಪರ ಸಂಬಂಧ ಹೊಂದಿರುವ ಭ್ರಷ್ಟಾಚಾರ ಮತ್ತು ಪ್ರಾಮಾಣಿಕತೆಯ ಮೂಲಭೂತ ತತ್ವಗಳ ಸವೆತ ಮೊದಲಾದವುಗಳ ಮೂಲವಾಗಿಬಿಟ್ಟಿದೆ. ಆಡಳಿತಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಂಸ್ಕೃತಿಯ ದೃಷ್ಟಿಯಿಂದ, ದೇಶದಲ್ಲಿ ನಡೆಯುತ್ತಿರುವ ಕುಸಿತಕ್ಕೆ ಶಿಕ್ಷಣ ಕ್ಷೇತ್ರವು ಎಷ್ಟರಮಟ್ಟಿಗೆ ಬಲಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಇಂತಹ ಆತಂಕಕಾರಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವೇನಿದೆ? ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ದತ್ತಾಂಶವು ತೋರಿಸುವಂತೆ 2014-2024 ರ ನಡುವೆ 1,23,918 (ಅಂದಾಜು 1.23 ಲಕ್ಷ) ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷೆಯಲ್ಲಿನ ವೈಫಲ್ಯ ಅಥವಾ ಕುಟುಂಬದ ಸಮಸ್ಯೆಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ.
ಇಂತಹ ಪ್ರವೃತ್ತಿ ಮತ್ತು ಯುವಜನರ ಆತಂಕಕಾರಿ ಪರಿಸ್ಥಿತಿಯ ಹೊರತಾಗಿಯೂ, ʼರಾಷ್ಟ್ರೀಯ ಶಿಕ್ಷಣ ನೀತಿ (NEP), 2020ʼ ರಲ್ಲಿ ರೂಪಿಸಲಾದ ಸಂರಚನೆಗಳು ಮತ್ತು ನೀತಿಗಳನ್ನು ಸಂಭ್ರಮಿಸುವ ಮತ್ತು ಬಲಪಡಿಸುವ ಕೆಲಸವನ್ನು ಸರಕಾರವು ಮುಂದುವರಿಸಿಯೇ ಇದೆ. ಆರಂಭಿಕ ಶಿಕ್ಷಣವು ಮಾತೃಭಾಷೆಯನ್ನು ಆಧರಿಸಿರಬೇಕು ಎಂಬ ಅದರ ಧನಾತ್ಮಕ ಶಿಫಾರಸನ್ನು ಹೊರತು ಪಡಿಸಿದರೆ, ʼರಾಷ್ಟ್ರೀಯ ಶಿಕ್ಷಣ ನೀತಿʼಯು ಶಿಕ್ಷಣದ ಖಾಸಗೀಕರಣ ಮತ್ತು ಅದರ ಆಡಳಿತದ ಕೇಂದ್ರೀಕರಣವನ್ನು ಉತ್ತೇಜಿಸುವುದರತ್ತಲೇ ಹೆಚ್ಚಿನ ಗಮನ ಕೇಂದ್ರೀಕರಿಸುವ ದಸ್ತಾವೇಜಾಗಿದೆ. ತಮ್ಮದೇ ಆದ ಶಿಕ್ಷಣ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಮತ್ತು ನಿರ್ವಹಿಸಲು ರಾಜ್ಯಗಳ ಒಕ್ಕೂಟ ಹೊಂದಿರುವ ಹಕ್ಕುಗಳನ್ನು ʼರಾಷ್ಟ್ರೀಯ ಶಿಕ್ಷಣ ನೀತಿʼ ಯು ಕುಂಠಿತಗೊಳಿಸುತ್ತದೆ. ಪ್ರಶ್ನಾರ್ಹ ‘ಭಾರತೀಯ’ ಜ್ಞಾನ ವ್ಯವಸ್ಥೆಗಳನ್ನು ಉತ್ತೇಜಿಸುವ ಶಿಫಾರಸುಗಳ ಮೂಲಕ ಶಿಕ್ಷಣದ ಗುಣಮಟ್ಟವನ್ನು ದುರ್ಬಲಗೊಳಿಸುತ್ತದೆ. ಮಾತ್ರವಲ್ಲ, ಶಿಕ್ಷಣದ ವಾಣಿಜ್ಯೀಕರಣವನ್ನು ಪ್ರೋತ್ಸಾಹಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ʼರಾಷ್ಟ್ರೀಯ ಶಿಕ್ಷಣ ನೀತಿʼ ಯನ್ನು ಅನುಷ್ಠಾನಗೊಳಿಸುವಲ್ಲಿ, ಕೋರ್ಸ್‌ಗಳ ರಚನೆಗಳು (ಪದವಿಯು ಮೂರು ಅಥವಾ ನಾಲ್ಕು ವರ್ಷಗಳೇ?), ಪಠ್ಯಕ್ರಮದ ವಿಷಯ, ಪ್ರವೇಶ ಪ್ರಕ್ರಿಯೆಗಳು, ಅಧ್ಯಾಪಕರು ಮತ್ತು ಆಡಳಿತಾಧಿಕಾರಿಗಳ ನೇಮಕಾತಿ ಮತ್ತು ಸಂಸ್ಥೆಗಳ ಸಮಗ್ರ ಆಡಳಿತ ಇತ್ಯಾದಿ ವಿಷಯಗಳಲ್ಲಿನ ಬಗೆಹರಿಯದ ಅನೇಕ ಗೊಂದಲಗಳನ್ನು ನಾವು ನೋಡಿಯೇ ಇದ್ದೇವೆ.
ಶಿಕ್ಷಣದಲ್ಲಿ ಹಣಕಾಸು ಬಂಡವಾಳಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಇದು, ಖಾಸಗಿ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನೀಡಲಾದ ಪ್ರೋತ್ಸಾಹ ಮತ್ತು ಬೆಂಬಲದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಿಮವಾಗಿ ಇದು ಮತ್ತೇನಲ್ಲ, ಎಲ್ಲರಿಗೂ ಶಿಕ್ಷಣವನ್ನು ಒಂದು ಹಕ್ಕಾಗಿ ಒದಗಿಸುವ ಜವಾಬ್ದಾರಿಯಿಂದ ಪ್ರಭುತ್ವವು ಕಳಚಿಕೊಳ್ಳುವುದೇ ಆಗಿದೆ. ಕಾರ್ಪೊರೇಟ್ ಸಮೂಹಗಳು ಮಾತ್ರವಲ್ಲ, ನಿರ್ಮಾಣ ಸಂಸ್ಥೆಗಳು, ದಾನಿ-ಬಂಡವಾಳಶಾಹಿಗಳು, ಪ್ರಾದೇಶಿಕ ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಸಾಹಸೋದ್ಯಮ ಬಂಡವಾಳಶಾಹಿಗಳನ್ನು ಒಳಗೊಂಡ ವಿವಿಧ ಆಟಗಾರರು ಮತ್ತು ಪಾಲುದಾರರಿಂದ ಪ್ರವರ್ತಿತಗೊಂಡು ನಿರ್ಮಿಸಲ್ಪಟ್ಟ ವಿಶ್ವವಿದ್ಯಾಲಯವು, ವಿಭಿನ್ನ ಹಿನ್ನೆಲೆಯ ಜನರನ್ನು ಒಟ್ಟುಗೂಡಿಸುವ ಸಾಮಾಜಿಕ ವೇದಿಕೆಯಾಗಿ ಉಳಿದಿಲ್ಲ.
ಎಲ್ಲರನ್ನೂ ಒಳಗೊಳ್ಳದ, ಫೈವ್-ಸ್ಟಾರ್ ಮಾದರಿಯ, ಮುಚ್ಚಿಕೊಂಡಂತಹ ಖಾಸಗಿ ಶಾಲಾ ಮತ್ತು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು ಎಲ್ಲೆಲ್ಲೂ ಹೊರಹೊಮ್ಮಿ, ಅವುಗಳನ್ನು ಆರ್ಥಿಕ ಸಾಮರ್ಥ್ಯ ಇರುವವರಿಗೆ ಮಾತ್ರ ಪೂರಕವಾಗುವಂತೆ ಮಾಡುವುದರ ಜೊತೆಗೆ, ಅವು ಜಾತಿ ಸಮಾಜದ ಜನ್ಮಜಾತ ಬಹಿಷ್ಕಾರವನ್ನು ಮತ್ತು ಹೆಚ್ಚಿನ ಶುಲ್ಕಗಳ ಕಾರಣವಾದ ಆರ್ಥಿಕ ಬಹಿಷ್ಕಾರವನ್ನು ಬಲಪಡಿಸುತ್ತವೆ. ಖಾಸಗಿ ವಿಶ್ವವಿದ್ಯಾಲಯಗಳು ವಿಜೃಂಭಿಸುತ್ತಿರುವ ಹೊತ್ತಿನಲ್ಲಿಯೇ, ಹೆಚ್ಚಿನ ರಾಜ್ಯ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆ ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಕುಸಿತ ಕಂಡುಬರುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣ- ತಾತ್ಸಾರದಿಂದ ಕೂಡಿದ ರಾಜಕೀಯ ವ್ಯವಸ್ಥೆ, ಕಳಪೆ ಆಡಳಿತ ಮತ್ತು ತೀರಾ ಕಡಿಮೆ ಅನುದಾನಗಳು. ಎರಡು ದಶಕಗಳ ಹಿಂದಿನವರೆಗೆ ಸಾಧ್ಯವಿದ್ದ, ಅಂದರೆ ಅಸಮತೋಲಿತ ಶಾಲಾ ಶಿಕ್ಷಣ ವ್ಯವಸ್ಥೆಯ ಅನನುಕೂಲಗಳನ್ನು ಸರಿಪಡಿಸಲು ಸಾರ್ವಜನಿಕ ವಿಶ್ವವಿದ್ಯಾಲಯಗಳು ಹೊಂದಿದ್ದ ಸೀಮಿತ ಅವಕಾಶಗಳು ಈಗ ನಷ್ಟವಾಗಿ ಹೋಗಿವೆ. ಈಗ ವಿಶ್ವವಿದ್ಯಾಲಯಗಳು ತೀವ್ರ ಸ್ವರೂಪದಲ್ಲಿ ಭಿನ್ನತೆಯಿಂದ ಕೂಡಿದ ಶಾಲಾ ವ್ಯವಸ್ಥೆಯಾಗಿರುವುದೇ ಇದಕ್ಕೆ ಕಾರಣ,
ಕೇಂದ್ರೀಕರಣ, ರಾಜಕೀಯ ಹಸ್ತಕ್ಷೇಪ, ವಾಣಿಜ್ಯೀಕರಣ ಮತ್ತು ಬಜೆಟ್ ನಿರ್ಲಕ್ಷ್ಯ ಮೊದಲಾದವು ಕಳೆದ ಎರಡು ದಶಕಗಳಲ್ಲಿ ಶಿಕ್ಷಣದ ಗುಣಮಟ್ಟದಲ್ಲಿ ನಿರಂತರ ಕುಸಿತಕ್ಕೆ ಕಾರಣವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ, ಉನ್ನತ ಶಿಕ್ಷಣದ ಅನೇಕ ಸಮರ್ಥ ಮತ್ತು ಕಾರ್ಯನಿರತ ಸಂಸ್ಥೆಗಳು ನಶಿಸುತ್ತಿರುವುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಒಂದೊಮ್ಮೆ ಶ್ರೇಷ್ಠತೆಯ ಕೇಂದ್ರಗಳಾಗಿದ್ದ ಶಿಕ್ಷಣ ಸಂಸ್ಥೆಗಳು (ಉದಾಹರಣೆಗೆ- ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್) ಸಹ ಈಗ ರಾಜಕೀಯ ಒತ್ತಡಕ್ಕೆ ಒಳಗಾಗಿವೆ. ಕುಲಪತಿಗಳು, ನಿರ್ದೇಶಕರು ಮತ್ತು ಅಧ್ಯಾಪಕರ ನೇಮಕಾತಿಯನ್ನು ‘ನಾಗ್‌ಪುರ ನೋಟ್’ ಆಧಾರದ ಮೇಲೆ ಮಾಡಲಾಗುತ್ತಿದೆ. ಅಂದರೆ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆಯಾಗುತ್ತದೆ. ಜೆ ಎನ್ ಯು ವಿನ ಕತ್ತು ಹಿಸುಕಿದ್ದು, ದೆಹಲಿ ವಿಶ್ವವಿದ್ಯಾಲಯದ ಕುಸಿತ, ಜಾದವ್‌ಪುರ ವಿಶ್ವವಿದ್ಯಾಲಯದ ವಶಪಡಿಸಿಕೊಳ್ಳುವಿಕೆ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ನ ವಿರೂಪಗಳು ಮತ್ತು ಹೆಚ್ಚಿನ ರಾಜ್ಯ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರಶ್ನಾರ್ಹ ಗುಣಮಟ್ಟ ಇವು ಉನ್ನತ ಶಿಕ್ಷಣದ ವಿನಾಶಕ್ಕೆ ಸಾಕ್ಷಿಯಾಗಿದೆ.
ʼeducereʼ ಅಥವಾ ‘ಸಮರ್ಥಗೊಳಿಸುವಿಕೆ’ ಇದು ಶಿಕ್ಷಣದ ಮೂಲಭೂತ ಗುರಿ. ದಶಕಗಳ ಕಾಲ ಈ ಗುರಿಯ ಬಗ್ಗೆ ತೋರಿದ ನಿರ್ಲಕ್ಷ್ಯ ಮತ್ತು ತಾರತಮ್ಯ, ಹಾಗೆಯೇ ಪ್ರಸ್ತುತ ಶಿಕ್ಷಣವನ್ನು ಹಣಕಾಸಿನ ಹೂಡಿಕೆಯ ಭಾಗವನ್ನಾಗಿ ಮಾಡುವ ದೃಷ್ಟಿಕೋನ ಇವೆಲ್ಲ ಜತೆಸೇರಿಕೊಂಡು, ʼಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಿʼ ಎಂಬ ಒಂದು ಸಣ್ಣ ಬೇಡಿಕೆಯನ್ನು ಆಗ್ರಹಿಸಲೂ ವಿದ್ಯಾರ್ಥಿಗಳು ಪ್ರಭುತ್ವ-ಆಧಾರಿತ ತೀವ್ರ ಹಿಂಸೆಯನ್ನು ಎದುರಿಸಬೇಕಾದ ಸಂಕಷ್ಟದ ಕ್ಷಣಕ್ಕೆ ನಮ್ಮನ್ನು ತಂದು ನಿಲ್ಲಿಸಿದೆ. ಇಂತಹ ಆಗ್ರಹವು ಶಿಕ್ಷಣದ ಮೂಲಭೂತ ರಚನೆಗಳು, ದೃಷ್ಟಿಕೋನ, ಪ್ರಕ್ರಿಯೆಗಳು, ಆಡಳಿತ ಮತ್ತು ಪ್ರಭಾವದ ಗಂಭೀರ ಪರಾಮರ್ಶೆಯನ್ನು ಒಳಗೊಂಡಿರಬೇಕು. ಶಿಕ್ಷೆಯ ರೂಪವನ್ನು ಪಡೆದುಕೊಂಡಿರುವ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಗೆ ಕರೆ ನೀಡುವುದು ಮೊದಲ ಹೆಜ್ಜೆಯಾಗಿದ್ದರೆ, ಹೆಚ್ಚಿನ ಬಜೆಟ್ ಹಂಚಿಕೆ ಮತ್ತು ಎಲ್ಲಾ ಯುವಕರಿಗೆ ಸಮಾನ ಶಿಕ್ಷಣ ಅವಕಾಶ ಮತ್ತು ‘ಬದುಕುವ ಅವಕಾಶ’ವನ್ನು ನೀಡುವ ಹೊಸ ನೀತಿಗಳನ್ನು ಆಗ್ರಹಿಸುವುದು ಅತ್ಯಗತ್ಯವಾಗಿದೆ. ಶಿಕ್ಷಣವನ್ನು ಸಮಾನ ಅಡಿಪಾಯದಲ್ಲಿ ಇರಿಸದಿದ್ದರೆ, ಶಿಕ್ಷಣವು ಸಾಮಾಜಿಕ ಸಮಾನತೆಯನ್ನು ತರುವ ಸಾಧನವಾಗುತ್ತದೆ ಎಂದು ನಾವು ನಿರೀಕ್ಷಿಸಲಾಗದು. ಶಿಕ್ಷಣದ ಪ್ರಸ್ತುತ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಅದನ್ನು ಆಯ್ದ ಜ್ಞಾನಶಿಸ್ತುಗಳಲ್ಲಿ ಉದ್ಯೋಗಕ್ಕಾಗಿ ಮಾತ್ರವಲ್ಲ, ಹೊಸ ಸಮಾಜಗಳಿಗೆ ತಯಾರುಗೊಳ್ಳುವ ಭಾಗವಾಗಿ ಮರುಕಲ್ಪಿಸಿಕೊಳ್ಳುವ ಸಮಯ ಇದಾಗಿದೆ. ಅಂತಹ ಸಮಾಜಗಳಲ್ಲಿ ಸಾಮಾಜಿಕ ಸಹಬಾಳ್ವೆ, ಬಹು-ಜ್ಞಾನ (pluri-knowledge), ಪ್ರಜಾಪ್ರಭುತ್ವ ಮತ್ತು ವೇಗವಾಗಿ ಮರು-ರಚನೆಯಾಗುತ್ತಿರುವ ಜಾಗತಿಕ ವ್ಯವಸ್ಥೆಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯಗಳು ಅಥವಾ ಸ್ಥಿತಿಸ್ಥಾಪಕತ್ವ (elasticity) ಗಳು ಪ್ರಮುಖ ಅರ್ಹತೆಗಳಾಗಿವೆ.
ಇಂಗ್ಲಿಷ್ : ಎ.ಆರ್. ವಾಸವಿ
ಕನ್ನಡಕ್ಕೆ : ಶ್ರೀನಿವಾಸ ಕಾರ್ಕಳ
ಎ ಆರ್ ವಾಸವಿಯವರು ಸಾಮಾಜಿಕ ಮಾನವಶಾಸ್ತ್ರಜ್ಞರಾಗಿದ್ದು, ಅವರ ಸಂಶೋಧನಾ ಆಸಕ್ತಿಗಳು ಪರ್ಯಾಯ ಶಿಕ್ಷಣ, ಗ್ರಾಮೀಣ ಮತ್ತು ಕೃಷಿ ಅಧ್ಯಯನಗಳು, ಶಿಕ್ಷಣದ ಸಮಾಜಶಾಸ್ತ್ರ, ಭಾರತದ ಸಮಾಜಶಾಸ್ತ್ರ ಮತ್ತು ಸಮಕಾಲೀನ ಸಾಮಾಜಿಕ ಸಿದ್ಧಾಂತಗಳನ್ನು ಒಳಗೊಂಡಿವೆ. ಶಿಕ್ಷಣ, ಪರಿಸರ, ಪ್ರಜಾಪ್ರಭುತ್ವ ಮತ್ತು ಸಮಾಜಕ್ಕೆ ಪರ್ಯಾಯ ವಿಧಾನಗಳನ್ನು ಉತ್ತೇಜಿಸುವ ‘ಪುನರ್ಚಿತ್’ ಸಂಘಟನೆಯ ಸಮಗ್ರ ಕಲಿಕಾ ಕಾರ್ಯಕ್ರಮದ (Integrated Learning Program) ನಿರ್ದೇಶಕರಾಗಿದ್ದಾರೆ.


