ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಗಜಪಯಣಕ್ಕೆ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಹಳ್ಳಿಯಲ್ಲಿ ಮೊದಲ ಗಜಪಡೆಯಲ್ಲಿನ 9 ಆನೆಗಳ ಪ್ರಯಾಣ ಆರಂಭವಾಗಿದೆ.
ವೀರನಹೊಸಹಳ್ಳಿಯಲ್ಲಿ ಬೆಳಗ್ಗೆ 10ರಿಂದ 10:28ರ ಶುಭ ತುಲಾ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದರು.
ಬಳಿಕ 9 ದಸರಾ ಆನೆಗಳು ಲಾರಿ ಮೂಲಕ ಮೈಸೂರಿನ ಅರಮನೆ ಕಡೆ ಹೊರಟಿವೆ. ಎರಡು ದಿನಗಳ ಕಾಲ ಮೈಸೂರು ನಗರದ ಅರಣ್ಯ ಭವನದಲ್ಲಿದ್ದು, ಆಗಸ್ಟ್ 28ರಂದು ಅರಮನೆ ಆವರಣಕ್ಕೆ ಪ್ರವೇಶಿಸಲಿದೆ.
ಮೊದಲ ತಂಡದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ ಹಾಗೂ ಹೆಣ್ಣು ಆನೆಗಳಾದ ಲಕ್ಷ್ಮೀ ಮತ್ತು ಕಾವೇರಿ ಸೇರಿ 9 ಆನೆಗಳಿವೆ.
ಅಭಿಮನ್ಯುವಿಗೆ ಆತ್ಮೀಯ ಬೀಳ್ಕೊಡುಗೆ
6 ಬಾರಿ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿರ್ವಹಿಸಿ ಇದೀಗ ನಿವೃತ್ತಿ ಆಗುತ್ತಿರುವ ಕ್ಯಾಪ್ಟನ್ ಅಭಿಮನ್ಯುವಿಗೆ ಗಜಪಯಣದಲ್ಲಿ ಗೌರವಪೂರ್ವಕ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಳೆದ ಆರು ವರ್ಷಗಳಿಂದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ ಅಭಿಮನ್ಯುವಿನ ಗಾಂಭೀರ್ಯ, ಶಾಂತ ಸ್ವಭಾವ, ಶಿಸ್ತು ಹಾಗೂ ನಿಯಂತ್ರಿತ ನಡಿಗೆ ಮೈಸೂರು ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದೆ.
60 ವರ್ಷ ತಲುಪಿರುವ ಹಿನ್ನೆಲೆಯಲ್ಲಿ, ಅನ್ವಯವಾಗುವ ಸರ್ಕಾರದ ಮಾರ್ಗಸೂಚಿಗಳು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನಗಳನ್ವಯ ಅಭಿಮನ್ಯುವನ್ನು ಸಕ್ರಿಯ ದಸರಾ ಕರ್ತವ್ಯಗಳಿಂದ ಗೌರವಪೂರ್ವಕವಾಗಿ ನಿವೃತ್ತಿಗೊಳಿಸಲಾಗುತ್ತಿದೆ.
ಅಭಿಮನ್ಯುವಿನ ವಿಶಿಷ್ಟ ಹಾಗೂ ಅಮೂಲ್ಯ ಸೇವೆಯನ್ನು ಗುರುತಿಸಿ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮೈಸೂರು ದಸರಾ ಮಹೋತ್ಸವ ಹಾಗೂ ಅರಣ್ಯ ಇಲಾಖೆಗೆ ಅಭಿಮನ್ಯು ಸಲ್ಲಿಸಿರುವ ವಿಶಿಷ್ಟ ಮತ್ತು ಅಮೂಲ್ಯ ಸೇವೆಗಾಗಿ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ.
ಕರ್ನಾಟಕದ ಜನತೆಯಲ್ಲಿ ಅಭಿಮನ್ಯು ಹೊಂದಿರುವ ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವವನ್ನು ಪರಿಗಣಿಸಿ, 2026ರ ಗಜಪಯಣ ಕಾರ್ಯಕ್ರಮದಲ್ಲಿ ಅಭಿಮನ್ಯು ಆನೆ ವಿಶೇಷವಾಗಿ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಆನೆಗೆ ಔಪಚಾರಿಕ ಗೌರವ ಸಲ್ಲಿಸಿ ಗೌರವಪೂರ್ವಕವಾಗಿ ಬೀಳ್ಕೊಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

