ಬೆಂಗಳೂರು: ಕೆಪಿಎಸ್ಸಿ ಪರೀಕ್ಷಾ ಅಕ್ರಮದ ಕುರಿತು ಇಡಿ ದಾಳಿ ನಡೆದ ಬೆನ್ನಲ್ಲೇ, ರಾಜ್ಯದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬೆಂಗಳೂರು ವಿಮಾನ ನಿಲ್ದಾಣದಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಇಡೀ ದಿನ ಸುದ್ದಿ ಹರಿದಾಡಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಐಎಎಸ್ ಅಧಿಕಾರಿಯ ಸುಳಿವು ಪತ್ತೆಯಾಗಿದ್ದು, ಈ ಕುರಿತು ಸ್ವತಃ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ” ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿಲ್ಲ. ಅವರ ತಂದೆಗೆ ಅನಾರೋಗ್ಯ ಹಿನ್ನೆಲೆಉತ್ತರ ಪ್ರದೇಶದ ಅವರ ಊರಿಗೆ ಹೋಗಿದ್ದು, ಅವರ ಮೊಬೈಲ್ ಆಫ್ ಆಗಿದ್ದಕ್ಕೆ ಮಿಸ್ ಕಮ್ಯುನಿಕೇಷನ್ ಆಗಿದೆ. ನಿನ್ನೆ (ಆಗಸ್ಟ್ 21) ಹಬ್ಬ ಇತ್ತು, ಮೇಲಧಿಕಾರಿಗಳಿಗೆ ತಿಳಿಸಿ ಹೋಗಿದ್ದಾರೆ. ಖುದ್ದು ನಾನೇ ಮಾತಾಡಿದ್ದೀನಿ, 2 ದಿನಗಳ ಬಳಿಕ ವಾಪಸ್ ಬರುತ್ತೇನೆ ಎಂದು ತಿಳಿಸಿದ್ದಾರೆ. ಐಟಿ, ಇಡಿ ಭಯಕ್ಕೆ ಹೋಗಿದ್ದಾರೆ ಎಂಬುದೆಲ್ಲಾ ಸುಳ್ಳು ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

