ಬೆಂಗಳೂರು : ದೇಶದಾದ್ಯಂತ ಅದರಲ್ಲೂ ಕರ್ನಾಟಕದಂತಹ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕುಗಳು, ಆಸ್ಪತ್ರೆಗಳು ಸಾರ್ವಜನಿಕರಿಗೆ ನೀಡುವ ಮಾಹಿತಿ ಸೂಚನಾ ಫಲಕಗಳು, ಸುತ್ತೋಲೆಗಳು ಹಾಗೂ ಇತರೆ ಸಂವಹನಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುವಾಗ ಭಾಷಾ ಶುದ್ಧತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರವು ಸೂಕ್ತ ನಿರ್ದೇಶನಗಳನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತಂತೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಭಾರತದ ಭಾಷಾ ವೈವಿಧ್ಯವು ದೇಶದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದ್ದು, ಇಲ್ಲಿನ ಪ್ರಾದೇಶಿಕ ಭಾಷೆಗಳು ಕೇವಲ ಸಂವಹನ ಸಾಧನಗಳಾಗಿಲ್ಲ, ಅವು ಆಯಾ ಸಮುದಾಯಗಳ ಸಾಮೂಹಿಕ ಅನನ್ಯತೆಯನ್ನು ಪ್ರತಿನಿಧಿಸುತ್ತವೆ ಎಂದಿದ್ದಾರೆ.
ದೇಶದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ವಿಸ್ತರಣೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳು ತಮ್ಮ ಸಾರ್ವಜನಿಕ ಸಂವಹನದಲ್ಲಿ ಪ್ರಾದೇಶಿಕ ಭಾಷೆಗಳನ್ನು ಬಳಸುತ್ತಿರುವುದು ಸ್ವಾಗತಾರ್ಹ ಎಂದಿರುವ ಬಿಳಿಮಲೆ, ಇಂತಹ ಸಂದರ್ಭಗಳಲ್ಲಿ ಈ ಭಾಷಾಂತರವು ವ್ಯಾಕರಣ, ವಾಕ್ಯ ರಚನೆ ಮತ್ತು ಅರ್ಥದ ದೃಷ್ಟಿಯಿಂದ ಗಂಭೀರ ದೋಷಗಳಿಂದ ಕೂಡಿರುವುದು ಸಾಮಾನ್ಯವಾಗುತ್ತಿರುವುದು ವಿಷಾದನೀಯ ಸಂಗತಿ. ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಈ ರೀತಿಯ ಪ್ರಕರಣವು ಹೆಚ್ಚಾಗಿ ಕಾಣುತ್ತಿದ್ದು, ಇದು ಕನ್ನಡಿಗರಿಗೆಲ್ಲರಿಗೂ ನೋವಿನ ಸಂಗತಿ ಎಂದಿದ್ದಾರೆ.
ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾಂತರ ಸಾಧನಗಳ ಬಳಕೆ ಹೆಚ್ಚುತ್ತಿರುವ ಇಂದಿನ ದಿನಮಾನದಲ್ಲಿ ಈ ವಿಚಾರಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದಿರುವ ಬಿಳಿಮಲೆ, ಎಐ ಭಾಷಾಂತರ ಪ್ರಕ್ರಿಯೆಗೆ ನೆರವಾಗಬಹುದಾದರೂ ಅದಕ್ಕೆ ಪ್ರಾದೇಶಿಕ ಭಾಷೆಗಳ ಸಂಸ್ಕೃತಿ, ಭಾಷಾ ಸೂಕ್ಷ್ಮತೆ ಹಾಗೂ ವ್ಯಾಕರಣದ ವೈಶಿಷ್ಟ್ಯಗಳನ್ನು ಗ್ರಹಿಸಲು ಸಾಧ್ಯವಾಗದ ಕಾರಣ ಈ ರೀತಿಯ ಅನರ್ಥಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದಿದ್ದಾರೆ.
ವೃತ್ತಿಪರ ಅನುವಾದಕರಿಂದ ಭಾಷಾಂತರವನ್ನು ಪರಿಶೀಲಿಸಿ ವ್ಯಾಕರಣಬದ್ಧ ಭಾಷೆಯನ್ನು ಬಳಸುವುದು ಮುಖ್ಯ ಎಂದಿರುವ ಬಿಳಿಮಲೆ, ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ನೀಡುವ ಮಾಹಿತಿ, ಸೂಚನಾ ಫಲಕಗಳು ಹಾಗೂ ಇತರ ಪ್ರಮುಖ ಸಂವಹನಗಳನ್ನು ಅರ್ಹ ಅನುವಾದಕರಿಂದ ಭಾಷಾಂತರಿಸುವುದು, ಸಂಸ್ಥೆಗಳು ಕಾರ್ಯನಿರ್ವಹಿಸುವ ಆಯಾ ರಾಜ್ಯ ಭಾಷೆಯಲ್ಲಿ ಪರಿಣಿತಿ ಹೊಂದಿರುವ ಸಮರ್ಥ ಭಾಷಾ ವೃತ್ತಿಪರರನ್ನು ನೇಮಿಸಿಕೊಳ್ಳುವುದು, ಕಡ್ಡಾಯವಾಗಿ ಇಂತಹ ಮಾಹಿತಿಗಳನ್ನು ಮಾನವ ಅನುವಾದಕರಿಂದ ಪರಿಶೀಲಿಸುವ ವ್ಯವಸ್ಥೆ ರೂಪಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ಮಾಡಬೇಕೆಂದಿರುವ ಬಿಳಿಮಲೆ, ಕಾರ್ಪೊರೇಟ್ ಸಂಸ್ಥೆಗಳು ಪ್ರಾದೇಶಿಕ ಭಾಷೆಗಳನ್ನು ಕೇವಲ ಔಪಚಾರಿಕವಾಗಿ ಬಳಸದೇ ಆಯಾ ರಾಜ್ಯದ ಭಾಷೆ, ಸಂಸ್ಕೃತಿ ಮತ್ತು ಜನರ ಭಾವನೆಗೆ ಗೌರವ ನೀಡುವ ರೀತಿಯಲ್ಲಿ ಜವಾಬ್ದಾರಿಯುತವಾಗಿ ಬಳಸುವಂತಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಜೊತೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳಲ್ಲಿ ಆಂತರಿಕ ಕನ್ನಡ ಘಟಕಗಳನ್ನು ಸ್ಥಾಪಿಸುವುದು ಮತ್ತು ಕನ್ನಡ ಅನುವಾದಕರನ್ನು ನೇಮಿಸಿಕೊಳ್ಳುವುದು ಸೂಕ್ತವೆಂದು ಬಿಳಿಮಲೆ ಸಲಹೆ ನೀಡಿದ್ದಾರೆ.

