ಕುಂದಾಪುರದಲ್ಲಿ ಪತ್ರಕರ್ತನ ಮೇಲೆ ವೈದ್ಯನಿಂದ ಹಲ್ಲೆ: ಭ್ರಷ್ಟಾಚಾರ ವರದಿ ಹಿನ್ನೆಲೆ ಆಕ್ರೋಶ

ಉಡುಪಿ ಆ 21: ಜಿಲ್ಲೆಯ ಕುಂದಾಪುರದಲ್ಲಿ ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಪ್ರಕಟಿಸಿದ್ದ ಪತ್ರಕರ್ತನ ಮೇಲೆ ವೈದ್ಯರೊಬ್ಬರು ಹಲ್ಲೆ ನಡೆಸಿದ ಘಟನೆ ತೀವ್ರ ಖಂಡನೆಗೆ ಗುರಿಯಾಗಿದೆ. ಕನ್ನಡಪ್ರಭ ದಿನಪತ್ರಿಕೆಯ ಕುಂದಾಪುರ ವರದಿಗಾರ ಶ್ರೀಕಾಂತ ಹೆಮ್ಮಾಡಿ ಮೇಲೆ ವೈದ್ಯ ಡಾ. ಮಹೇಂದ್ರ ಶೆಟ್ಟಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

ಆಗಸ್ಟ್ 21ರ ಬೆಳಿಗ್ಗೆ ಕುಂದಾಪುರದ ಖಾಸಗಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಶ್ರೀಕಾಂತ ಹೆಮ್ಮಾಡಿ ಅವರು ತಮ್ಮ ಪತ್ನಿ, ಹೈಕೋರ್ಟ್ ವಕೀಲೆ ಅಫ್ರೀನ್ ಅವರೊಂದಿಗೆ ಹೋಟೆಲ್‌ನಲ್ಲಿದ್ದ ವೇಳೆ ಏಕಾಏಕಿ ಅಲ್ಲಿಗೆ ಬಂದ ವೈದ್ಯರು ವಾಗ್ವಾದ ನಡೆಸಿ, ಬಳಿಕ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಹೋಟೆಲ್‌ನಲ್ಲಿದ್ದವರು ಮಧ್ಯಪ್ರವೇಶಿಸಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ.

ಈ ಘಟನೆಗೆ ಮೂಲ ಕಾರಣ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರದ ಕುರಿತು ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿ ಎನ್ನಲಾಗಿದೆ. “ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಭ್ರಷ್ಟಾಚಾರದ ಕರಿ ನೆರಳು” ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ವರದಿಯಲ್ಲಿ, ಆಸ್ಪತ್ರೆಯಲ್ಲಿನ ಅಕ್ರಮಗಳು ಮತ್ತು ಸಾರ್ವಜನಿಕರಿಂದ ಬಂದ ಆರೋಪಗಳನ್ನು ಶ್ರೀಕಾಂತ ಹೆಮ್ಮಾಡಿ ಬೆಳಕಿಗೆ ತಂದಿದ್ದರು. ವರದಿ ಪ್ರಕಟವಾದ ಬಳಿಕ ಸಂಬಂಧಪಟ್ಟ ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸ್ಆ್ಯಪ್ ಸ್ಟೇಟಸ್ ಮತ್ತು ಸಂದೇಶಗಳ ಮೂಲಕ ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತರು ಮತ್ತು ನಾಗರಿಕರು, ವರದಿಯ ಬಗ್ಗೆ ಆಕ್ಷೇಪವಿದ್ದರೆ ಪತ್ರಿಕೆಗೆ ಸ್ಪಷ್ಟೀಕರಣ ನೀಡುವ ಅವಕಾಶ ವೈದ್ಯರಿಗೆ ಇತ್ತು. ಪತ್ರಕರ್ತರ ಸಂಘ ಅಥವಾ ಕಾನೂನುಬದ್ಧ ಮಾರ್ಗಗಳ ಮೂಲಕ ತಮ್ಮ ಪ್ರತಿರೋಧ ದಾಖಲಿಸಬಹುದಾಗಿತ್ತು. ಆದರೆ ದೈಹಿಕ ಹಲ್ಲೆಗೆ ಮುಂದಾಗಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಪತ್ರಕರ್ತರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸುವ ವೇಳೆ ಅವರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಆರೋಪಿಯ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.

ಈ ಘಟನೆ ಕರಾವಳಿ ಭಾಗದ ಪತ್ರಕರ್ತರಲ್ಲಿ ಆತಂಕ ಮೂಡಿಸಿದ್ದು, ಸತ್ಯವನ್ನು ಬರೆದ ಕಾರಣಕ್ಕೆ ಪತ್ರಕರ್ತರನ್ನು ಬೆದರಿಸುವುದು ಅಥವಾ ಹಲ್ಲೆ ನಡೆಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕೃತ್ಯ ಎಂದು ನಾಗರಿಕ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.

More articles

Latest article

Most read