ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಶೌಚಕ್ಕೆಂದು ರಾತ್ರಿ ವೇಳೆ ಬಯಲಿಗೆ ತೆರಳಿದ್ದ ದಲಿತ ಮಹಿಳೆಯ ಮೇಲೆ ನಡೆದಿರುವ ಅಮಾನವೀಯ ಅತ್ಯಾಚಾರ ಪ್ರಕರಣವನ್ನು ವಿಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ತೀವ್ರವಾಗಿ ಖಂಡಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಮಹಿಳೆಯರು ಅಸುರಕ್ಷಿತ ಪರಿಸ್ಥಿತಿಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಮಹಿಳೆಯರ ಸುರಕ್ಷತೆ, ಗೌರವ ಮತ್ತು ಘನತೆಯನ್ನು ಖಾತ್ರಿಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಪ್ರಕರಣದ ಸಂತ್ರಸ್ತೆ ಹಾಗೂ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು. ಪ್ರಕರಣದ ವಿಚಾರಣೆಯನ್ನು ಫಾಸ್ಟ್‌ಟ್ರ್ಯಾಕ್ ವಿಶೇಷ ನ್ಯಾಯಾಲಯದಲ್ಲಿ ತ್ವರಿತವಾಗಿ ನಡೆಸಿ, ಸಂತ್ರಸ್ತೆಗೆ ಶೀಘ್ರ ನ್ಯಾಯ ದೊರಕುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದೆ.
ಪ್ರಕರಣದ ತನಿಖೆಯು ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ಸಂತ್ರಸ್ತೆ ಹಾಗೂ ಅವರ ಕುಟುಂಬದ ಸುರಕ್ಷತೆಯನ್ನು ಸರ್ಕಾರ ಖಾತ್ರಿಪಡಿಸಬೇಕು ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ಆಗ್ರಹಿಸಿದೆ.
ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

