ಬೆಂಗಳೂರು: ರಾಜ್ಯದಲ್ಲಿ ಆಹಾರ ಸುರಕ್ಷತೆ ಇಲಾಖೆ ನಡೆಸುತ್ತಿರುವ ‘ಆಪರೇಷನ್ ಫುಡ್ ರೈಡ್’ ಮುಂದುವರಿದಿದ್ದು, ಇದೀಗ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳು, ಹೋಟೆಲ್‌ಗಳು ಹಾಗೂ ಸ್ಟಾಲ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರು ಸೇರಿದಂತೆ ರಾಜ್ಯದ 36 ರೈಲು ನಿಲ್ದಾಣಗಳಲ್ಲಿ ಒಟ್ಟು 112 ಆಹಾರ ಸಂಸ್ಥೆಗಳನ್ನು ಪರಿಶೀಲಿಸಲಾಗಿದೆ. ಆಹಾರ ಮಳಿಗೆಗಳಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿರುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ತಪಾಸಣೆ ವೇಳೆ ಜಿಲೇಬಿಯಲ್ಲಿ ಅನುಮತಿಯಿಲ್ಲದ ಹಳದಿ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ. ಖೋವಾ ಪೇಡಾದಲ್ಲೂ ಗುಲಾಬಿ ಬಣ್ಣ ಬಳಸಿರುವುದು ಬೆಳಕಿಗೆ ಬಂದಿದೆ. ಹಾವೇರಿಯಲ್ಲಿ ಅವಧಿ ಮೀರಿದ ಮೊಸರು ಹಾಗೂ ಹಾಲು ಪತ್ತೆಯಾಗಿದೆ.
ಕೆ.ಆರ್. ಪುರಂ ರೈಲು ನಿಲ್ದಾಣದ ಹೋಟೆಲ್‌ವೊಂದರಲ್ಲೂ ಅವ್ಯವಸ್ಥೆ ಕಂಡುಬಂದಿದೆ. ಮೈಸೂರಿನ ರೈಲು ನಿಲ್ದಾಣದ ಹೋಟೆಲ್‌ವೊಂದರಲ್ಲಿ ಪ್ಲಾಸ್ಟಿಕ್ ಕವರ್ ಬಳಸಿ ಇಡ್ಲಿ ತಯಾರಿಸುತ್ತಿರುವುದು ಪತ್ತೆಯಾಗಿದ್ದು, ಅಡುಗೆಮನೆಯಲ್ಲಿ ಅವಧಿ ಮೀರಿದ ಆಹಾರವೂ ಪತ್ತೆಯಾಗಿದೆ. ತರಕಾರಿ ಹಾಗೂ ಈರುಳ್ಳಿಯಲ್ಲಿ ಶಿಲೀಂಧ್ರ ಬೆಳವಣಿಗೆಯಾಗಿರುವುದನ್ನೂ ಅಧಿಕಾರಿಗಳು ಗುರುತಿಸಿದ್ದಾರೆ.
ರೈಲು ನಿಲ್ದಾಣಗಳಷ್ಟೇ ಅಲ್ಲದೆ, ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಗಳಿಗೂ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೊಸಕೋಟೆಯಲ್ಲಿರುವ ಆಹಾರ ಸಂಗ್ರಹಣಾ ಗೋಡೌನ್‌ಗಳಲ್ಲೂ ಪರಿಶೀಲನೆ ನಡೆಸಲಾಗಿದೆ.
ಪಂಚತಾರಾ ಹೋಟೆಲ್‌ಗಳು, ಪಬ್‌ಗಳು, ಫುಡ್ ಔಟ್‌ಲೆಟ್‌ಗಳ ಬಳಿಕ ಇದೀಗ ರೈಲ್ವೆ ನಿಲ್ದಾಣಗಳು ಹಾಗೂ ಆಹಾರ ಸಂಗ್ರಹಣಾ ಕೇಂದ್ರಗಳತ್ತ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ವಿಸ್ತರಿಸಿದ್ದಾರೆ.

