ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ವಿವಾದದ ಬೆನ್ನಲ್ಲೇ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನಲ್ಲಿದ್ದ ಕೈದಿಗಳೊಂದಿಗೆ ಅಶ್ಲೀಲ ವಿಡಿಯೋ ಕಾಲ್ ಹಾಗೂ ಹಣಕಾಸಿನ ವ್ಯವಹಾರ ನಡೆಸಿದ ಆರೋಪ ಮಹಿಳಾ PSI ವಿರುದ್ಧ ಕೇಳಿಬಂದಿದೆ.
ಹಿಂಡಲಗಾ ಜೈಲಿನಲ್ಲಿ ಅಧಿಕಾರಿಯಾಗಿದ್ದ PSI ಜಯಶ್ರೀ ವಿರುದ್ಧ ಕೈದಿ ಸಾಯಿಕುಮಾರ್ ದೂರು ದಾಖಲಿಸಿದ್ದಾನೆ. ಎರಡು ವರ್ಷಗಳ ಹಿಂದಿನ ಜಯಶ್ರೀ ಅವರ ಕೆಲವು ವಿಡಿಯೋಗಳು ಇದೀಗ ವೈರಲ್ ಆಗಿದ್ದು, ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ.
ಜೈಲಿನಲ್ಲಿದ್ದ ಕೈದಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪವೂ ಜಯಶ್ರೀ ವಿರುದ್ಧ ಕೇಳಿಬಂದಿದೆ. ಕೈದಿ ಸಾಯಿಕುಮಾರ್‌ನಿಂದ ₹25 ಸಾವಿರ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಾಯಿಕುಮಾರ್ ಜುಲೈನಲ್ಲಿ ಜಯಶ್ರೀ ವಿರುದ್ಧ ದೂರು ನೀಡಿದ್ದ ಎನ್ನಲಾಗಿದೆ. ಸದ್ಯ ಜಯಶ್ರೀ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದೀಗ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಜಯಶ್ರೀ ಕೂಡ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಅಶ್ಲೀಲ ವಿಡಿಯೋಗಳನ್ನು ಸಾಯಿಕುಮಾರ್ ವೈರಲ್ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಬೆಳಗಾವಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ಜಯಶ್ರೀ ಮತ್ತು ಸಾಯಿಕುಮಾರ್ ನಡುವೆ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಇಬ್ಬರ ನಡುವೆ ಸ್ನೇಹ ಹಾಗೂ ಆಪ್ತ ಸಂಬಂಧ ಬೆಳೆದಿತ್ತು. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಜಗಳ ಉಂಟಾದ ಬಳಿಕ ವಿಡಿಯೋಗಳು ವೈರಲ್ ಆಗಿವೆ ಎಂದು ಆರೋಪಿಸಲಾಗಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸಾಯಿಕುಮಾರ್‌ಗೆ ಜಯಶ್ರೀ ಥಾರ್ ಕಾರು ಕೊಡಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಕಾರನ್ನು ಸಾಯಿಕುಮಾರ್ ಹಲವು ಅಪರಾಧ ಕೃತ್ಯಗಳಲ್ಲಿ ಬಳಸಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರು-ಪ್ರತಿದೂರು ದಾಖಲಾಗಿದ್ದು, ವೈರಲ್ ಆಗಿರುವ ವಿಡಿಯೋಗಳು, ಹಣಕಾಸಿನ ವ್ಯವಹಾರ ಹಾಗೂ ಕಾರಿನ ಬಳಕೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

