ಬೆಂಗಳೂರು:ಆ.20: “ಫುಟ್ಪಾತ್ ಇರುವುದು ಪಾದಚಾರಿಗಳು ಓಡಾಡುವುದಕ್ಕೆ, ವ್ಯಾಪಾರ ಮಾಡುವುದಕ್ಕಲ್ಲ”ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ಸ್ಪಷ್ಟವಾಗಿ ಹೇಳಿದ್ದರು. ಅವರ ಸೂಚನೆ ಮೇರೆಗೆ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿ ಪಾದಚಾರಿಗಳಿಗೆ ದಾರಿ ಮಾಡಿಕೊಡಲಾಗಿತ್ತು. ಆದರೆ ಇದೀಗ ಕೆಲವೇ ದಿನಗಳಲ್ಲಿ ನಗರದ ಅನೇಕ ಭಾಗಗಳಲ್ಲಿ ಪರಿಸ್ಥಿತಿ ಮತ್ತೆ ಮೊದಲಿನಂತಾಗಿದೆ.
ಮಲ್ಲೇಶ್ವರಂ, ಶಿವಾಜಿನಗರ, ಜಯನಗರ, ಗಾಂಧಿ ಬಜಾರ್ ಸೇರಿದಂತೆ ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಫುಟ್ಪಾತ್ಗಳನ್ನು ವ್ಯಾಪಾರಿಗಳು ಮತ್ತೆ ಆಕ್ರಮಿಸಿಕೊಂಡಿದ್ದಾರೆ. ತರಕಾರಿ, ಹಣ್ಣು, ಬಟ್ಟೆ, ಆಹಾರ ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರ ಫುಟ್ಪಾತ್ನಲ್ಲೇ ನಡೆಯುತ್ತಿದ್ದು, ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಫುಟ್ಪಾತ್ ತೆರವುಗೊಳಿಸಿದ ಬಳಿಕ ಮತ್ತೆ ಅದೇ ಜಾಗದಲ್ಲಿ ವ್ಯಾಪಾರ ಆರಂಭಿಸಿರುವ ದೃಶ್ಯಗಳ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಚಿವರೇ, ನಿಮ್ಮ ಉದ್ದೇಶ ಏನಾಯಿತು?”ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಒಂದೆಡೆ ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಫುಟ್ಪಾತ್ಗಳನ್ನು ತೆರವುಗೊಳಿಸುವುದಾಗಿ ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ತೆರವುಗೊಂಡ ಜಾಗಗಳಲ್ಲೇ ಮತ್ತೆ ವ್ಯಾಪಾರ ನಡೆಯುತ್ತಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ.
ಸಚಿವರ ಆದೇಶಕ್ಕೆ ಜಿಬಿಎ ಅಧಿಕಾರಿಗಳೇ ಕ್ಯಾರೇ ಎನ್ನುತ್ತಿಲ್ಲವೇ? ಎಂಬ ಪ್ರಶ್ನೆಯೂ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಮತ್ತೆ ಒತ್ತುವರಿ ಆಗದಂತೆ ಮೇಲ್ವಿಚಾರಣೆ ನಡೆಸಬೇಕಾದ ಜಿಬಿಎ ಅಧಿಕಾರಿಗಳು ಎಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
ಈ ಬಗ್ಗೆ ಅಧಿಕಾರಿಗಳಿಂದ ಕೇಳಿಬರುವ ಸಬೂಬು- ಸಿಬ್ಬಂದಿ ಕೊರತೆ. ನಗರದೆಲ್ಲೆಡೆ ಫುಟ್ಪಾತ್ ಒತ್ತುವರಿ ತೆರವುಗೊಳಿಸಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಅಗತ್ಯ ಸಿಬ್ಬಂದಿ ಇಲ್ಲ ಎಂಬುದು ಅಧಿಕಾರಿಗಳ ಸಮಜಾಯಿಷಿ. ಆದರೆ ಸಿಬ್ಬಂದಿ ಕೊರತೆಯ ನೆಪದಲ್ಲಿ ಸಾರ್ವಜನಿಕರ ಓಡಾಟಕ್ಕೆ ಮೀಸಲಾಗಿರುವ ಫುಟ್ಪಾತ್ಗಳನ್ನು ವ್ಯಾಪಾರಿಗಳಿಗೆ ಬಿಟ್ಟುಕೊಡಬೇಕೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಒಮ್ಮೆ ತೆರವುಗೊಳಿಸುವುದರಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ. ತೆರವುಗೊಂಡ ಫುಟ್ಪಾತ್ ಮತ್ತೆ ಒತ್ತುವರಿಯಾಗದಂತೆ ನಿರಂತರ ನಿಗಾ ಮತ್ತು ಕಠಿಣ ಕ್ರಮ ಅಗತ್ಯ. ಇಲ್ಲದಿದ್ದರೆ “ಫುಟ್ಪಾತ್ ಪಾದಚಾರಿಗಳಿಗೇ ಮೀಸಲು” ಎಂಬ ಸಚಿವರ ಘೋಷಣೆ ಕೇವಲ ಕಾರ್ಯಾಚರಣೆಯ ದಿನದ ಹೇಳಿಕೆಯಾಗಿ ಉಳಿಯುವ ಆತಂಕ ಎದುರಾಗಿದೆ.

