ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಜಾಮೀನು ನೀಡುವ ವೇಳೆ ವಿಧಿಸಿದ್ದ ಪ್ರಮುಖ ಷರತ್ತೊಂದನ್ನು ಹೈಕೋರ್ಟ್ ರದ್ದುಪಡಿಸಿದೆ.
ಅನುಮತಿ ಪಡೆಯದೆ ರಾಜ್ಯದ ಗಡಿ ದಾಟಿ ತೆರಳಬಾರದು ಎಂಬ ಷರತ್ತನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಹಿಂದೆ ನ್ಯಾಯಾಲಯದ ಅನುಮತಿ ಪಡೆದು ಬಿ. ನಾಗೇಂದ್ರ ಅವರು ದೆಹಲಿಗೆ ತೆರಳಿದ್ದರು. ಇನ್ನು ಮುಂದೆ ಕೂಡ ಅಗತ್ಯವಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಪ್ರಯಾಣಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಷರತ್ತು ರದ್ದುಪಡಿಸುವುದಕ್ಕೆ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಆಕ್ಷೇಪ ವ್ಯಕ್ತಪಡಿಸಿದ್ದರು. ಸಚಿವ ಸ್ಥಾನದಲ್ಲಿರುವುದರಿಂದ ರಾಜ್ಯದ ಹೊರಗೆ ಪ್ರಯಾಣಿಸುವ ಅಗತ್ಯ ಎದುರಾಗಬಹುದು ಎಂಬ ವಾದವನ್ನು ಪರಿಗಣಿಸಿದ ಹೈಕೋರ್ಟ್, ರಾಜ್ಯದ ಹೊರಗೆ ತೆರಳುವುದಕ್ಕೆ ಇದ್ದ ನಿರ್ಬಂಧವನ್ನು ತೆಗೆದುಹಾಕಿದೆ.
ಆದರೆ, ದೇಶದ ಹೊರಗೆ ತೆರಳಲು ಬಿ. ನಾಗೇಂದ್ರ ಅವರಿಗೆ ಇನ್ನೂ ನ್ಯಾಯಾಲಯದ ಅನುಮತಿ ಕಡ್ಡಾಯವಾಗಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ.

