ಇಸ್ರೇಲ್ : ಇಸ್ರೇಲ್ನಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಬಂಧಿಸಲಾಗಿದ್ದು, ಸಾವಿನ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಲ್ ಅವಿವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮೃತರನ್ನು ರಾಜೀವ್ ಆಚಾರ್ಯ ಎಂದು ಗುರುತಿಸಿದೆ ಹಾಗೂ ಅವರ ಸಾವು ದುರಂತ, ತಮಗೆ ತೀವ್ರ ದುಃಖವನ್ನುಂಟುಮಾಡಿದೆ ಎಂದು ಹೇಳಿದೆ.
“ರಾಯಭಾರ ಕಚೇರಿಯು ಇಸ್ರೇಲ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಮತ್ತು ಘಟನೆಯ ಸಂಪೂರ್ಣ ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ತಿಳಿಯಲು ತನಿಖೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ,” ಎಂದು ತಿಳಿಸಿದೆ.
ಘಟನೆ ಅಥವಾ ಮೃತರ ಕುರಿತು ರಾಯಭಾರ ಕಚೇರಿಯು ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆಚಾರ್ಯ ಅವರ ಕುಟುಂಬಕ್ಕೆ ರಾಯಭಾರ ಕಚೇರಿಯು ಸಂತಾಪ ಸೂಚಿಸಿದ್ದು, ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದೆ.
ರಾಯಭಾರ ಕಚೇರಿಯು ಈ ಪ್ರಕರಣದ ಮೇಲೆ ನಿಕಟ ನಿಗಾ ವಹಿಸುವುದನ್ನು ಮುಂದುವರಿಸುತ್ತದೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುತ್ತದೆ ಎಂದು ಅದು ಹೇಳಿದೆ.

