ಬೆಂಗಳೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ದತೆಗಳು ನಡೆಯುತ್ತಿದ್ದು ಇದರ ಪ್ರಥಮ ಹಂತವಾಗಿ ಈ ಬಾರಿಯ ದಸರಾದಲ್ಲಿ ಭಾಗವಹಿಸಲಿರುವ 12 ಆನೆಗಳ ಪಟ್ಟಿಯನ್ನು ಅರಣ್ಯ ಸಚಿವ ರಾಮಲಿಂಗರೆಡ್ಡಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಆ ಪಟ್ಟಿಯಲ್ಲಿ 2020 ರಿಂದ ಸತತವಾಗಿ ಚಿನ್ನದ ಅಂಬಾರಿ ಹೊತ್ತಿದ್ದ ಅಭಿಮನ್ಯುವನ್ನು ಕೈ ಬಿಡಲಾಗಿದೆ.
2026ರ ಮೈಸೂರು ದಸರಾ ಮಹೋತ್ಸವಕ್ಕೆ ಪ್ರತಿ ವರ್ಷದಂತೆ ಈ ಬಾರಿಯು ಸಹ ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡುವುದಕ್ಕಾಗಿ, ಆನೆಗಳ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು, ಪಶುವೈದ್ಯಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡದೊಂದಿಗೆ ವಿವಿಧ ಆನೆಗಳ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ನಂತರ ಆನೆಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.
ನಂತರ ದಸರಾ ಆನೆಗಳ ಆಯ್ಕೆ ಸಭೆಯಲ್ಲಿ ಆನೆಗಳ ಆರೋಗ್ಯ ತಪಾಸಣೆ ವರದಿ ಹಾಗೂ ಆನೆಗಳ ಗುಣಲಕ್ಷಣಗಳ ಆಧಾರದ ಮೇಲೆ 2026 ರ ದಸರಾ ಮಹೋತ್ಸವಕ್ಕೆ ಇಲಾಖಾ ಆನೆಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ದಪಡಿಸಲಾಗಿತ್ತು. ಆಗಸ್ಟ್ 26 ರಂದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ ದಸರಾ ಆನೆಗಳು ನಾಡಿನತ್ತ ಹೆಜ್ಜೆ ಹಾಕಲಿವೆ.
ಈ ಬಾರಿ ಬದಲಾವಣೆ : ಕಳೆದ ಹಲವು ವರ್ಷಗಳಿಂದ ಚಿನ್ನದ ಅಂಬಾರಿಯ ಸಾರಥಿಯಾಗಿ ಮೆರೆಯುತ್ತಿದ್ದ ಕ್ಯಾಪ್ಟನ್ ಅಭಿಮನ್ಯು 2026ರ ದಸರಾ ಗಜಪಡೆಯ ಪಟ್ಟಿಯಿಂದ ಹೊರಗುಳಿದಿದ್ದಾನೆ. ಅಭಿಮನ್ಯುವಿಗೆ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾರವಾದ ದಸರಾ ಜವಾಬ್ದಾರಿಯಿಂದ ದೂರವಿಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಕಳೆದ ದಸರೆಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯುವಿಗೆ ಇದು ಭಾವುಕ ವಿದಾಯವಾಗಲಿದೆ.
ಕ್ಯಾಪ್ಟನ್ ಅಭಿಮನ್ಯು ಆನೆಗೆ ರಾಜೋಚಿತ ಬೀಳ್ಕೊಡುಗೆ ನೀಡಿ : ಈಶ್ವರ ಖಂಡ್ರೆ
ಆರು ಬಾರಿ ಚಿನ್ನದಂಬಾರಿ ಹೊತ್ತ 60 ವರ್ಷದ ಕ್ಯಾಪ್ಟನ್ ಅರ್ಜುನ ಆನೆಗೆ ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ರಾಜೋಚಿತ ಬೀಳ್ಕೊಡುಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಅವರು, ದಸರಾ ಮಹೋತ್ಸವದಲ್ಲಿ ನಾಡದೇವಿ ಚಾಮುಂಡೇಶ್ವರಿ ವಿರಾಜಮಾನಳಾದ 750 ಕೆ.ಜಿ. ತೂಕದ ಚಿನ್ನದಂಬಾರಿ ಹೊತ್ತು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಅಭಿಮನ್ಯುವಿಗೆ ನಾಡಿನಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ. ಏಕಾ ಏಕಿ ಅಭಿಮನ್ಯುವನ್ನು ದಸರಾ ಮಹೋತ್ಸವದಿಂದ ಹೊರಗಿಡುವ ಬದಲು ನಿಶಾನೆ ಆನೆಯಾಗಿ ಬಳಸಿ, ಗೌರವಪೂರ್ವಕವಾಗಿ ಹಾಗೂ ರಾಜೋಚಿತವಾಗಿ ಬೀಳ್ಕೊಡುಗೆ ನೀಡಬೇಕು ಎಂದು ಕೋರಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಯೇ ವಿಜಯದಶಮಿ ಜಂಬೂಸವಾರಿ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಬಗ್ಗೆ ರಾಜ್ಯದ ಜನತೆಗೆ ಅವಿನಾಭಾವ ಸಂಬಂಧವಿದೆ. ಚಿನ್ನದಂಬಾರಿ ಹೊರುವ ಆನೆಗಳ ಬಗ್ಗೆಯಂತೂ ವಿಶೇಷ ಪ್ರೀತಿ ಇದೆ. ಬಾರಿ ದಸರಾ ಮಹೋತ್ಸವದಿಂದ ಕ್ಯಾಪ್ಟನ್ ಅಭಿಮನ್ಯುವನ್ನು ಕೈಬಿಟ್ಟಿರುವುದು ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಾಗರಹೊಳೆಯ ಮತ್ತಿಗೋಡು ಶಿಬಿರದ 59 ವರ್ಷ ವಯಸ್ಸಿನ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದಲ್ಲದೆ, 6 ಬಾರಿ ಅಂಬಾರಿಹೊತ್ತು ರಾಜ್ಯದ ಜನರ ಹೃದಯದಲ್ಲಿ ನೆಲೆಸಿದ್ದಾನೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
1968ರಲ್ಲಿ ಕಾಕನಕೋಟೆ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ 22 ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, 8 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ. 60 ವರ್ಷ ತುಂಬಿದ ಬಳಿಕವೂ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ. ಅದೇ ರೀತಿ ಬಲರಾಮ ಕೂಡ ಪಾಲ್ಗೊಂಡಿದ್ದ. ಈ ಗೌರವವನ್ನು ಅಭಿಮನ್ಯುವಿಗೂ ನೀಡಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡುವಂತೆ ಕೋರಿದ್ದಾರೆ.

