ಬೆಂಗಳೂರು : ಪಶುವೈದ್ಯ ಅಧಿಕಾರಿಗಳ ನೇಮಕಾತಿ ಸಂಬಂಧ ಇಡಿ ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿ ಹಾಗೂ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 13 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ನಡೆದಿರುವ ಅನುಮಾನದ ಹಿನ್ನಲೆ ಕೆಪಿಎಸ್‌ಸಿ ಹಗರಣದ ಮಧ್ಯವರ್ತಿಗಳ ಮೇಲೂ ದಾಳಿ ನಡೆದಿದೆ. ನಾಲ್ಕು ವಾಹನಗಳಲ್ಲಿ ವಿಧಾನಸೌಧ ಬಳಿಯ ಕೆಪಿಎಸ್ಸಿ ಕೇಂದ್ರ ಕಚೇರಿಗೆ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. 2019ರ ಸೆಪ್ಟೆಂಬರ್ 3ರಂದು ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾಗಿದ್ದ ಶಿವಶಂಕರಪ್ಪ, 2021ರ ಏಪ್ರಿಲ್ 3ರಂದು ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಏಪ್ರಿಲ್ 4ರಂದು ಅಧಿಕೃತ ಆದೇಶವಾಗಿತ್ತು. ಅಂದಿನಿಂದ 2026ರ ಜು.13ರ ವರೆಗೆ ಅವರೇ ಅಧ್ಯಕ್ಷರಾಗಿದ್ದರು.
ರಾಜ್ಯದ 8 ಜಿಲ್ಲೆಗಳಲ್ಲಿ ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳಿಂದ 70-80 ಲಕ್ಷ ಲಂಚ ಪಡೆದಿರೋ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳ ಲಂಚದ ಬೇಡಿಕೆ ಕುರಿತು 4 FIR ಕೂಡ ದಾಖಲಾಗಿತ್ತು. ಲಂಚದ ಬೇಡಿಕೆಯ ಆಡಿಯೋ ಸಾಕ್ಷ್ಯ ಇಡಿಗೂ ಸಲ್ಲಿಕೆಯಾಗಿತ್ತು. ಹೀಗಾಗಿ ನೇಮಕಾತಿ ಅಕ್ರಮದ ಹಣದ ಜಾಡು ಹಿಡಿದು ಇಡಿ ಶೋಧಕ್ಕೆ ಮುಂದಾಗಿದ್ದು, ದಾಖಲೆ, ಡಿಜಿಟಲ್ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗಿದೆ.

