ಚಾಮರಾಜನಗರ: ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಮೃತರ ಕುಟುಂಬಸ್ಥರು ಸರ್ಕಾರ ಘೋಷಿಸಿರುವ ತಲಾ ₹5 ಲಕ್ಷ ಪರಿಹಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹನೂರು ಪೊಲೀಸ್ ಠಾಣೆ ಎದುರು ಬೆಳಗ್ಗೆಯಿಂದಲೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ‘ನ್ಯಾಯ ಬೇಕು’ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಪ್ರತಿಭಟನಾಕಾರರ ನಡುವೆ ವಾಗ್ವಾದವೂ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.
ಸರ್ಕಾರ ನೀಡಿರುವ ಪರಿಹಾರವನ್ನು ಪ್ರಶ್ನಿಸಿರುವ ಮೃತ ಆಂಥೋಣಿ ಎಂಬಾತನ ಸಹೋದರಿ, “ನಾವು ಅವರನ್ನು ಕೊಲ್ಲುತ್ತೇವೆ, ಆಗ ಪರಿಹಾರ ಕೊಡುತ್ತೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡಿನ ದಾಳಿ ನಡೆಸಿದವರು ಯಾರು ಎಂಬುದು ಬಹಿರಂಗವಾಗಬೇಕು. ಅವರನ್ನು ಸ್ಥಳಕ್ಕೆ ಕರೆತರಬೇಕು ಎಂದು ಒತ್ತಾಯಿಸಿರುವ ಕುಟುಂಬಸ್ಥರು, ತಮ್ಮ ಸಮ್ಮುಖದಲ್ಲಿ ನ್ಯಾಯ ಸಿಗುವವರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಹನೂರು ಶಾಸಕ ಮಂಜುನಾಥ್ ಭೇಟಿ ನೀಡಿ ಕುಟುಂಬಸ್ಥರ ಮನವೊಲಿಸಲು ಯತ್ನಿಸಿದರು. ಆದರೆ ಶಾಸಕರ ಮನವೊಲಿಕೆಗೂ ಕುಟುಂಬಸ್ಥರು ಬಗ್ಗದೆ, ಅರಣ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ಬಂದು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
“ವನ್ಯಜೀವಿ ಸತ್ತಾಗ ಅರಣ್ಯ ಸಚಿವರು ಸ್ಥಳಕ್ಕೆ ಬರುತ್ತಾರೆ. ಅರಣ್ಯಾಧಿಕಾರಿಗಳ ಗುಂಡೇಟಿಗೆ ಜನರು ಮೃತಪಟ್ಟಾಗ ಸ್ಥಳಕ್ಕೆ ಏಕೆ ಬರುತ್ತಿಲ್ಲ?” ಎಂದು ಪ್ರತಿಭಟನಾಕಾರರು ಅರಣ್ಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಹನೂರು ಶಾಸಕ ಮಂಜುನಾಥ್ ಮೃತರ ಕುಟುಂಬಗಳಿಗೆ ಒಟ್ಟು ₹15 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ ತಲಾ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ತಲಾ ₹10 ಲಕ್ಷ ನೀಡುವುದಾಗಿ ಅವರು ಹೇಳಿದ್ದಾರೆ.
ಘಟನೆ ವೇಳೆ ಗುಂಡಿನ ದಾಳಿಯಿಂದ ಪಾರಾಗಿ ಮೈಸೂರಿನ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದ ಮಹಿಮಾದಾಸ್ ಅವರನ್ನು ದಿಢೀರ್ ಡಿಸ್ಚಾರ್ಜ್ ಮಾಡಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಡಿಸ್ಚಾರ್ಜ್ ಕುರಿತು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಪ್ರಶ್ನೆಗಳು ಮೂಡಿವೆ.
ಇತ್ತ ಪ್ರಕರಣದ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಘಟನೆಯ ಸತ್ಯ ಹೊರಬರಲು ನ್ಯಾಯಾಂಗ ತನಿಖೆಯೊಂದೇ ದಾರಿ ಎಂದು ಹೇಳಿದ್ದಾರೆ.
ಸರ್ಕಾರದ ವಿವಿಧ ಹಂತಗಳ ಹೇಳಿಕೆಗಳಲ್ಲೇ ಪರಸ್ಪರ ವೈರುಧ್ಯಗಳಿವೆ. ಅರಣ್ಯ ಇಲಾಖೆ ಹೇಳಿಕೆ, ಜನಪ್ರತಿನಿಧಿಗಳ ಹೇಳಿಕೆ ಹಾಗೂ ಜಿಲ್ಲಾ ಸಚಿವರ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ. ಮೂವರು ರೈತರ ಸಾವಿಗೆ ನಿಜವಾದ ಕಾರಣವೇನು, ಅಧಿಕಾರ ದುರುಪಯೋಗವಾಗಿದೆಯೇ, ನಿಯಮ ಉಲ್ಲಂಘನೆಯಾಗಿದೆಯೇ ಹಾಗೂ ಗುಂಡಿನ ದಾಳಿ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ಬಳಿಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸಲಾಗಿದೆಯೇ ಎಂಬ ಅನುಮಾನವಿದೆ. ಆಂತರಿಕ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಹೀಗಾಗಿ ತಕ್ಷಣ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಅಶೋಕ್ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕುಟುಂಬಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ, ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಜೀಪ್ ಧ್ವಂಸಕ್ಕೆ ಯತ್ನಿಸಿದ ಆರೋಪದ ಮೇಲೆ ಐವರ ವಿರುದ್ಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚೆಮುತ್ತು, ಮಾಳಶೆಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

