ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಮರಿಮಂಗಲ ಬೀಟ್‌ನಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ತೀವ್ರಗೊಂಡಿದೆ. ಮೃತ ಕುಮಾರ್ ಅವರ ಪತ್ನಿ ಡೋಮಿನಾ ಅವರು ಅರಣ್ಯ ಇಲಾಖೆ ವಿರುದ್ಧ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
“ನನ್ನ ಪತಿ ತಪ್ಪು ಮಾಡಿದ್ದರೆ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಬೇಕಿತ್ತು. ಶೂಟ್ ಮಾಡಲು ಅನುಮತಿ ಕೊಟ್ಟವರು ಯಾರು? ನನ್ನ ಪತಿ ಏನು ತಪ್ಪು ಮಾಡಿದ್ದರು ಎಂದು ಕೊಂದಿದ್ದಾರೆ?” ಎಂದು ಡೋಮಿನಾ ಕಣ್ಣೀರಿಟ್ಟಿದ್ದಾರೆ.
ಅರಣ್ಯಕ್ಕೆ ಹೋಗಿದ್ದರೆ ಮೃತದೇಹಗಳನ್ನು ಅಲ್ಲಿಯೇ ಇರಿಸಬೇಕಿತ್ತು. ಆದರೆ ಮೃತದೇಹಗಳನ್ನು ಮೈಸೂರಿಗೆ ಏಕೆ ತೆಗೆದುಕೊಂಡು ಹೋದರು ಎಂಬುದೂ ಅನುಮಾನ ಮೂಡಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಕೂಡ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಗ್ಯ ಗ್ರಾಮದ ಸಮೀಪ ನಡೆದ ಗುಂಡಿನ ದಾಳಿಯಲ್ಲಿ ತೊಮಿಯರ್ ಪಾಳ್ಯದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಹನೂರು ಪೊಲೀಸ್ ಠಾಣೆ ಎದುರು ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ತೊಮಿಯರ್ ಪಾಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮೃತರು ಅಮಾಯಕರು ಎಂದು ಆರೋಪಿಸಿದ್ದು, ಅರಣ್ಯ ಸಿಬ್ಬಂದಿಯೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ದೂರಿದ್ದಾರೆ. ಗುಂಡು ಹಾರಿಸಿದ ಅಧಿಕಾರಿಗಳನ್ನು ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಹನೂರು ಪೊಲೀಸ್ ಠಾಣೆ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಠಾಣೆಯ ಸಮೀಪದಲ್ಲಿರುವ ಅರಣ್ಯ ಇಲಾಖೆ ಕಚೇರಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ನಡುವೆ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿರುವ ಮಾಹಿಮ ದಾಸ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಚಿವ ಪುಟ್ಟರಂಗಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನೂ ಸಚಿವರು ಪಡೆದಿದ್ದಾರೆ.
ಮತ್ತೊಂದೆಡೆ, ಹನೂರು ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ನರೇಂದ್ರ ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಏಳು ಮಂದಿ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಮೃತರು ಬೇಟೆಗೆ ತೆರಳಿದ್ದರು ಎಂಬುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಹೇಳಿರುವ ಅವರು, ಮೃತದೇಹಗಳನ್ನು ಮೈಸೂರಿಗೆ ಸ್ಥಳಾಂತರಿಸಿರುವುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಶೂಟೌಟ್ ನಿಜವಾಗಿಯೂ ಎನ್‌ಕೌಂಟರ್ ಆಗಿತ್ತೇ? ಮೃತರು ಬೇಟೆಗೆ ತೆರಳಿದ್ದರು ಎಂಬುದಕ್ಕೆ ಅರಣ್ಯ ಇಲಾಖೆ ಬಳಿ ಇರುವ ಸಾಕ್ಷ್ಯಗಳೇನು? ಗುಂಡಿನ ದಾಳಿ ನಡೆಸುವ ಅಗತ್ಯ ಏಕೆ ಎದುರಾಯಿತು? ಮೃತದೇಹಗಳನ್ನು ಮೈಸೂರಿಗೆ ಏಕೆ ಸ್ಥಳಾಂತರಿಸಲಾಯಿತು? ಎಂಬ ಹಲವು ಪ್ರಶ್ನೆಗಳು ಇದೀಗ ಎದ್ದಿವೆ.
ಪ್ರಕರಣದ ಸತ್ಯಾಸತ್ಯತೆ ಹೊರಬರಲು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕುಟುಂಬಸ್ಥರು, ಗ್ರಾಮಸ್ಥರು ಮತ್ತು ವಿವಿಧ ಮುಖಂಡರಿಂದ ಕೇಳಿಬರುತ್ತಿದೆ.

