ಸಂತೋಷ್ ಹೆಗ್ಡೆಯಂತವರು ಸಾಮಾಜಿಕ ಮೀಸಲಾತಿಯನ್ನು ತೆಗೆದುಹಾಕಿ ಆರ್ಥಿಕ ಆಧಾರದ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಬಯಸುತ್ತಿದ್ದಾರೆ. ಈ ರೀತಿಯ ಬ್ರಾಹ್ಮಣ್ಯವಾದವು ಸಂವಿಧಾನದ ಮೀಸಲಾತಿ ಉದ್ದೇಶವನ್ನೇ ಬುಡಮೇಲು ಮಾಡಿ ಮನುವಾದಿ ಶ್ರೇಣೀಕೃತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಹುನ್ನಾರದ ಪ್ರಯತ್ನವಾಗಿದೆ. ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿ ಯಾರೇ ಮಾತಾಡಲಿ ಅವರನ್ನು ಪ್ರಬಲವಾಗಿ ವಿರೋಧಿಸಲೇಬೇಕಿದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬಾಬಾಸಾಹೇಬರು ಸಂವಿಧಾನದ ಮೂಲಕ ದಲಿತ ದಮನಿತ ಹಿಂದುಳಿದ ವರ್ಗಗಳಿಗೆ ಒದಗಿಸಿ ಕೊಟ್ಟ ಸಾಮಾಜಿಕ ಮೀಸಲಾತಿಯ ಮೇಲೆ ಈ ಜಾತಿ ಶ್ರೇಷ್ಠತೆ ಪೀಡಿತ ಬ್ರಾಹ್ಮಣ್ಯವಾದಿಗಳ ವಿರೋಧ ಮತ್ತು ಅಸಮಾಧಾನ ಮೊದಲಿನಿಂದಲೂ ಇದ್ದಿದ್ದೇ. ಅದನ್ನೇ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಹಾಗೂ ಲೋಕಾಯುಕ್ತರೂ ಆಗಿದ್ದ ಸಂತೋಷ್ ಹೆಗ್ಡೆ ಎನ್ನುವ ಮನುವಾದಿ ಮಹಾತ್ಮರು ಆಗಾಗ ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಲೇ ಇರುತ್ತಾರೆ.
ಈಗ ಆಗಸ್ಟ್ 11 ರಂದು ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ನಡೆದ “ಸಾರ್ವಜನಿಕ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ” ಕುರಿತ ವಿಚಾರ ಸಂಕಿರಣದಲ್ಲಿ ಮೀಸಲಾತಿ ವ್ಯವಸ್ಥೆಯ ಕುರಿತು ತಮ್ಮ ಬಲವಾದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಹಾಗೂ “ಮೀಸಲಾತಿ ಎನ್ನುವುದು ಸಂವಿಧಾನದ 14 ನೇ ವಿಧಿಗೆ ವಿರುದ್ದವಾಗಿದ್ದು, ಅದನ್ನು ಮುಂದುವರಿಸಬಾರದು” ಎಂದೂ ವಾದಿಸಿದ್ದಾರೆ.
“ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸಲು ಕೇವಲ 10 ವರ್ಷಗಳ ಸೀಮಿತ ಅವಧಿಗೆ ಮೀಸಲಾತಿ ಕೋರಿದ್ದರು, ಆದರೆ ಸಂವಿಧಾನ ಜಾರಿಯಾಗಿ 70 ವರ್ಷಗಳಾದರೂ ಮೀಸಲಾತಿ ಮುಂದುವರೆಯುತ್ತಿದ್ದು ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದೆ. ಸಮಾಜದಲ್ಲಿ ಯಾವುದೇ ತಾರತಮ್ಯ ಇರಬಾರದು, ಮೀಸಲಾತಿಯಿಂದ ತಾರತಮ್ಯ ಹೋಗುವ ಬದಲು ಹೆಚ್ಚಾಗುತ್ತದೆ. ಜಾತಿ ಆಧಾರದ ಮೀಸಲಾತಿ ಲಿಂಗ ಆಧಾರಕ್ಕೆ ಬಂದು ನಿಂತಿದೆ. ಮೀಸಲಾತಿ ನಿಜವಾದ ಬಡವರಿಗೆ ತಲುಪುತ್ತಿಲ್ಲ. ಮೀಸಲಾತಿ ಅನಿವಾರ್ಯವಾದರೆ ಆರ್ಥಿಕವಾಗಿ ಹಿಂದುಳಿದವರ ಆಧಾರದ ಮೇಲೆ ಇರಬೇಕು. ಮೀಸಲಾತಿಯೊಳಗೆ ಮತ್ತೆ ಒಳಮೀಸಲಾತಿಯನ್ನು ಕಲ್ಪಿಸುವುದು ಸಮಾಜವನ್ನು ಮತ್ತಷ್ಟು ತುಂಡರಿಸುತ್ತದೆ, ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಅಗತ್ಯವಿಲ್ಲ” ಎಂಬುದು ಮಾನ್ಯ ಸಂತೋಷ ಹೆಗ್ಡೆಯವರ ಅಮಾನ್ಯ ಹೇಳಿಕೆಗಳಾಗಿವೆ.
ಅವರ ಈ ಮೀಸಲಾತಿ ವಿರೋಧಿ ಮಾತುಗಳು “ಸಾಮಾಜಿಕ ಅಸಮಾನತೆಯ ಆಧಾರದಲ್ಲಿ ಮೀಸಲಾತಿ ಬೇಕಾಗಿಲ್ಲ, ಆರ್ಥಿಕ ಆಧಾರದಲ್ಲಿ ಮೀಸಲಾತಿ ಬೇಕಾಗಿದೆ ಎಂಬ ಮನುವಾದಿಗಳ ಬಹುಕಾಲದ ಬೇಡಿಕೆಯ ಭಾಗವೇ ಆಗಿದೆ. ತಮ್ಮ ಈ ಜನವಿರೋಧಿ ಹೇಳಿಕೆಗಳಿಂದ ಅಬ್ರಾಹ್ಮಣರಾದ (ಬಂಟ ಸಮುದಾಯದ) ಹೆಗ್ಡೆಯವರು ತಮ್ಮ ಬ್ರಾಹ್ಮಣಶಾಹಿ ಪರ ಮನುವಾದಿ, ಮಹಿಳಾ ವಿರೋಧಿತನವನ್ನು ಬಯಲುಗೊಳಿಸಿದ್ದಾರೆ.

ಡಾ.ಅಂಬೇಡ್ಕರ್ ರವರು ಮೀಸಲಾತಿಗೆ ಕೇವಲ 10 ವರ್ಷಗಳ ಅವಧಿಯನ್ನು ಸಂವಿಧಾನದಲ್ಲಿ ನಿಗದಿ ಪಡಿಸಿದ್ದರು ಎನ್ನುವುದೇ ಅರ್ಧ ಸತ್ಯ. ಯಾಕೆಂದರೆ ಮೀಸಲಾತಿಯಲ್ಲಿ ಎರಡು ರೀತಿಗಳನ್ನು ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ಒಂದು ರಾಜಕೀಯ ಮೀಸಲಾತಿ. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಶೋಷಿತ ವರ್ಗಗಳ ಪ್ರಾತಿನಿಧ್ಯತೆಗಾಗಿ ಮೀಸಲಾತಿ ಇರಬೇಕೆಂದು 334ನೇ ವಿಧಿಯನ್ನು ಸೇರಿಸಲಾಗಿದೆ. ಆರಂಭದಲ್ಲಿ ಈ ರಾಜಕೀಯ ಮೀಸಲಾತಿಗೆ 10 ವರ್ಷಗಳ ಅವಧಿಯನ್ನು ನಿಗದಿ ಪಡಿಸಲಾಗಿತ್ತು. 1949 ಆಗಸ್ಟ್ 25 ರ ಸಂವಿಧಾನದ ಸಭೆಯಲ್ಲಿ ” ನಾನು ವೈಯಕ್ತಿಕವಾಗಿ ಎಸ್ಸಿ ಹಾಗೂ ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಅವಧಿಗೆ ಒತ್ತಾಯಿಸಲು ಸಿದ್ಧನಿದ್ದೇನೆ” ಎಂದು ಹೇಳುತ್ತಾರೆ. ಆದರೆ 1951 ರಲ್ಲಿ “ನಾನು ಬಯಸಿದ್ದು ಅಸ್ಪೃಶ್ಯತೆ ಇರುವವರೆಗೂ ಮೀಸಲಾತಿ ಮುಂದುವರೆಯಬೇಕೆಂದು, ಆದರೆ ಸರ್ದಾರ್ ವಲ್ಲಭಭಾಯಿ ಪಟೇಲರು ಅದನ್ನು ವಿರೋಧಿಸಿದರು ಹಾಗೂ ಈಗ 10 ವರ್ಷಗಳ ಅವಧಿ ನಿಗದಿಪಡಿಸಿ, ನಂತರ ಅಗತ್ಯ ಬಿದ್ದರೆ ಸಂವಿಧಾನ ತಿದ್ದುಪಡಿ ತಂದು ವಿಸ್ತರಿಸಬಹುದು ಎಂದು ಸಲಹೆ ನೀಡಿದರು” ಎಂದು ಅಂಬೇಡ್ಕರ್ ರವರೇ ಹೇಳಿದ್ದಾರೆ. ಈ ಅವಧಿ ನಿಗದಿ ಕೇವಲ ರಾಜಕೀಯ ಮೀಸಲಾತಿ ಕುರಿತು ಮಾತ್ರ.
ಇನ್ನು ಎರಡನೆಯದಾಗಿ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ (15ನೇ ಮತ್ತು 16ನೇ ವಿಧಿ) ಸಂವಿಧಾನದಲ್ಲಿ ಯಾವುದೇ ಸಮಯದ ಮಿತಿ ಇರಲಿಲ್ಲ. ಹಿಂದುಳಿದ ವರ್ಗಗಳಿಗೆ ಸಮಾನ ಅವಕಾಶ ನೀಡಲು ಅವಧಿ ನಿಗದಿ ಬೇಕಿಲ್ಲ, ಸಾಮಾಜಿಕ ತಾರತಮ್ಯ ಅಳಿಯುವವರೆಗೂ ಹಾಗೂ ಸಾಮಾಜಿಕ ಸಮಾನತೆ ಸಾಧಿಸುವವರೆಗೂ ಮೀಸಲಾತಿ ಬೇಕೆಂಬುದು ಬಾಬಾಸಾಹೇಬರ ನಿಲುವಾಗಿತ್ತು. “ಜಾತಿರಹಿತ ಹಾಗೂ ವರ್ಗ ರಹಿತ ಸಮಾಜದ ಕನಸನ್ನು ಕಂಡಿದ್ದ ಅಂಬೇಡ್ಕರ್ ರವರಿಗೆ ಈ ಮೀಸಲಾತಿ ಎನ್ನುವುದು ಸಹಾಯಕ ಸಾಧನವೇ ಹೊರತು ಅಂತಿಮ ಗುರಿಯಲ್ಲ” ಎನ್ನುವ ಅರಿವಿತ್ತು. ಮೀಸಲಾತಿಯನ್ನು ಶಾಶ್ವತವಾಗಿ ಮಾಡಬಾರದು ಮತ್ತು ಸಮಾನತೆಯ ತತ್ವವನ್ನು ಉಲ್ಲಂಘಿಸಬಾರದು, ಸಾಮಾಜಿಕ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರೆಯಬೇಕು” ಎನ್ನುವುದು ಅಂಬೇಡ್ಕರ್ ರವರ ಸ್ಪಷ್ಟ ನಿಲುವಾಗಿತ್ತು ಹಾಗೂ ಅದನ್ನೇ ಸಂವಿಧಾನದಲ್ಲಿ ಹೇಳಲಾಗಿದೆ.
ಆದರೆ ಸಂತೋಷ್ ಹೆಗ್ಡೆಯವರಂತಹ ಮನುವಾದಿಗಳು ಅರ್ಧ ಸತ್ಯವನ್ನು ಮಾತ್ರ ಹೇಳಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾಕೆಂದರೆ 10 ವರ್ಷಗಳ ಅವಧಿಯನ್ನು ರಾಜಕೀಯ ಮೀಸಲಾತಿಗೆ ಹಾಕಲಾಗಿದ್ದು ತಿದ್ದುಪಡಿಯ ಮೂಲಕ ವಿಸ್ತರಿಸಬಹುದೆಂದು ಹೇಳಲಾಗಿದೆ. ಆದರೆ ಈ ಅವಧಿ ಶೈಕ್ಷಣಿಕ ಹಾಗೂ ಸರಕಾರಿ ಉದ್ಯೋಗಕ್ಕೆ ಅನ್ವಯಿಸುವುದಿಲ್ಲ. ಸಾಮಾಜಿಕ ಅಸಮಾನತೆ ಅಳಿಯುವವರೆಗೂ ಮುಂದುವರೆಯುತ್ತದೆ. 10 ವರ್ಷದ ಅವಧಿಯ ನಿಬಂಧನೆಯನ್ನು ರಾಜಕೀಯ ಮೀಸಲಾತಿಯ ಜೊತೆಗೆ ಶಿಕ್ಷಣ, ಉದ್ಯೋಗ ಮೀಸಲಾತಿಗೂ ಸೇರಿಸಿ ಗೊಂದಲವನ್ನುಂಟು ಮಾಡುವ ಪ್ರಯತ್ನ ಈ ಮೀಸಲಾತಿ ವಿರೋಧಿಗಳದ್ದಾಗಿದೆ.
ರಾಜಕೀಯ ಮೀಸಲಾತಿಯ 10 ವರ್ಷಗಳ ಅವಧಿಯನ್ನು ವಿಸ್ತರಿಸದೇ ಹೋಗಿದ್ದರೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ದಲಿತ ದಮನಿತ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವೇ ಇರುತ್ತಿರಲಿಲ್ಲ. ಯಾಕೆಂದರೆ ಈ ಬಲಾಢ್ಯ ಸವರ್ಣೀಯ ಜಾತಿ ವರ್ಗದವರೊಂದಿಗೆ ಚುನಾವಣೆಗಳಲ್ಲಿ ಸೆಣಸಾಡಿ ಗೆಲ್ಲುವ ಸಾಮರ್ಥ್ಯ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ಬರಲು ಸಾಧ್ಯವೂ ಇರಲಿಲ್ಲ. ವರ್ಣಾಶ್ರಮ ವ್ಯವಸ್ಥೆಯ ಪ್ರತಿಪಾದಕರಿಗೆ ಈ ರಾಜಕೀಯ ಮೀಸಲಾತಿ ತೆಗೆದು ಹಾಕಬೇಕು ಹಾಗೂ ಉಳ್ಳವರೇ ಈ ದೇಶ ಆಳಬೇಕು ಎನ್ನುವುದೇ ಬೇಕಾಗಿದೆ. ಅದಕ್ಕಾಗಿ ‘ಮೀಸಲಾತಿ ಸಂವಿಧಾನದ ವಿರೋಧಿ’ ಎನ್ನುವ ನೆಗೆಟಿವ್ ನರೇಶನ್ ಸೃಷ್ಟಿಸಲಾಗುತ್ತಿದೆ.
ಮೀಸಲಾತಿಯನ್ನು ವಿರೋಧಿಸುವ ಈ ಮೇಲ್ಜಾತಿ ಬ್ರಾಹ್ಮಣ ವರ್ಗದವರೇ ಸಂವಿಧಾನಕ್ಕೆ ತಿದ್ದುಪಡಿ ತಂದು EWS ಮೂಲಕ 10% ಮೀಸಲಾತಿಯನ್ನು ಪಡೆದಿದ್ದಾದರೂ ಯಾಕೆ? ಇದು ಸಂವಿಧಾನ ವಿರೋಧಿ ಅಲ್ವಾ? ಸಂವಿಧಾನದಲ್ಲಿ ಎಲ್ಲಿಯಾದರೂ ಆರ್ಥಿಕ ಆಧಾರದಲ್ಲಿ ಮೀಸಲಾತಿ ಕೊಡಬೇಕೆಂದು ಹೇಳಿದೆಯಾ? ಆದರೂ ಈ 2019 ರಲ್ಲಿ ಸಂವಿಧಾನಕ್ಕೆ 103 ನೇ ತಿದ್ದುಪಡಿ ತಂದು EWS ಅಂದರೆ ಆರ್ಥಿಕವಾಗಿ ಹಿಂದುಳಿದ ಮುಂದುವರೆದ ಜಾತಿಗಳಿಗೆ ಶೈಕ್ಷಣಿಕ ಹಾಗೂ ಸರಕಾರಿ ಉದ್ಯೋಗಗಳಲ್ಲಿ 10% ಮೀಸಲಾತಿಯನ್ನು ಮೋದಿ ಸರಕಾರ ಜಾರಿ ಗೊಳಿಸಿತು. 2022 ರಲ್ಲಿ ಸುಪ್ರೀಂ ಕೋರ್ಟ್ ಸಹ ಇದನ್ನು ಮಾನ್ಯ ಮಾಡಿತು.
SC ST OBC ಗಳನ್ನು ಹೊರತು ಪಡಿಸಿ ಕುಟುಂಬದ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವವರು ಈ EWS ಮೀಸಲಾತಿಯನ್ನು ಪಡೆಯಬಹುದಾಗಿದೆ. ವಾರ್ಷಿಕ 8 ಲಕ್ಷ ಅಂದರೆ ತಿಂಗಳಿಗೆ 66,666 ರೂ ಗಳಿಗಿಂತ ಕಡಿಮೆ ವರಮಾನ ಇರುವವರನ್ನು ಆರ್ಥಿಕವಾಗಿ ದುರ್ಬಲರು ಎಂದು ಪರಿಗಣಿಸಲು ಸಾಧ್ಯವೇ? ಈಗಾಗಲೇ ಮೀಸಲಾತಿ ವ್ಯಾಪ್ತಿಗೆ ಬರದೇ ಇರುವ ಮೇಲ್ಜಾತಿಯವರು ಅಂದರೆ ಬ್ರಾಹ್ಮಣರು ಕ್ಷತ್ರಿಯರು ವೈಶ್ಯರು, ಜೈನರು, ಪಾರಸಿಗಳು ಈ EWS ಮೀಸಲಾತಿ ಪಡೆಯಬಹುದಾಗಿದೆ. ಇಲ್ಲಿಗೆ ಆರ್ಥಿಕ ಆಧಾರದಲ್ಲಿ ಮೀಸಲಾತಿ ಎನ್ನುವ ಮೂಲಕ ಮೇಲ್ಜಾತಿ ಸಮುದಾಯಗಳನ್ನೂ ಮೀಸಲಾತಿ ವ್ಯಾಪ್ತಿಗೆ ತರುವ ಮೂಲಕ ಸಂವಿಧಾನದ ಮೀಸಲಾತಿ ಪರಿಕಲ್ಪನೆಗೆ ದ್ರೋಹ ಬಗೆಯಲಾಗಿದೆ.
ತಾಂತ್ರಿಕವಾಗಿ ನೋಡಿದರೆ ಅತೀ ಹೆಚ್ಚು ಮೀಸಲಾತಿಯನ್ನು ಈ EWS ವರ್ಗದವರೇ ಪಡೆಯುವಂತಾಗಿದೆ. ಈ ಹಿಂದೆ ಸುಪ್ರಿಂ ಕೋರ್ಟ್ ಒಟ್ಟು ಮೀಸಲಾತಿ 50% ಮೀರಬಾರದು ಎಂದು ಆದೇಶಿಸಿತ್ತು. SC -15%, ST-7.5%, OBC-27% ಎಂದು ಒಟ್ಟು 49.5 % ಹಂಚಿಕೆ ಮಾಡಲಾಗಿತ್ತು. ಈಗ ಹೆಚ್ಚುವರಿಯಾಗಿ 10% EWS ಕೆಟಗರಿಗೆ ಹಂಚಿಕೆ ಮಾಡಿದ್ದರಿಂದಾಗಿ ಒಟ್ಟು ಮೀಸಲಾತಿ ಪ್ರಮಾಣ 59.5% ಆಗಿದೆ. ಈ EWS ಕೆಟಗರಿಯ ಮೇಲ್ಜಾತಿಯವರು 10% EWS ಜೊತೆಗೆ ಬಾಕಿ ಇರುವ 39.5% ನಲ್ಲೂ ಅವಕಾಶ ಪಡೆಯಬಹುದಾಗಿದೆ. ಜನಸಂಖ್ಯೆಯಲ್ಲಿ ಅತೀ ಹೆಚ್ಚಿರುವ SC, ST, OBC ಗಳಿಗೆ 49.5 % ಮೀಸಲಾತಿ ದೊರೆತರೆ ಅಲ್ಪಸಂಖ್ಯಾತರಾಗಿರುವ ಈ ಮೇಲ್ಜಾತಿಯವರು 10% ಮೀಸಲಾತಿ ಪಡೆಯುವಂತಾಗಿದೆ. ಇದು ಖಂಡಿತಾ ಅಂಬೇಡ್ಕರ್ ರವರ ಆಶಯಕ್ಕೆ ವಿರುದ್ಧವಾಗಿದೆ. ಮತ್ತೆ ಮೇಲ್ಜಾತಿಯವರು ಅದರಲ್ಲೂ ಸಾಮಾಜಿಕವಾಗಿ ಮುಂದುವರೆದ ಬ್ರಾಹ್ಮಣ ಸಮುದಾಯವೇ ಶಿಕ್ಷಣ ಉದ್ಯೋಗದ ಮೀಸಲಾತಿಯಲ್ಲಿ ಹೆಚ್ಚು ಪಾಲನ್ನು ಪಡೆಯುವಂತಾಗಿದೆ.
ಮೀಸಲಾತಿ ಹಿನ್ನಲೆ:

ಭಾರತದಲ್ಲಿ ಮೀಸಲಾತಿ ಎನ್ನುವುದು ಸ್ವಾತಂತ್ರ್ಯ ಪೂರ್ವದಲ್ಲೇ ಇತ್ತು. 1902 ರಲ್ಲಿ ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ 50% ಮೀಸಲಾತಿಯನ್ನು ಜಾರಿಗೊಳಿಸಿದ್ದು ಇದು ಭಾರತದಲ್ಲೇ ಮೊಟ್ಟ ಮೊದಲ ಮೀಸಲಾತಿ ಕ್ರಮವಾಗಿದೆ. ತದನಂತರ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮಿಲ್ಲರ್ ಸಮಿತಿ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಆರಂಭಿಸಿದರು. 1920-30 ರ ದಶಕದಲ್ಲಿ ಮದ್ರಾಸ್, ಬಾಂಬೆ ಪ್ರಾಂತ್ಯಗಳಲ್ಲಿ ಬ್ರಾಹ್ಮಣೇತರರಿಗೂ ಮೀಸಲಾತಿ ಘೋಷಿಸಲಾಯ್ತು. 1932 ರಲ್ಲಿ ಅಂಬೇಡ್ಕರರವರು ಪ್ರಸ್ತಾಪಿಸಿದ ದಲಿತರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ವಿರೋಧಿಸಿ ಗಾಂಧೀಜಿ ಉಪವಾಸ ಕೂತರು. ಆಗ ನಡೆದ ಪೂನಾ ಒಪ್ಪಂದದಲ್ಲಿ ಪ್ರತ್ಯೇಕ ಮತದಾರರ ಬದಲು ರಾಜಕೀಯವಾಗಿ ದಲಿತರಿಗೆ ಪ್ರತ್ಯೇಕ ಸ್ಥಾನಗಳನ್ನು ಮೀಸಲಿಡಲು ನಿರ್ಧರಿಸಲಾಯ್ತು.
ಸಂವಿಧಾನದಲ್ಲಿ ಅನುಚ್ಛೇದ 330, 332 ರಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ SC, ST ಸಮುದಾಯದವರಿಗೆ ಸ್ಥಾನಗಳನ್ನು ಮೀಸಲಿಡಲಾಯ್ತು. ಅನುಚ್ಛೇದ 334 ರಲ್ಲಿ ರಾಜಕೀಯ ಮೀಸಲಾತಿಗೆ ಆರಂಭದಲ್ಲಿ 10 ವರ್ಷಗಳ ಮಿತಿ ನಿಗದಿಯಾಗಿದ್ದು ನಂತರ ವಿಸ್ತರಿಸಲಾಯ್ತು.
ಸ್ವಾತಂತ್ರ್ಯ ಬಂದ ನಂತರ 1950 ರಲ್ಲಿ ಸಂವಿಧಾನ ಜಾರಿಯಾಯ್ತು. ಅನುಚ್ಛೇದ15(4) ಮತ್ತು ಅನುಚ್ಛೇದ 16(4) ರ ಪ್ರಕಾರ SC, ST ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡಲಾಯ್ತು. 1979-80 ರಲ್ಲಿ ಬಿ.ಪಿ.ಮಂಡಲ್ ನೇತೃತ್ವದ ಎರಡನೇ ಹಿಂದುಳಿದ ವರ್ಗಗಳ ಆಯೋಗವು ಇತರೆ ಹಿಂದುಳಿದ ವರ್ಗಗಳಿಗೆ ( OBC) 27% ಮೀಸಲಾತಿ ಶಿಫಾರಸ್ಸು ಮಾಡಿತು. 1990 ರಲ್ಲಿ ಮಂಡಲ್ ವರದಿಯನ್ನು ಆಗ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ರವರು ಅನುಷ್ಠಾನಗೊಳಿಸಿದಾಗ ದೇಶಾದ್ಯಂತ ಮೇಲ್ಜಾತಿಯವರಿಂದ ತೀವ್ರ ಪ್ರತಿಭಟನೆ ನಡೆಯಿತು.. 1992 ರಲ್ಲಿ ಇಂದ್ರಾ ಸಾಹ್ನಿ ಪ್ರಕರಣದ ಮೂಲಕ ಸುಪ್ರೀಂ ಕೋರ್ಟ್ OBC ಮೀಸಲಾತಿಯನ್ನು ಮಾನ್ಯ ಮಾಡಿ ಒಟ್ಟು ಮೀಸಲಾತಿಯನ್ನು 50% ಗೆ ಮಿತಿಗೊಳಿಸಿತು.
ಹೀಗೆ, ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯ ಮತ್ತು ಐತಿಹಾಸಿಕ ಅನ್ಯಾಯ ಸರಿಪಡಿಸುವ ಉದ್ದೇಶದಿಂದ ಆರಂಭವಾಗಿ ಕಾಲಕ್ರಮೇಣ SC, ST ಗಳಿಂದ OBC ಗೆ ನಂತರ EWS ಗೆ ಮೀಸಲಾತಿ ವಿಸ್ತರಿಸುತ್ತಾ ಬರಲಾಗಿದ್ದು ಈಗ ಎಲ್ಲಾ ಜಾತಿ ಜನಾಂಗದವರೂ ಮೀಸಲಾತಿಯ ವ್ಯಾಪ್ತಿಗೆ ಬಂದಿದ್ದು ಅದರಲ್ಲಿ ಮತ್ತೆ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾಗಿರುವ ಮೇಲ್ಜಾತಿ ಸಮುದಾಯದವರೇ ಹೆಚ್ಚು ಪಾಲನ್ನು ಪಡೆಯುವಂತಾಗಿದ್ದು ಸಂವಿಧಾನದ ಮೀಸಲಾತಿ ಆಶಯಕ್ಕೆ ಮಾಡಿದ ಅನ್ಯಾಯವಾಗಿದೆ.
ಹೀಗಿದ್ದರೂ ಸಂತೋಷ್ ಹೆಗ್ಡೆಯಂತವರು ಸಾಮಾಜಿಕ ಮೀಸಲಾತಿಯನ್ನು ತೆಗೆದುಹಾಕಿ ಆರ್ಥಿಕ ಆಧಾರದ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಬಯಸುತ್ತಿದ್ದಾರೆ. ಈ ರೀತಿಯ ಬ್ರಾಹ್ಮಣ್ಯವಾದವು ಸಂವಿಧಾನದ ಮೀಸಲಾತಿ ಉದ್ದೇಶವನ್ನೇ ಬುಡಮೇಲು ಮಾಡಿ ಮನುವಾದಿ ಶ್ರೇಣೀಕೃತ ವ್ಯವಸ್ಥೆಯನ್ನು ಮರುಸ್ಥಾಪಿಸುವ ಹುನ್ನಾರದ ಪ್ರಯತ್ನವಾಗಿದೆ.
ಅಂಬೇಡ್ಕರ್ ರವರ ಮೀಸಲಾತಿಯ ಉದ್ದೇಶ
* ಸಾಮಾಜಿಕ ನ್ಯಾಯ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವುದೇ ಮೀಸಲಾತಿಯ ಆಶಯವಾಗಿದೆ. ಶತಮಾನಗಳಿಂದ ಜಾತಿ ತಾರತಮ್ಯ, ಅಸ್ಪೃಶ್ಯತೆ ಹಾಗೂ ಅವಕಾಶ ವಂಚನೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯದ ಸಾಧನವಾಗಿದೆ.
* ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಹಿಂದುಳಿದ ಸಮುದಾಯಗಳಿಗೆ ಪ್ರಾತಿನಿಧ್ಯತೆ ನೀಡಲು ಮೀಸಲಾತಿ ಅತ್ಯಂತ ಅಗತ್ಯವಾಗಿದೆ. ಇಲ್ಲದೇ ಹೋದರೆ ಸಮಾಜದಲ್ಲಿ ಮತ್ತೆ ಮೊದಲಿನಂತೆ ಅಸಮಾನತೆ ಮುಂದುವರೆಯುತ್ತದೆ.
* ಸಾಮಾಜಿಕ ತಾರತಮ್ಯ ನಿವಾರಣೆಯು ಸಂವಿಧಾನದ ಮೂಲಕ ಮೀಸಲಾತಿ ಜಾರಿಯಾದಾಗಿನಿಂದ ಸಮಾಜದ ಕೆಳ ಸ್ತರದಲ್ಲಿದ್ದ ದಲಿತ ಹಿಂದುಳಿದ ಸಮುದಾಯಗಳು ಮಧ್ಯಮ ವರ್ಗಕ್ಕೆ ಪ್ರಮೋಟ್ ಆಗಿವೆ. ಆ ವರ್ಗಗಳಲ್ಲೂ ಸಾಕ್ಷರತೆ ಹೆಚ್ಚಾಗಿದ್ದು ಒಂದಿಷ್ಟು ಉದ್ಯೋಗಗಳೂ ದೊರೆತಿವೆ. ಇದು ಸಾಮಾಜಿಕ ಸಮಾನತೆ ಸಾಧಿಸುವ ಗುರಿ ಮುಟ್ಟುವ ಪ್ರಯತ್ನವಾಗಿದೆ.
* ಜಾತಿ ತಾರತಮ್ಯ – ಜಾತಿ ಆಧಾರಿತ ತಾರತಮ್ಯ ಸಂವಿಧಾನ ಜಾರಿಯಾಗಿ 70 ವರ್ಷಗಳಾದರೂ ಇನ್ನೂ ಜಾರಿಯಲ್ಲಿದೆ. ಅಸ್ಪೃಶ್ಯತೆ ಇನ್ನೂ ಕೊನೆಗೊಂಡಿಲ್ಲ. ದಲಿತರ ಮೇಲೆ ಸವರ್ಣೀಯರ ದಾಳಿ ಮುಂದುವರೆದಿದೆ. ಸಾಮಾಜಿಕವಾಗಿ ಹಿಂದುಳಿದವರ ಸಂಖ್ಯೆಯೂ ಸಾಕಷ್ಟಿದೆ.
ವಸ್ತುಸ್ಥಿತಿ ಹೀಗಿರುವಾಗ, ಮೀಸಲಾತಿ ಎನ್ನುವುದು ದಮನಿತ ಶೋಷಿತ ಸಮುದಾಯಗಳಿಗೆ ಊರುಗೋಲಾಗಿರುವಾಗ ಮೀಸಲಾತಿಯನ್ನೇ ರದ್ದುಗೊಳಿಸಿ ಎನ್ನುವ ಯೋಚನೆಯೇ ಸಂವಿಧಾನ ವಿರೋಧಿಯಾಗಿದೆ, ಬಹುಜನರ ವಿರೋಧಿಯಾಗಿದೆ.
ಅಚ್ಚರಿಯ ಸಂಗತಿ ಏನೆಂದರೆ ಮೀಸಲಾತಿ ರದ್ಧತಿ ಕುರಿತು ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ವ್ಯತಿರಿಕ್ತ ಹೇಳಿಕೆ ಕೊಟ್ಟ ಸಂತೋಷ ಹೆಗ್ಡೆಯವರ ಮೀಸಲಾತಿ ವಿರೋಧಿ ಹೇಳಿಕೆ ಕುರಿತು ದಲಿತ ಸಂಘಟನೆಗಳು ಮೌನ ವಹಿಸಿರುವುದು. ಅದಕ್ಕಿಂತಲೂ ವಿಸ್ಮಯದ ಸಂಗತಿ ಏನೆಂದರೆ ಸಂಸತ್ತಿನಲ್ಲಿ 50% ಮಹಿಳಾ ಮೀಸಲಾತಿ ಜಾರಿಗೆ ಪ್ರಯತ್ನಿಸುತ್ತಿರುವಾಗ “ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಅಗತ್ಯವಿಲ್ಲ” ಎಂದು ಸಂತೋಷ್ ಹೆಗ್ಡೆಯವರು ಮಹಿಳಾ ಕಾಲೇಜಿನಲ್ಲೇ ಮಹಿಳಾ ವಿರೋಧಿ ಹೇಳಿಕೆ ಕೊಟ್ಟಿದ್ದರೂ ಮಹಿಳಾ ಸಂಘಟನೆಗಳು ಸುಮ್ಮನೇ ಇರುವುದು. ಇಂತಹ ಜನವಿರೋಧಿ ಸಂವಿಧಾನ ದ್ರೋಹಿ ಹೇಳಿಕೆಯನ್ನು ಒಬ್ಬ ಮಾಜಿ ನ್ಯಾಯಮೂರ್ತಿಗಳು ಕೊಟ್ಟಿದ್ದರೂ ಜಾಣ ಮೌನಕ್ಕೆ ಜಾರಿರುವ ಸುದ್ದಿ ಮಾಧ್ಯಮಗಳ ಸಾಮಾಜಿಕ ಬದ್ಧತೆ ಕೂಡಾ ಇಲ್ಲಿ ಪ್ರಶ್ನಾರ್ಹವಾಗಿದೆ.
ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿ ಯಾರೇ ಮಾತಾಡಲಿ ಅವರನ್ನು ಪ್ರಬಲವಾಗಿ ವಿರೋಧಿಸಲೇಬೇಕಿದೆ. ಮೀಸಲಾತಿ ಎನ್ನುವುದು ಆರ್ಥಿಕ ಅಧಾರದಲ್ಲಿ ಅಲ್ಲ, ಸಾಮಾಜಿಕ ಅಸಮಾನತೆಯ ಆಧಾರದಲ್ಲಿಯೇ ಜಾರಿಯಾಗಬೇಕಿದೆ ಎಂದು ಒತ್ತಾಯಿಸಲೇಬೇಕಿದೆ. ಸಾಮಾಜಿಕ ನ್ಯಾಯ ಸಂವಿಧಾನದ ಆತ್ಮ ಎನ್ನುವುದನ್ನು ಎತ್ತಿ ಹಿಡಿಯಬೇಕಿದೆ.
ಶಶಿಕಾಂತ ಯಡಹಳ್ಳಿ
ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ- ಜೆನ್ ಝೀ ಗಾಯಕ್ಕೆ ಭಾಗವತರ ಮುಲಾಮು


