ಬೆಂಗಳೂರು: ನಗರದ ಖಾಲಿ ನಿವೇಶನಗಳಲ್ಲಿ ಶೇಖರಣೆಯಾಗಿರುವ ಕಟ್ಟಡ ತ್ಯಾಜ್ಯ, ಕಳೆಗಿಡಗಳು ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸಲು ಆಸ್ತಿ ಮಾಲೀಕರಿಗೆ ನೀಡಲಾಗಿದ್ದ ಗಡುವನ್ನು ಆಗಸ್ಟ್ 22ರವರೆಗೆ ವಿಸ್ತರಿಸಲಾಗಿದೆ. ಮೂಲ ಗಡುವು ಆಗಸ್ಟ್ 15ಕ್ಕೆ ನಿಗದಿಯಾಗಿತ್ತು. ಸಾರ್ವಜನಿಕರಿಂದ ಹೆಚ್ಚಿನ ಸಮಯಾವಕಾಶ ನೀಡುವಂತೆ ಬಂದ ಮನವಿಗಳನ್ನು ಪರಿಗಣಿಸಿ ಗಡುವು ವಿಸ್ತರಿಸಿರುವುದಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಇಲಾಖೆ ತಿಳಿಸಿದೆ.
‘ತ್ಯಾಜ್ಯದಿಂದ ಸ್ವಾತಂತ್ರ್ಯ’ (Freedom from Waste) ಅಭಿಯಾನದಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಬಿಡಿಎ, ಬೆಸ್ಕಾಂ, ಕೆ-ರೈಡ್, ಬಿಎಂಆರ್‌ಸಿಎಲ್ ಹಾಗೂ ಕೆಐಎಡಿಬಿ ಸಂಸ್ಥೆಗಳ ಸಮನ್ವಯದಲ್ಲಿ ಬೆಂಗಳೂರನ್ನು ಸ್ವಚ್ಛ ಹಾಗೂ ಸುಂದರವಾಗಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಅಭಿಯಾನದ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಸುರಿಯಲಾಗಿರುವ ಕಟ್ಟಡ ತ್ಯಾಜ್ಯ, ಬೆಳೆದಿರುವ ಕಳೆಗಿಡಗಳು ಹಾಗೂ ಇತರ ತ್ಯಾಜ್ಯ ತೆರವುಗೊಳಿಸಲು ನಗರದಾದ್ಯಂತ 100 ಟ್ರಕ್‌ಗಳು ಮತ್ತು 25 ಜೆಸಿಬಿ/ಎಸ್ಕವೇಟರ್‌ಗಳನ್ನು ನಿಯೋಜಿಸಲಾಗಿದೆ. ಇದುವರೆಗೆ ಅಭಿಯಾನದ ಮೂಲಕ 30 ಸಾವಿರ ಟನ್‌ಗೂ ಹೆಚ್ಚು ತ್ಯಾಜ್ಯ ಮತ್ತು ಕಳೆಗಿಡಗಳನ್ನು ತೆರವುಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಾಲುದಾರಿಗಳ ತೆರವು ಮತ್ತು ವಾರಸುದಾರರಿಲ್ಲದ ವಾಹನಗಳ ತೆರವು ಕಾರ್ಯಗಳ ಮುಂದುವರಿದ ಭಾಗವಾಗಿ ಸಾರ್ವಜನಿಕ ಸ್ಥಳಗಳನ್ನು ಮರುಸ್ಥಾಪಿಸಿ, ಬೆಂಗಳೂರನ್ನು ಹೆಚ್ಚು ಸ್ವಚ್ಛ, ಸುರಕ್ಷಿತ ಹಾಗೂ ಸಂಚಾರಕ್ಕೆ ಅನುಕೂಲಕರವಾಗಿಸುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ.
ಆದರೆ ನಗರದ ಸ್ವಚ್ಛತೆ ಕಾಪಾಡುವಲ್ಲಿ ಖಾಲಿ ನಿವೇಶನಗಳ ಮಾಲೀಕರ ಸಹಕಾರವೂ ಅತ್ಯಗತ್ಯ ಎಂದು ಜಿಬಿಎ ತಿಳಿಸಿದೆ. ಮಾಲೀಕರು ತಮ್ಮ ನಿವೇಶನಗಳಲ್ಲಿ ಶೇಖರಣೆಯಾಗಿರುವ ಕಟ್ಟಡ ತ್ಯಾಜ್ಯ ಹಾಗೂ ಬೆಳೆದಿರುವ ಕಳೆಗಿಡಗಳನ್ನು ಸ್ವತಃ ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ.
ಆಸ್ತಿ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದಲ್ಲಿ, ಪ್ರಾಧಿಕಾರವೇ ಸ್ಥಳಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ತಗುಲುವ ವೆಚ್ಚವನ್ನು ಸಂಬಂಧಪಟ್ಟ ಆಸ್ತಿ ಮಾಲೀಕರಿಂದಲೇ ವಸೂಲಿ ಮಾಡಲಾಗುವುದು ಎಂದು ಜಿಬಿಎ ಸ್ಪಷ್ಟಪಡಿಸಿದೆ.
ನಿವೇಶನ ಸ್ವಚ್ಛಗೊಳಿಸುವ ಕಾರ್ಯಕ್ಕೆ ಅನ್ವಯಿಸುವ ದರಗಳನ್ನು ಸರ್ಕಾರದ Schedule of Rates (SR) ಆಧಾರದ ಮೇಲೆ ನಿಗದಿಪಡಿಸಲಾಗಿದೆ. ನಿವೇಶನದ ಗಾತ್ರ, ತ್ಯಾಜ್ಯದ ಪ್ರಮಾಣ, ಕೈಗೊಳ್ಳಬೇಕಾದ ಇತರ ಕೆಲಸಗಳು ಹಾಗೂ ಸಾಗಣೆ ವೆಚ್ಚ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ವೆಚ್ಚ ಲೆಕ್ಕ ಹಾಕಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಈ ದರಗಳು ಹೆಚ್ಚಾಗಿವೆ ಎಂಬ ಸಾರ್ವಜನಿಕರ ಕಳವಳವನ್ನೂ ಇಲಾಖೆ ಗಮನಿಸಿದ್ದು, ಮಾಲೀಕರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡರೆ ಹೆಚ್ಚುವರಿ ವೆಚ್ಚವನ್ನು ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದೆ. ಆಸ್ತಿ ಮಾಲೀಕರು ಖಾಸಗಿ ಗುತ್ತಿಗೆದಾರರನ್ನು ನೇಮಿಸಿಕೊಂಡು ತಮ್ಮ ನಿವೇಶನಗಳನ್ನು ಸ್ವತಃ ಸ್ವಚ್ಛಗೊಳಿಸಿಕೊಳ್ಳುವುದು, ಪ್ರಾಧಿಕಾರದಿಂದ ತೆರವು ಕಾರ್ಯ ನಡೆಸಿಸಿ ನಂತರ ವೆಚ್ಚ ವಸೂಲಿ ಮಾಡುವುದಕ್ಕಿಂತ ಕಡಿಮೆ ವೆಚ್ಚದಾಯಕವಾಗುವ ಸಾಧ್ಯತೆಯಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸ್ತಿ ಮಾಲೀಕರಿಗೆ ಇದೀಗ ಆಗಸ್ಟ್ 22ರವರೆಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ತಮ್ಮ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಜಿಬಿಎ ಮನವಿ ಮಾಡಿದೆ.
ಸಾರ್ವಜನಿಕ ಸ್ಥಳಗಳಿಂದ ತ್ಯಾಜ್ಯ ತೆರವುಗೊಳಿಸುವುದು ಸರ್ಕಾರಿ ಸಂಸ್ಥೆಗಳ ಹೊಣೆಗಾರಿಕೆಯಾದರೆ, ಖಾಸಗಿ ಆಸ್ತಿಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವುದು ಆಸ್ತಿ ಮಾಲೀಕರ ಜವಾಬ್ದಾರಿಯಾಗಿದೆ ಎಂದು ಇಲಾಖೆ ತಿಳಿಸಿದೆ.
ಸರ್ಕಾರಿ ಸಂಸ್ಥೆಗಳ ಸಮನ್ವಯದ ಕಾರ್ಯ ಹಾಗೂ ನಾಗರಿಕರ ಸಕ್ರಿಯ ಸಹಭಾಗಿತ್ವದ ಮೂಲಕ ಸ್ವಚ್ಛ, ಸುಂದರ ಮತ್ತು ಸುಗಮ ಬೆಂಗಳೂರನ್ನು ನಿರ್ಮಿಸುವುದೇ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದ ಗುರಿಯಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

