ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರ ಮೇಲೆ ಹೊರರಾಜ್ಯಗಳಿಂದ ಬಂದಿರುವ ಕೆಲವರಿಂದ ಹಲ್ಲೆ, ಬೆದರಿಕೆ, ದೌರ್ಜನ್ಯ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಗೌರವ ತೋರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಮತ್ತು ಸ್ಥಳೀಯರ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯವ್ಯಾಪಿ ಜನಜಾಗೃತಿ ಹಾಗೂ ಹೋರಾಟದ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದೆ.
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈ ಕುರಿತು ಹೇಳಿಕೆ ನೀಡಿದ್ದು, ಕರ್ನಾಟಕಕ್ಕೆ ಉದ್ಯೋಗ, ವ್ಯಾಪಾರ ಹಾಗೂ ಉತ್ತಮ ಬದುಕಿನ ಉದ್ದೇಶದಿಂದ ಬರುವವರನ್ನು ಕನ್ನಡಿಗರು ಸದಾ ಸ್ವಾಗತಿಸಿದ್ದಾರೆ. ಆದರೆ ಇಲ್ಲಿಗೆ ಬಂದು ಕಾನೂನು ಉಲ್ಲಂಘಿಸುವುದು, ಸ್ಥಳೀಯರ ಮೇಲೆ ಹಲ್ಲೆ ನಡೆಸುವುದು, ಬೆದರಿಕೆ ಹಾಕುವುದು ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಗೌರವ ತೋರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
“ಕರ್ನಾಟಕವನ್ನು ನಾವು ಯಾರಿಗೂ ಬರೆದುಕೊಟ್ಟಿಲ್ಲ. ಕನ್ನಡಿಗರ ಹಕ್ಕುಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ” ಎಂದು ಅವರು ಕಿಡಿಕಾರಿದ್ದಾರೆ. ಹೊರರಾಜ್ಯಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ವಲಸೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಉದ್ಯೋಗದ ಸ್ಪರ್ಧೆ, ವಸತಿ ಹಾಗೂ ಬಾಡಿಗೆ ದರಗಳ ಏರಿಕೆ, ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯದ ಮೇಲಿನ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಮಗ್ರ ವಲಸೆ ನೀತಿಯನ್ನು ರೂಪಿಸಿ, ವಲಸೆಯಿಂದ ಉಂಟಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯಾದಾಗ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಖಾಸಗಿ ಕ್ಷೇತ್ರದಲ್ಲಿಯೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾನೂನು ಮತ್ತು ಅನುಷ್ಠಾನ ವ್ಯವಸ್ಥೆ ರೂಪಿಸಬೇಕು. ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸೇವೆಗಳು ಹಾಗೂ ವ್ಯಾಪಾರ-ವಹಿವಾಟುಗಳಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಕಡ್ಡಾಯವಾಗಿ ಖಚಿತಪಡಿಸಬೇಕು ಎಂದು ಅವರು ಹೇಳಿದ್ದಾರೆ.

ಅಕ್ರಮ ವಲಸೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿಚಾರದಲ್ಲಿಯೂ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು. ಕರ್ನಾಟಕಕ್ಕೆ ಬರುವ ಪ್ರತಿಯೊಬ್ಬರೂ ಇಲ್ಲಿನ ಕಾನೂನು, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಯಾರೇ ಆಗಿದ್ದರೂ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕನ್ನಡಿಗರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕನ್ನಡಿಗರ ಮೇಲೆ ಹಲ್ಲೆ ನಡೆಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರ ನೀಡಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.
“ಕನ್ನಡಿಗರ ಸಹನೆಯನ್ನು ದೌರ್ಬಲ್ಯವೆಂದು ಯಾರೂ ಭಾವಿಸಬಾರದು. ಕರ್ನಾಟಕದಲ್ಲಿ ಬದುಕುವ ಹಕ್ಕು ಎಲ್ಲರಿಗೂ ಇದೆ; ಆದರೆ ಕನ್ನಡಿಗರ ಹಕ್ಕುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ” ಎಂದು ನಾರಾಯಣಗೌಡ ಎಚ್ಚರಿಸಿದ್ದಾರೆ.
ರಾಜ್ಯಾದ್ಯಂತ ಜನರಲ್ಲಿ ಈ ವಿಚಾರಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರದ ಮುಂದೆ ಸಮಗ್ರ ಬೇಡಿಕೆಗಳನ್ನು ಮಂಡಿಸಲಾಗುವುದು. ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.


