ದಮಾಸ್ಕಸ್ : ಸಿರಿಯಾದ ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್ ಮತ್ತು ಅವರ ಕಿರಿಯ ಸಹೋದರನಿಗೆ ಸಿರಿಯಾದ ನ್ಯಾಯಾಲಯವೊಂದು ಮಂಗಳವಾರ ಮರಣದಂಡನೆ ವಿಧಿಸಿದೆ.
ಸಿರಿಯಾದಲ್ಲಿ ಸುಮಾರು ಐದು ಲಕ್ಷ ಜನರ ಸಾವಿಗೆ ಕಾರಣವಾದ 14 ವರ್ಷಗಳ ಸಂಘರ್ಷದ ಅವಧಿಯಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧಾಪರಾಧಗಳನ್ನು ಎಸಗಿದ ಆರೋಪದ ಮೇಲೆ ಈ ತೀರ್ಪು ನೀಡಲಾಗಿದೆ.
ದಕ್ಷಿಣ ಪ್ರಾಂತ್ಯದ ದಾರಾದಲ್ಲಿ ದಮನಕಾರಿ ಕ್ರಮದ ನೇತೃತ್ವ ವಹಿಸಿದ್ದಕ್ಕಾಗಿ ಅಸ್ಸಾದ್ ಅವರ ಸೋದರಸಂಬಂಧಿ ಅಟೆಫ್ ನಜೀಬ್‌ಗೂ ಇದೇ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ. ನ್ಯಾಯಾಧೀಶರು ತೀರ್ಪನ್ನು ಓದುತ್ತಿದ್ದಾಗ, ಬಿಗಿ ಭದ್ರತೆಯ ನಡುವೆ ನಜೀಬ್ ಕೈದಿಯ ಸಮವಸ್ತ್ರ ಧರಿಸಿ ಕಟಕಟೆಯಲ್ಲಿ ನಿಂತಿದ್ದರು.
ಡಿಸೆಂಬರ್ 2014ರಲ್ಲಿ ಬಂಡುಕೋರರು ದಮಾಸ್ಕಸ್‌ಗೆ ನುಗ್ಗಿದ ನಂತರ ಅಸ್ಸಾದ್ ಮತ್ತು ಅವರ ಸಹೋದರ ಮಹೇರ್ ರಷ್ಯಾಕ್ಕೆ ಪಲಾಯನ ಮಾಡಿದ್ದರು. ಈ ದಮನಕಾರಿ ಕ್ರಮವೇ ಅಲ್ಲಿನ ಧಂಗೆಗೆ ಮತ್ತು ನಂತರದ ಅಂತರ್ಯುದ್ಧಕ್ಕೆ ಕಾರಣವಾಗಿತ್ತು. ನಂತರ ನಜೀಬ್ ಅವರನ್ನು ಬಂಧಿಸಲಾಯಿತು
ನಜೀಬ್ ಸಿರಿಯನ್ ಸೇನೆಯ ಮಾಜಿ ಬ್ರಿಗೇಡಿಯರ್ ಜನರಲ್ ಆಗಿದ್ದು, 2011ರಲ್ಲಿ ಅಸ್ಸಾದ್ ಆಡಳಿತದಡಿ ದಕ್ಷಿಣ ಸಿರಿಯಾದ ದಾರಾ ಪ್ರಾಂತ್ಯದಲ್ಲಿ ರಾಜಕೀಯ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದರು.

