ಬೆಂಗಳೂರು: ಜೈಲಿನಲ್ಲಿರುವ ನಟ ದರ್ಶನ್ ಗೆ ಮಾಫಿ ಸಾಕ್ಷಿ ಆತಂಕ ಶುರುವಾಗಿದೆ. ಕಳೆದ ರಾತ್ರಿಯಿಡೀ ದರ್ಶನ್ ಊಟ ಹಾಗೂ ನಿದ್ದೆ ಮಾಡದೇ ಚಿಂತೆಗೊಳಗಾಗಿ ಒದ್ದಾಡಿದ್ದಾರೆ ಎನ್ನಲಾಗಿದೆ.
ಮಾಫಿ ಸಾಕ್ಷಿಯಾಗಲು ಕೋರಿ ಪ್ರಕರಣದ 14ನೇ ಆರೋಪಿ ಪ್ರದೋಷ್, ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ವಿಚಾರಣೆ ನಡೆದಿದೆ.
ಗುರುವಾರ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿವೆ. ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಕೆಲವು ಷರತ್ತುಗಳನ್ನಿಟ್ಟು ಮಾಫಿ ಸಾಕ್ಷಿಗೆ ಒಪ್ಪಿಗೆ ಸೂಚಿಸಿದ್ದಾರೆ. ಪ್ರದೋಷ್ ಅವರ ಮಾಫಿಸಾಕ್ಷಿಗೆ ಪ್ರಾಸಿಕ್ಯೂಷನ್ ಷರತ್ತುಬದ್ಧ ಒಪ್ಪಿಗೆ ಕೊಟ್ಟಿದ್ದು, ಪ್ರಕರಣದಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
ಆದರೆ ಇದಕ್ಕೆ ದರ್ಶನ್ ಪರ ವಕೀಲ ಹಸ್ಮತ್ ಪಾಷಾ ಅವರು, ಇದು ಸಾಕ್ಷಿಗಳು ಕೊರತೆ ಇರುವ ಪ್ರಕರಣವಲ್ಲ. ಇದರಲ್ಲಿ ಸಾಕಷ್ಟು ಸಾಕ್ಷಿಗಳಿವೆಂದು ಪ್ರಾಸಿಕ್ಯೂಷನ್ ಹೇಳಿದೆ. ಹೀಗಾಗಿಯೂ ಮಾಫಿ ಸಾಕ್ಷಿ ಪಡೆಯಲು ಮುಂದಾಗಿರುವುದು ಯಾಕೆ? ಇದಕ್ಕೆ ನಾವು ಆಕ್ಷೇಪಣೆ ಸಲ್ಲಿಕೆ ಮಾಡುತ್ತೇವೆ ಎಂದಿದ್ದಾರೆ.
ಹಾಗೆಯೇ, ರವಿಶಂಕರ್, ವಿನಯ್ ಮಾಫಿ ಸಾಕ್ಷಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪ್ರದೋಷ್ ಸಲ್ಲಿಸಿರುವ ಅರ್ಜಿಗೆ ಉಳಿದ ಆರೋಪಿಗಳ ಆಕ್ಷೇಪ ಪರಿಗಣಿಸಬೇಕೇ ಬೇಡವೇ ಎಂಬ ಬಗ್ಗೆ ಸೋಮವಾರ (ಆ.10) ಕೋರ್ಟ್ ಆದೇಶ ನೀಡಲಿದೆ.

