ಪಾಟ್ನಾ: ಬಿಹಾರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಾಂಕೀಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷದ ಸಂಸ್ಥಾಪಕ ಹಾಗೂ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇದು ಅವರ ಮೊದಲ ಚುನಾವಣಾ ಸ್ಪರ್ಧೆಯಾಗಿದ್ದು, ಮೊದಲ ಪ್ರಯತ್ನದಲ್ಲೇ ಬಿಜೆಪಿ ಕೋಟೆಯನ್ನು ಭೇದಿಸಿರುವುದು ರಾಷ್ಟ್ರೀಯ ರಾಜಕೀಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇದು ಬಿಜೆಪಿ ಭದ್ರಕೋಟೆಗೆ ಬಿದ್ದ ದೊಡ್ಡ ಹೊಡೆತ ಎಂದೇ ಪರಿಗಣಿಸಲಾಗುತ್ತಿದ್ದು,ಬಾಂಕೀಪುರ ಕ್ಷೇತ್ರವು ಕಳೆದ ಮೂರು ದಶಕಗಳಿಂದ ಬಿಜೆಪಿಯ ಪ್ರಬಲ ನೆಲೆಯಾಗಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ತನ್ನ ಪ್ರಾಬಲ್ಯ ಉಳಿಸಿಕೊಂಡಿತ್ತು. ಆದರೆ ಈ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಅವರನ್ನು ಸುಮಾರು 19 ಸಾವಿರ ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಜಯ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದು ಪ್ರಶಾಂತ್ ಕಿಶೋರ್ ಅವರ ಮೊದಲ ಚುನಾವಣಾ ಗೆಲುವಾಗಿದ್ದು, ಚುನಾವಣಾ ತಂತ್ರಗಾರನಿಂದ ನೇರ ರಾಜಕೀಯ ನಾಯಕನಾಗಿ ಅವರ ಪ್ರವೇಶಕ್ಕೆ ಜನರ ಬೆಂಬಲ ದೊರೆತಿದೆ. 2025ರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದ ಜನ ಸುರಾಜ್ ಪಕ್ಷಕ್ಕೆ ಈ ಗೆಲುವು ಹೊಸ ಉತ್ಸಾಹ ತುಂಬಿದೆ. ಮುಂಬರುವ ಬಿಹಾರ ರಾಜಕೀಯ ಸಮೀಕರಣಗಳ ಮೇಲೆ ಈ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಾಂಕೀಪುರ ಉಪಚುನಾವಣೆಯನ್ನು ಕೇವಲ ಒಂದು ಕ್ಷೇತ್ರದ ಚುನಾವಣೆ ಎಂದು ನೋಡಲಾಗಿರಲಿಲ್ಲ. ಇದು ಬಿಜೆಪಿಯ ನಗರ ಮತಬ್ಯಾಂಕ್ಗೆ ಪರೀಕ್ಷೆಯೇ ಆಗಿತ್ತಲ್ಲದೆ, ಪ್ರಶಾಂತ್ ಕಿಶೋರ್ ಅವರ ರಾಜಕೀಯ ಭವಿಷ್ಯದ ಅಗ್ನಿಪರೀಕ್ಷೆಯಾಗಿತ್ತು. ಬಿಹಾರದ ಹೊಸ ರಾಜಕೀಯ ಪರ್ಯಾಯದ ಸೂಚಕ ಎಂಬ ಕಾರಣಗಳಿಂದ ದೇಶದಾದ್ಯಂತ ಗಮನ ಸೆಳೆದಿತ್ತು.
ಈ ಫಲಿತಾಂಶವು ಬಿಹಾರ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಜನ ಸುರಾಜ್ ಪಕ್ಷದ ಉದಯವನ್ನು ಸೂಚಿಸುವುದರ ಜೊತೆಗೆ, ಬಿಜೆಪಿಗೆ ತನ್ನ ಸಾಂಪ್ರದಾಯಿಕ ಭದ್ರಕೋಟೆಯಲ್ಲೇ ದೊಡ್ಡ ರಾಜಕೀಯ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ.

