ಬೆಂಗಳೂರು: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಚಿತ್ರದ ಟ್ರೇಲರ್ ಮತ್ತು ಮೊದಲ ನೋಟ ಬಿಡುಗಡೆಯಾದ ಬಳಿಕ ದೇಶ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಚಿತ್ರದ ಕುರಿತು ಚರ್ಚೆ ಆರಂಭವಾಗಿದೆ. ಈ ಚರ್ಚೆಯ ಕೇಂದ್ರ ಬಿಂದುವಾಗಿ ನಟ ಯಶ್ ಅಭಿನಯಿಸಿರುವ ರಾವಣನ ಪಾತ್ರ ಹೊರಹೊಮ್ಮಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ರಾಮಾಯಣದ ಕಥಾನಕಗಳಲ್ಲಿ ರಾಮನ ಪಾತ್ರವೇ ಹೆಚ್ಚು ಗಮನ ಸೆಳೆಯುತ್ತದೆ. ಆದರೆ ಈ ಬಾರಿ ರಾವಣನ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿರುವುದು ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಯಶ್ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿರುವುದು ಭಾರತೀಯ ಚಿತ್ರರಂಗದ ಅತ್ಯಂತ ಧೈರ್ಯಶಾಲಿ ಕಾಸ್ಟಿಂಗ್ ನಿರ್ಧಾರಗಳಲ್ಲಿ ಒಂದೆಂದು ಹಲವರು ವಿಶ್ಲೇಷಿಸುತ್ತಿದ್ದಾರೆ. ಕೆಜಿಎಫ್ ಚಿತ್ರದ ಯಶಸ್ಸಿನ ಬಳಿಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿರುವ ಯಶ್, ನಾಯಕನ ಬದಲು ಪ್ರತಿನಾಯಕನ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚರ್ಚೆ ವ್ಯಾಪಾಕವಾಗಿ ನಡೆಯುತ್ತಿದೆ.
ಚಿತ್ರದ ಸಹ ನಿರ್ಮಾಪಕರೂ ಆಗಿರುವ ಯಶ್, ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಅಭಿನಯದ ಜೊತೆಗೆ ಸೃಜನಾತ್ಮಕ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಹೀಗಾಗಿ ರಾವಣನ ಪಾತ್ರವನ್ನು ಕೇವಲ ಖಳನಾಯಕನಾಗಿ ಅಲ್ಲದೆ, ಶಕ್ತಿಶಾಲಿ, ಬುದ್ಧಿವಂತ ಹಾಗೂ ಸಂಕೀರ್ಣ ವ್ಯಕ್ತಿತ್ವ ಹೊಂದಿರುವ ಪಾತ್ರವಾಗಿ ತೆರೆಗೆ ತರಲಾಗುತ್ತದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.
ಅತ್ಯಾಧುನಿಕ ದೃಶ್ಯ ಪರಿಣಾಮಗಳೊಂದಿಗೆ (VFX) ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ವಿಶ್ವಮಟ್ಟದ ಸಿನೆಮಾ ಅನುಭವವಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಭಾರತೀಯ ಪುರಾಣ ಕಥೆಯನ್ನು ಅಂತರರಾಷ್ಟ್ರೀಯ ಪ್ರೇಕ್ಷಕರಿಗೂ ತಲುಪಿಸುವ ಉದ್ದೇಶದಿಂದ ಚಿತ್ರದ ನಿರ್ಮಾಣ ನಡೆಯುತ್ತಿರುವುದರಿಂದ, ಅದರ ಪ್ರತಿಯೊಂದು ಪಾತ್ರದ ಆಯ್ಕೆಯೂ ವಿಶೇಷ ಗಮನ ಸೆಳೆಯುತ್ತಿದೆ.
ಡೆಕ್ಕನ್ ಹೆರಾಲ್ಡ್ ತನ್ನ ವಿಶ್ಲೇಷಣಾ ಲೇಖನದಲ್ಲಿ, “ಯಶ್ ಅವರನ್ನು ರಾವಣನ ಪಾತ್ರಕ್ಕೆ ಆಯ್ಕೆ ಮಾಡಿರುವುದೇ ‘ರಾಮಾಯಣ’ ಚಿತ್ರದತ್ತ ಜಾಗತಿಕ ಗಮನ ಸೆಳೆಯುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ” ಎಂದು ಅಭಿಪ್ರಾಯಪಟ್ಟಿದೆ.
ಚಿತ್ರ ಬಿಡುಗಡೆಯಾಗುವ ಮುನ್ನವೇ ಯಶ್ ಅವರ ರಾವಣ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಭಾರತೀಯ ಸಿನೆಮಾದಲ್ಲಿನ ಅತ್ಯಂತ ನಿರೀಕ್ಷಿತ ಪಾತ್ರಗಳಲ್ಲಿ ಇದೂ ಒಂದಾಗಿ ಹೊರಹೊಮ್ಮಿದೆ. ಚಿತ್ರದ ಬಿಡುಗಡೆಯ ಬಳಿಕ ಈ ಪಾತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಪೂರೈಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

