ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸಬೇಕಿದೆ. ಕೇಂದ್ರ ಸರಕಾರ ನಡೆಸುವ ಈ ರಾಷ್ಟ್ರೀಯ ಪರೀಕ್ಷೆಗಳ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿಕೊಟ್ಟು ವಿಕೇಂದ್ರೀಕರಣ ಮಾಡಬೇಕಿದೆ. ಇದಕ್ಕಾಗಿ ಝೆನ್ ಜಿ ವಿದ್ಯಾರ್ಥಿ ಯುವಜನತೆ ಮೋದಿ ಸರಕಾರವನ್ನು ಒತ್ತಾಯಿಸಬೇಕಿದೆ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚಿಸಿ ಆಳುವ ಸರಕಾರವನ್ನು ಒಪ್ಪಿಸಬೇಕಿದೆ. ಜನಪರ ಸಂಘಟನೆಗಳು ಸಂಘಟನಾತ್ಮಕವಾಗಿ ಧ್ವನಿ ಎತ್ತಬೇಕಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲರೂ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದೆ. ಶಿಕ್ಷಣದ ವ್ಯಾಪಾರೀಕರಣ ನಿಲ್ಲಿಸಬೇಕೆಂದೂ ಹಾಗೂ ದೇಶಾದ್ಯಂತ ಗುಣಮಟ್ಟದ ಸಮಾನ ಉಚಿತ ಶಿಕ್ಷಣವನ್ನು ಸರಕಾರವನ್ನು ಆಗ್ರಹಿಸಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈ ತರಲೆ ಜಿರಲೆಗಳದ್ದೆಂತಾ ಧೈರ್ಯ? ಕೊನೆಗೂ ಮದಿಸಿದ ಮದ್ದಾನೆಗೆ ಮದ್ದರೆದು ಅಂಕುಶ ಹಾಕಿ ಖೆಡ್ಡಾಗೆ ಬೀಳಿಸಿಯೇ ಬಿಟ್ಟವು. ಮೊದಲಿನಿಂದಲೂ ಜಂತರ್ ಮಂತರ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೊಂದೇ ಜಿರಲೆ ಪಾರ್ಟಿಯವರ ಪ್ರಮುಖ ಬೇಡಿಕೆಯಾಗಿತ್ತು. ಅದನ್ನು ಮನ್ನಿಸಿ ಪ್ರಧಾನ್ ರವರ ರಾಜೀನಾಮೆಯನ್ನು ಪ್ರಧಾನಿಗಳು ಪಡೆದು ಪ್ರತಿಭಟನಾ ನಿರತರ ಜೊತೆ ಮಾತುಕತೆ ಮಾಡಿದ್ದರೆ ಪ್ರತಿಭಟನೆ ಆರಂಭವಾದ ಮೂರೇ ದಿನಕ್ಕೆ ಯುವಕರ ಹೋರಾಟ ಅಂತ್ಯವಾಗುತ್ತಿತ್ತು. ಮೋದಿಯವರು ಕಟ್ಟಿಕೊಂಡ ಭ್ರಮಾತ್ಮಕ ಇಮೇಜ್ ಕೂಡಾ ಹಾಗೆಯೇ ಉಳಿಯುತ್ತಿತ್ತು.
ಆದರೆ ಸರ್ವಾಧಿಕಾರಿಯ ದುರಹಂಕಾರ ಅದಕ್ಕೆ ಅವಕಾಶ ಕೊಡಲಿಲ್ಲ. ಬೇಡಿಕೆಗಳನ್ನು ಸೌಹಾರ್ದಯುತವಾಗಿ ಈಡೇರಿಸಿ ಹೋರಾಟವನ್ನು ನಿಲ್ಲಿಸುವ ಬದಲು ಮಟ್ಟ ಹಾಕಲು ಕೆಟ್ಟ ಮಾರ್ಗವನ್ನು ಮೋದಿ ಸರಕಾರ ಹಿಡಿಯಿತು. ಗೋದಿ ಮಾಧ್ಯಮಗಳು ಹಾಗೂ ಬಿಜೆಪಿಯ ಐಟಿ ಸೆಲ್ ಮತ್ತು ಅಂಧಭಕ್ತರ ಸೋಷಿಯಲ್ ಮೀಡಿಯಾಗಳ ಮೂಲಕ “ಜಿರಲೆಗಳು ದೇಶದ್ರೋಹಿಗಳು, ವಿದೇಶೀ ಏಜೆಂಟರುಗಳು, ದೇಶದ ಸ್ಥಿರತೆಗೆ ಧಕ್ಕೆ ತರುವವರು” ಎಂದು ನಿರಂತರ ಅಪಪ್ರಚಾರ ಮಾಡಲಾಯ್ತು. ಜಂತರ್ ಮಂತರ್ ನಲ್ಲಿ ನೀರು ಕರೆಂಟು ನಿಲ್ಲಿಸಲಾಯ್ತು, ಮೊಬೈಲ್ ನೆಟ್ವರ್ಕ್ ಸಿಗದಂತೆ ಜಾಮರ್ ಅಳವಡಿಸಲಾಯ್ತು. ಸ್ವಿಗ್ಗಿ ಜೊಮ್ಯಾಟೊ ಮುಂತಾದ ಆಹಾರ ಸರಬರಾಜು ಕಂಪನಿಗಳಿಗೆ ಸರಬರಾಜು ನಿಲ್ಲಿಸುವಂತೆ ಹೇಳಲಾಯ್ತು. ಆಹಾರ ಹಂಚಿದ ಮುಸ್ಲಿಂ ವ್ಯಕ್ತಿಯ ಮನೆಗೆ ರೇಡ್ ಮಾಡಿಸಲಾಯ್ತು. ಉಪವಾಸ ನಿರತ ವಾಂಗ್ಚುಕ್ ರವರನ್ನು ಹಾಡುಹಗಲೇ ಅಪಹರಿಸಿ ಆಸ್ಪತ್ರೆಗೆ ಸೇರಿಸಲಾಯ್ತು. ಕೊನೆಗೆ ಬ್ಯಾರಿಕೇಡ್ ಹಾಕಿ ಖಾಕಿ ಕೋಟೆ ಕಟ್ಟಲಾಯ್ತು. ನೇಮ್ ಪ್ಲೇಟ್ ಇಲ್ಲದ ಪೊಲೀಸರು ಹಾಗೂ ಮಾರುವೇಷದ ಗೂಂಡಾಗಳಿಂದ ಪ್ರತಿಭಟನಾಕಾರರ ಮೇಲೆ ಅಮಾನವೀಯ ಹಲ್ಲೆ ಮಾಡಲಾಯ್ತು, ವಿದ್ಯಾರ್ಥಿಗಳ ಗುಂಪಿನ ನಡುವೆ ಟಿಯರ್ ಗ್ಯಾಸ್ ಬಾಂಬ್ ಸಿಡಿಸಿ ಕಣ್ಣೀರು ಹಾಕಿಸಲಾಯ್ತು. ಪ್ಯಾಲೆಟ್ ಗುಂಡುಗಳನ್ನು ಸಿಡಿಸಲಾಯ್ತು. ಮಹಿಳೆಯರ ಎದೆಯನ್ನು ತುಳಿಯುವ, ಅವರ ಖಾಸಗಿ ಅಂಗಗಳಿಗೆ ಲಾಟಿ ತೂರಿಸುವ ಪ್ರಯತ್ನ ಮಾಡಲಾಯ್ತು, ಮಕ್ಕಳ ಕೆನ್ನೆಗೆ ಬಾರಿಸಲಾಯ್ತು. ಬ್ಯಾರಿಕೇಡ್ ಮೇಲೆ ವ್ಯಕ್ತಿಯನ್ನು ಮೂಟೆಯ ಹಾಗೆ ಎಸೆಯಲಾಯ್ತು. ಯುವಕರ ಮೇಲೆ ಎಫ್ ಐ ಆರ್ ದಾಖಲಿಸಲಾಯ್ತು, ಇನ್ನೂ ಏನೇನು ಕ್ರೌರ್ಯ ಮಾಡಬೇಕಿತ್ತೊ ಅದನ್ನೆಲ್ಲವನ್ನೂ ಮೋದಿ ಶಾ ಆದೇಶದ ಮೇಲೆ ಮಾಡಿ ಅಮಾನವೀಯತೆ ಮೆರೆಯಲಾಯ್ತು. ಏನೇ ಮಾಡಿದರೂ ಯುವ ಜಿರಲೆಗಳು ಹೋರಾಟ ಕೈಬಿಡಲಿಲ್ಲ. ವಾಂಗ್ಚುಕ್ ಸಹಿತ ಇತರ ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ ನಿಲ್ಲಲಿಲ್ಲ.

ಜಂತರ್ ಮಂತರ್ ನಲ್ಲಿ ಶುರುವಾದ ಪ್ರತಿಭಟನೆ ದೇಶಾದ್ಯಂತ ಪ್ರತಿಧ್ವನಿಸತೊಡಗಿತು. ಧರಣಿ ಸತ್ಯಾಗ್ರಹಗಳು ಹೆಚ್ಚತೊಡಗಿದವು. ಸಂಸತ್ ಅಧಿವೇಶನ ನಡೆಯದಂತೆ ಮಾಡಿ ಯುವಜನರ ಮೇಲಿನ ದೌರ್ಜನ್ಯ ಪ್ರಶ್ನಿಸಲಾಯ್ತು. ಆಗ ಹೋರಾಟಗಾರರ ಬೇಡಿಕೆಯನ್ನು ಈಡೇರಿಸದೆ ಮೋದಿಯವರಿಗೆ ಬೇರೆ ದಾರಿಯೇ ಇರಲಿಲ್ಲ. ಜಿರಲೆಗಳ ಮುಂದೆ ಶರಣಾಗದೆ ಬಿಜೆಪಿಗೆ ಬೇರೆ ಆಪ್ಶನ್ ಇರಲಿಲ್ಲ.
ಕೊನೆಗೂ ಉಪವಾಸ ನಿರತ ಸೋನಮ್ ವಾಂಗ್ಚುಕ್ ಇರುವ ಆಸ್ಪತ್ರೆಗೆ ಓಡಿ ಹೋಗಿ ಅವರ ಎರಡು ಬೇಡಿಕೆ ಈಡೇರಿಸುವ ಲಿಖಿತ ಭರವಸೆಯೊಂದಿಗೆ ಕೇಂದ್ರದ ಇಬ್ಬರು ಸಚಿವರು ಸೂಪ್ ಕುಡಿಸಿ ಉಪವಾಸ ನಿಲ್ಲಿಸುವಂತೆ ಮಾಡಿದರು. ಜಿರಲೆ ವಕ್ತಾರರೊಂದಿಗೆ ಸಚಿವರು ಎರಡು ಸುತ್ತಿನ ಮಾತುಕತೆ ಮಾಡಿದರು. ಕೊನೆಗೆ ಜುಲೈ 25 ರಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರವರ ತಲೆದಂಡ ಪಡೆಯಲೇಬೇಕಾಯ್ತು. ಜಿರಲೆಗಳ ಪಟ್ಟು ಬಿಡದ ಗಟ್ಟಿ ಹೋರಾಟಕ್ಕೆ ಜಯವಾಯಿತು.
ಆದರೆ ವಿದ್ಯಾರ್ಥಿ ಯುವಕರ ಮೇಲೆ ಅಮಾನುಷವಾಗಿ ದಾಳಿ ಮಾಡಿ ರಕ್ತ ಹರಿಸಿದ ಪೊಲೀಸರು ಹಾಗೂ ಗೂಂಡಾಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕೆಂದು ಸರಕಾರವನ್ನು ಒತ್ತಾಯಿಸುವುದು ಬಾಕಿ ಇದೆ. ಆ ಕ್ರೂರಿಗಳ ಫೋಟೋ ಹಾಗೂ ವಿಡಿಯೋ ಸಾಕ್ಷಿಗಳು ಯುವಕರ ಮೊಬೈಲುಗಳಲ್ಲಿ ಸೆರೆಯಾಗಿವೆ. ಸುಪ್ರೀಂ ಕೋರ್ಟಿಗೂ ಅಪೀಲ್ ಹೋಗಲಾಗಿದೆ. ದಮನ ಮಾಡಿದ ಪೊಲೀಸರನ್ನು ಮೊದಲು ಅಮಾನತ್ತು ಮಾಡಿ, ತೀವ್ರ ವಿಚಾರಣೆಗೆ ಅಳವಡಿಸಿ ನೌಕರಿಯಿಂದ ವಜಾ ಮಾಡಿ ಶಿಕ್ಷೆ ಕೊಡಿಸಬೇಕಿದೆ. ಪೊಲೀಸರ ಜೊತೆ ಸೇರಿ ಹಲ್ಲೆ ಮಾಡಿದ ಬಾಡಿಗೆ ಗೂಂಡಾಗಳನ್ನು ಹುಡುಕಿ ಬಂಧಿಸಿ ಜಾಮೀನು ಸಿಗದಂತೆ ನೋಡಿಕೊಂಡು ಶಿಕ್ಷೆ ಕೊಡಿಸಲೇಬೇಕಿದೆ. ಈ ಅಮಾನವೀಯ ದೌರ್ಜನ್ಯದ ಹಿಂದೆ ಇರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಕಂಡು ಹಿಡಿದು ವಿಚಾರಣೆ ಮಾಡಲು ನ್ಯಾಯಾಂಗ ತನಿಖೆಗೆ ಸರಕಾರ ಆದೇಶಿಸಬೇಕಿದೆ. ಇಲ್ಲವೇ ಹಾಗೆ ಕ್ರಮ ತೆಗೆದುಕೊಳ್ಳಬೇಕೆಂದು ವಿರೋಧ ಪಕ್ಷಗಳು ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಡಬೇಕಿದೆ.

ಒಟ್ಟಾರೆಯಾಗಿ ಇನ್ನು ಮುಂದೆ ಪ್ರತಿಭಟನಾ ನಿರತರನ್ನು ಪೊಲೀಸರಿಂದ ದಮನ ಮಾಡಿಸುವ ಮುಂಚೆ ಸರಕಾರ ಸಾವಿರ ಸಲ ಯೋಚಿಸುವಂತೆ ಮಾಡಬೇಕಿದೆ. ಇದಕ್ಕಾಗಿ ಝೆನ್ ಜಿ ಯುವಕರು ಮತ್ತೆ ಹೋರಾಟವನ್ನು ತೀವ್ರಗೊಳಿಸಬೇಕಿದೆ. ಜೊತೆಗೆ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ಹಾಗೂ ಪರೀಕ್ಷೆಗಳ ಸುವ್ಯವಸ್ಥೆಗಾಗಿ ಸರಕಾರವನ್ನು ಒತ್ತಾಯಿಸಬೇಕಿದೆ. ಆಗ ವಿದ್ಯಾರ್ಥಿ ಯುವಜನರ ಹೋರಾಟಕ್ಕೆ ನಿಜವಾದ ಗೆಲುವು ದೊರಕಿದಂತಾಗುತ್ತದೆ. ಇಲ್ಲದೇ ಹೋದರೆ ಬೀಸುವ ದೊಣ್ಣೆಯಿಂದ ತಾತ್ಕಾಲಿಕವಾಗಿ ಪಾರಾದ ಕೇಂದ್ರ ಸರಕಾರ ಹಾಗೂ ಮೋದಿ ಶಾ ಜೋಡಿ ಬೇರೆಲ್ಲಾ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ದಮನಿಸುವ ದುಸ್ಸಾಹಸವನ್ನು ಮಾಡುತ್ತಲೇ ಇರುತ್ತಾರೆ.
ಹೀಗಾಗಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸಬೇಕಿದೆ. ಕೇಂದ್ರ ಸರಕಾರ ನಡೆಸುವ ಈ ರಾಷ್ಟ್ರೀಯ ಪರೀಕ್ಷೆಗಳ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿಕೊಟ್ಟು ವಿಕೇಂದ್ರೀಕರಣ ಮಾಡಬೇಕಿದೆ. ಇದಕ್ಕಾಗಿ ಝೆನ್ ಜಿ ವಿದ್ಯಾರ್ಥಿ ಯುವಜನತೆ ಮೋದಿ ಸರಕಾರವನ್ನು ಒತ್ತಾಯಿಸಬೇಕಿದೆ. ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚಿಸಿ ಆಳುವ ಸರಕಾರವನ್ನು ಒಪ್ಪಿಸಬೇಕಿದೆ. ಜನಪರ ಸಂಘಟನೆಗಳು ಸಂಘಟನಾತ್ಮಕವಾಗಿ ಧ್ವನಿ ಎತ್ತಬೇಕಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಎಲ್ಲರೂ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದೆ. ಶಿಕ್ಷಣದ ವ್ಯಾಪಾರೀಕರಣ ನಿಲ್ಲಿಸಬೇಕೆಂದೂ ಹಾಗೂ ದೇಶಾದ್ಯಂತ ಗುಣಮಟ್ಟದ ಸಮಾನ ಉಚಿತ ಶಿಕ್ಷಣವನ್ನು ನೀಡಬೇಕೆಂದೂ ಸರಕಾರವನ್ನು ಆಗ್ರಹಿಸಬೇಕಿದೆ.
ಆಗ ಮಾತ್ರ ಈ ದೇಶದ ಶಿಕ್ಷಣ ವ್ಯವಸ್ಥೆ ಒಂದಿಷ್ಟಾದರೂ ಬದಲಾಗಬಲ್ಲುದು. ಪೇಪರ್ ಲೀಕ್ ಹಾಗೂ ಪರೀಕ್ಷೆ ರದ್ಧತಿಯ ಆತಂಕವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದು. ಧರ್ಮೇಂದ್ರ ಪ್ರಧಾನ್ ತಲೆದಂಡ ತಮಗೂ ಆಗಬಹುದು ಎಂಬ ಆತಂಕದಲ್ಲಿ ಸಚಿವರುಗಳು ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿಭಾಯಿಸಬಹುದು.
ಏನಾದರಾಗಲಿ.. ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸುವಂತಹ ಐತಿಹಾಸಿಕ ಹೋರಾಟವನ್ನು ರೂಪಿಸಿ, ಸರ್ವಾಧಿಕಾರಿಯನ್ನು ಮಣಿಸಿ ಯಶಸ್ವಿಯಾದ ಜಿರಲೆ ಜನತಾ ಪಕ್ಷ ಹಾಗೂ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿದವರು ಮತ್ತು ಬೆಂಬಲಿಸಿದವರಿಗೆಲ್ಲಾ ಅಭಿನಂದನೆಗಳು.
ಶಶಿಕಾಂತ ಯಡಹಳ್ಳಿ
ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ- ನೀಟ್ ಪರೀಕ್ಷೆ; ಹುಸಿಯಾದ ನಿರೀಕ್ಷೆ


