ಜಂತರ್ ಮಂತರ್ / ದೆಹಲಿ : ಮಹತ್ವದ ಬೆಳವಣಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಿಸಿದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ ಮತ್ತು ಇತರ ಕಡೆಗಳಲ್ಲಿ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಈ ನಡುವೆ ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಕಾಕ್ರೋಚ್ ಜನತಾ ಪಕ್ಷದ ನಾಯಕ ಅಭಿಜಿತ್ ದೀಪ್ಕೆ ಮಾತಾಡಿದ್ದಾರೆ.
‘ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ದಾರಿಗೆ ತರುವುದು ಅಂದರೆ ಹೀಗೇ. ನಮ್ಮ ಬೇಡಿಕೆಗಳಲ್ಲಿ ಒಂದು ಬೇಡಿಕೆ ಮಾತ್ರ ಈಡೇರಿದೆ. ಉಳಿದ ಬೇಡಿಕೆಗಳೂ ಈಡೇರುವವರೆಗೆ ನಾವು ಇಲ್ಲಿಂದ ಕಾಲ್ತೆಗೆಯುವುದಿಲ್ಲ. ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಪ್ರತಿ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು.
ಜುಲೈ 20 ರಂದು ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಗೂಂಡಾ ಪೊಲೀಸರು ಮತ್ತು ಮೋದಿ ಅಮಿತ್ ಷಾ ಹೆಸರು ಹೇಳುತ್ತಾ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.

