ಬೆಂಗಳೂರು : ಪಡಿತರ ವಿತರಣೆಯಲ್ಲಿ ಕಾಳಸಂತೆಯನ್ನು ತಡೆಯಲು ಕ್ರಮವಹಿಸಿದ್ದು ಎಲ್ಲಾ ಪಡಿತರ ಅಂಗಡಿಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಸಚಿವರು ಗ್ಯಾರಂಟಿ ಯೋಜನೆ ಕುರಿತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ ಅವರ ನೇತೃತ್ವದಲ್ಲಿ ಅನ್ನಾಭಾಗ್ಯ ಯೋಜನೆಯ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಡಿತರ ಅಂಗಡಿಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಾಸ, ಪಡಿತರ ಸಾಗಣೆ ವಾಹನಗಳಿಂದ ಅಕ್ರಮ ಸಾಗಣೆ ತಡೆಗಟ್ಟುವುದು ಸೇರಿ ಹಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲು ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ 22 ಸಾವಿರ ಪಡಿತರ ಅಂಗಡಿಗಳಲ್ಲಿಯೂ ಸಿಸಿಟಿವಿ ಅಳವಿಡಿಕೆ ನಡೆಯಲಿದೆ. ಸಾಗಣೆ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗುವುದು. ಬೆಂಗಳೂರಿನ ಕೇಂದ್ರದಿಂದ ಇವುಗಳ ಸಂಪೂರ್ಣ ನಿಗಾ ವಹಿಸಲಾಗುವುದು ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಸಮಯದಲ್ಲಿ ತೆರೆದಿರುವುದಿಲ್ಲ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೂ ತರೆದು ಪಡಿತರ ವಿತರಿಸಲು ಸೂಚಿಸಲಾಗಿದ್ದು ತಪ್ಪಿದ್ದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಸಹಾಯವಾಣಿಗೆ ಕರೆಮಾಡಿ ದೂರು ನೀಡಲು ಸೂಚಿಸಿದರು.
ರಾಗಿ, ಜೋಳ ವಿತರಣೆ:
ರಾಜ್ಯ ಸರ್ಕಾರ ಐದು ಕೆ.ಜಿ. ಮತ್ತು ಕೇಂದ್ರ ಸರ್ಕಾರ ಐದು ಕೆ.ಜಿ. ಸೇರಿ ಒಟ್ಟು 10 ಕೆ.ಜಿ. ಅಕ್ಕಿ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ, ದಕ್ಷಿಣ ಕರ್ನಾಟಕ ಭಾಗದಲ್ಲಿ 7 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ರಾಗಿ ವಿತರಣೆ ಮಾಡಲಾಗುತ್ತದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಜೋಳಕ್ಕೆ ಬೇಡಿಕೆ ಇದ್ದರೂ ಅಲ್ಲಿ ಅಗತ್ಯದಷ್ಟು ಜೋಳ ಖರೀದಿಗೆ ಸಿಗುತ್ತಿಲ್ಲ. ಪಡಿತರ ವಿತರಣೆಗೆ 4 ಲಕ್ಷ ಕ್ವಿಂಟಾಲ್ ಅಗತ್ಯವಿದ್ದರೆ ನಮಗೆ ಕೇವಲ 1 ಲಕ್ಷ ಕ್ವಿಂಟಾಲ್ ಲಭ್ಯ ಆಗಿದೆ. ಹೀಗಾಗಿ ಮೂರ್ನಾಲ್ಕು ತಿಂಗಳು ಕಾಲ 7 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ಜೋಳ ವಿತರಿಸಿ ನಂತರ ಪೂರ್ಣ 10 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೂಲಕ ತೂಕ ಮತ್ತು ಅಳತೆಯಲ್ಲಿ ತಪಾಸನೆ ಮಾಡಲು ಸುಮಾರು 33 ವಾಹನಗಳನ್ನು ಇಲಾಖೆಗೆ ಹಂಚಿಕೆ ಮಾಡಿದ್ದು ಇಲ್ಲಿಯವರೆಗೂ ಕಾನೂನು ಪಾಪನ ಶಾಸ್ತ್ರ ಇಲಾಖೆಯು ಕಳೆದ ಮೂರು ವರ್ಷದಲ್ಲಿ ಸುಮಾರು 250 ಕೋಟಿ ರೂ.ಗಳ ರಾಜಸ್ವ ಸಂಗ್ರಹ ಮಾಡಿದ್ದು ಗ್ರಾಹಕರಿಗೆ ತೂಕದಲ್ಲಿ ಯಾವುದೇ ವ್ಯತ್ಯಾಸಗಳು ಕಾಣದಂತೆ ಕ್ರಮ ವಹಿಸುತ್ತಿದೆ ಎಂದರು.
ಎರಡು ತಿಂಗಳಲ್ಲಿ ಇಂದಿರಾ ಕಿಟ್:
ಸದ್ಯ ಈಗ ನೀಡುತ್ತಿರುವ 10 ಕೆ.ಜಿ. ಅಕ್ಕಿ ಬದಲಾಗಿ ಐದು ಕೆ.ಜಿ. ಅಕ್ಕಿ ಮತ್ತು ಒಂದು ಇಂದಿರಾ ಕಿಟ್ (ಬೇಳ, ಎಣ್ಣೆ, ಸಕ್ಕರೆ, ಉಪ್ಪು) ನೀಡಲು ನಿರ್ಧರಿಸಲಾಗಿದೆ. ಇದು ಪೌಷ್ಟಿಕಾಂಶದಿಂದ ಕೂಡಿರುತ್ತದೆ. ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗುತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ಜೊತೆಗೆ ಇಂದಿರಾ ಕಿಟ್ ಸಹ ನೀಡಲು ಕ್ರಮ ವಹಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಪ್ರಮುಖ ಯೋಜನೆ. ಇಂದು ಸಂಪೂರ್ಣ ಪರಿಶೀಲನೆ ನಡೆಸಲಾಗಿದೆ. ಸರಿಯಾದ ಸಮಯದಲ್ಲಿ ಪಡಿತರ ಅಂಗಡಿಗಳನ್ನು ತೆರೆಯದಿರುವುದು, ತೂಕದಲ್ಲಿ ಮೋಸ, ಕಾಳಸಂತೆಯಲ್ಲಿ ಲೋಡ್‌ಗಟ್ಟಲೆ ಅಕ್ಕಿ ಕಳ್ಳಸಾಗಣೆ ಸೇರಿ ಹಲವು ದೂರುಗಳು ಇದ್ದವು. ಇಂದು ಸಚಿವರ ಜೊತೆಗೆ ಚರ್ಚೆ ನಡೆಸಿದಾಗ ಆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ರೂಪಿಸುರುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರ 7.72 ಲಕ್ಷ ಪಡಿತರ ಚೀಟಿಗಳನ್ನು ಅನರ್ಹಗೊಳಿಸುವಂತೆ ಸೂಚಿಸಿದೆ. ಆದರೆ, ರಾಜ್ಯ ಸರ್ಕಾರ ಇವುಗಳನ್ನು ಪರಿಶೀಲಿಸಿ ಅದರಲ್ಲಿ ಅರ್ಹರನ್ನು ಬಿಪಿಎಲ್‌ನಲ್ಲಿಯೇ ಉಳಿಸಿ, ಅನರ್ಹರನ್ನು ಎಪಿಎಲ್‌ಗೆ ವರ್ಗಾಯಿಸಿದೆ. ಅನಗತ್ಯವಾಗಿ ಯಾರ ಪಡಿತರ ಕಾರ್ಡ್‌ಗಳನ್ನೂ ರದ್ದು ಮಾಡಿಲ್ಲ. ಪ್ರತಿಪಕ್ಷದವರು ಕೇವಲ ರಾಜಕೀಯಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದು, ಅದರಲ್ಲಿ ಯಾವುದೇ ಸತ್ಯಾಂಶಗಳು ಇಲ್ಲ ಎಂದು ರೇವಣ್ಣ ಹೇಳಿದರು.

