ನವದೆಹಲಿ : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ರಾಮಮಂದಿರದಲ್ಲಿ ದೇಣಿಗೆ ಕಳವು ಹಾಗೂ ಎಥೆನಾಲ್ ಮಿಶ್ರಣದ ವಿವಾದ ಕುರಿತಂತೆ ಚರ್ಚೆ ಆರಂಭಿಸುವಂತೆ ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ವಿಪಕ್ಷಗಳು ಸೋಮವಾರ ಗದ್ದಲ ಸೃಷ್ಟಿಸಿದ ಹಿನ್ನೆಲೆಯಲ್ಲಿ ಉಭಯ ಸದನದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಸೋಮವಾರ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ನೀಟ್-ಯುಜಿ ಪರೀಕ್ಷಾ ಪತ್ರಿಕೆ ಸೋರಿಕೆ, ಅಯೋಧ್ಯೆ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಮತ್ತು ಎಥೆನಾಲ್ ಮಿಶ್ರಣದ ವಿವಾದಗಳು ಪ್ರತಿಧ್ವನಿಸಿದವು.
ಸದನ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸಂಸದರು, ದೇಶಾದ್ಯಂತ ಸುದ್ದಿ ಮಾಡಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ’ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಈ ಗಂಭೀರ ವಿಷಯದ ಕುರಿತು ತಕ್ಷಣವೇ ಸಮಗ್ರ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದರು. ಸರ್ಕಾರದ ವಿರುದ್ಧ ಜೋರಾಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಇದರೊಂದಿಗೆ, ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನವಾಗಿರುವ ಪ್ರಕರಣವನ್ನು ಸಹ ಉಲ್ಲೇಖಿಸಿದ ವಿಪಕ್ಷಗಳು, ಈ ವಿಷಯದ ಕುರಿತಾಗಿಯೂ ಸದನದಲ್ಲಿ ತುರ್ತು ಚರ್ಚೆಗೆ ಆಗ್ರಹಿಸಿದವು. ವಿಪಕ್ಷಗಳ ಈ ದಿಢೀರ್ ಪ್ರತಿಭಟನೆ ಹಾಗೂ ನಿರಂತರ ಗಲಾಟೆಯಿಂದಾಗಿ ಸದನದಲ್ಲಿ ಭಾರೀ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರಾದರೂ, ವಿಪಕ್ಷಗಳ ಆಕ್ರೋಶ ಶಮನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಿದರು.
ರಾಜ್ಯಸಭೆಯಲ್ಲೂ ಕೂಡ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳು ನಡೆಸುತ್ತಿರುವ ಸಂಸತ್ ಚಲೋ ವಿಚಾರ ಪ್ರತಿಧ್ವನಿಸಿತು. ವಿಪಕ್ಷ ನಾಯಕ ಮಲ್ಲಿರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು, ತಮ್ಮ ಭವಿಷ್ಯಕ್ಕಾಗಿ ನ್ಯಾಯ ಕೇಳಲು ರಸ್ತೆಗಿಳಿದ ಸಾವಿರಾರು ಅಮಾಯಕ ವಿದ್ಯಾರ್ಥಿಗಳ ಮೇಲೆ ಸರ್ಕಾರ ಲಾಠಿ ಪ್ರಹಾರ ನಡೆಸಿ ಈ ರೀತಿ ಕ್ರೂರವಾಗಿ ನಡೆದುಕೊಂಡಿರುವುದು ಲಾಠಿಪ್ರಹಾರ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಸದನದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದಕ್ಕೆ ಇತರ ಪಕ್ಷಗಳ ಸಂಸದರು ಧ್ವನಿಗೂಡಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 12ಗಂಟೆಗೆ ಸದನ ಮುಂದೂಡಲಾಯಿತು.
ಮತ್ತೆ ಎರಡು ಸದನಗಳ ಕಲಾಪ ಆರಂಭವಾದಾಗ ಗದ್ದಲ ಜೋರಾಗಿ ನಡೆಯಿತು. ಇದರಿಂದ ಉಭಯ ಸದನದ ಕಲಾವಪನ್ನು ಹಲವು ಬಾರಿ ಮುಂದೂಡಲಾಯಿತು. ಅಂತಿಮವಾಗಿ ಮಂಗಳವಾರಕ್ಕೆ ಮುಂದೂಡಲಾಯಿತು.
ಇಂದಿನಿಂದ ಅರಂಭವಾದ ಸಂಸತ್ತಿನ ಅಧಿವೇಶನ ಆಗಸ್ಟ್ 13ರವರೆಗೆ ನಡೆಯಲಿದೆ. ಈ ವೇಳೆ ಕೇಂದ್ರ ಸರ್ಕಾರ ಹಲವು ಮಸೂದೆಗಳನ್ನು ಮಂಡಿಸಲು ಸಿದ್ಧತೆ ಮಾಡಿಕೊಂಡಿದೆ. ಇದರಲ್ಲಿ ಡಿಲಿಮಿಟೇಶನ್ ಮತ್ತು ಮಹಿಳಾ ಮೀಸಲಾತಿ ಮಸೂದೆ. ವಂದೇ ಮಾತರಂ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗುವುದು.

