ಬೆಂಗಳೂರು : ದೇಶದ ಕಾನೂನು, ನಿಯಮಗಳ ಪ್ರಕಾರ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನಾಗರಿಕರ ಮನೆ ಬಾಗಿಲಿಗೆ ನೀಡಲು ಮುಂದಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ ನೀಡುವ ವೆಬ್ಸೈಟ್ ಅನಾವರಣ ಮಾಡಿದರು.
ಕೇಂದ್ರ ಚುನಾವಣಾ ಆಯೋಗ ಕೋರುವ ಮಾದರಿಯಲ್ಲಿ ಸರ್ಕಾರ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡಲಿದೆ. ಇದು ರಾಜ್ಯದಲ್ಲಿ ಬದುಕು ಕಟ್ಟಿಕೊಳ್ಳುವವರಿಗೆ ತಮ್ಮ ಹಕ್ಕು ಮಂಡಿಸಲು ಇರುವ ಮೊದಲ ಹೆಜ್ಜೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಹಿಂದೆ ನಾವು ಭೂ ಸುಧಾರಣೆ ಕಾಯ್ದೆ ಹಿಡಿದು ಪಹಣಿ ಕೊಡುವ ಹೆಜ್ಜೆ ಇಟ್ಟಿದ್ದೆವು. ಸಿಎಂ ಆದ ಮೇಲೆ ನಾನು ನಿಮ್ಮ ಮತ ನಮ್ಮ ಹಕ್ಕು. ನಿಮ್ಮ ಮತ ನಿಮ್ಮ ಬದುಕು. ನಿಮ್ಮ ಮತ ಹಾಗೂ ಬದುಕಿಗೆ ನಮ್ಮ ಸರ್ಕಾರ ಗ್ಯಾರಂಟಿ ಎಂಬ ಮಾತನ್ನು ಪದೇ ಪದೆ ಹೇಳುತ್ತಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರವನ್ಮು ಉಚಿತವಾಗಿ ಮನೆ ಮನೆ ತಲುಪಿಸಲು ಮುಂದಾಗಿದ್ದೇವೆ ಎಂದರು.
ಎಸ್ಐಆರ್ಗೆ ಅನುಕೂಲವಾಗಲು, ಮತದಾನದ ಹಕ್ಕು ಉಳಿಸಲು ಪಕ್ಷ ಬೇಧ ಮರೆತು ನೆರವಾಗಲು ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ 4.85 ಕೋಟಿ ಜನರಿಗೆ ಜಾತಿ ಪ್ರಮಾಣ ಪತ್ರವನ್ನು ಕೊಡುವುದು ಇಡೀ ದೇಶದಲ್ಲೇ ಪ್ರಥಮವಾಗಿದೆ. ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ಅವರ ಮನೆ ಬಾಗಿಲಿಗೆ ಕೊಡಲು ಮುಂದಾಗಿದ್ದೇವೆ. ಇಂತಹ ನಿರ್ಧಾರವನ್ನು ಯಾವ ಸರ್ಕಾರಗಳೂ ಮಾಡಿಲ್ಲ. ಕೆಲವರಿಗೆ ನಾವು ಅಧಿಕಾರವನ್ನು ದುರುಪಯೋಗ ಮಾಡುತ್ತೇವೆ ಎಂಬ ಗಾಬರಿ ಹುಟ್ಟಬಹುದು. ಆದರೆ, ಸಾರ್ವಜನಿಕರಿಗೆ ಸಹಾಯ ಮಾಡಲು ಇದನ್ನು ಮಾಡಲಾಗಿದೆ. ಸರ್ಕಾರ ತನ್ನ ಜವಾಬ್ದಾರಿಯಿಂದ ದೂರ ಹೋಗಬಾರದು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಪಿಆರ್ಸಿ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಮತದಾನದ ಹಕ್ಕು ಇರಲೇಬೇಕು ಎಂಬ ಉದ್ದೇಶದಿಂದ ಸರ್ಕಾರ ಜಾತಿ ಪ್ರಮಾಣ ಪತ್ರ ಹಾಗೂ ಪಿಆರ್ಸಿಯನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ನಮಗೆ ರಾಜಕಾರಣ ಮುಖ್ಯವಲ್ಲ. ಜನರ ಬದುಕು, ಗುರುತು ಮುಖ್ಯ. ಎಲ್ಲಿ ಗುರುತು ಇದೆಯೋ ಅಲ್ಲಿ ಬದುಕು ಇದೆ. ಬಿಎಲ್ಒಗಳು ಮನೆ ಬಾಗಿಲಿಗೆ ಗಣತಿ ನಮೂನೆಯನ್ನು ಕೊಡುತ್ತಾರೆ. ಅದನ್ನು ಭರ್ತಿ ಮಾಡಿ ಸಹಿ ಹಾಕಿ ಬಿಎಲ್ಒಗಳಿಗೆ ಕೊಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡವರು ಸರ್ಕಾರಿ ಸೌಲಭ್ಯ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಇದು ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರದ ಐತಿಹಾಸಿಕ ಹೆಜ್ಜೆಯಾಗಿದೆ. ನಾಗರಿಕರ ಧ್ವನಿ, ರಕ್ಷಣೆಯ ಕ್ರಮ ವಹಿಸುತ್ತಿದ್ದೇವೆ. ಸರ್ಕಾರ ಮತ್ತು ಜನರ ಮಧ್ಯೆ ಅಂತರ ಕಡಿಮೆ ಮಾಡಲು, ಜನರ ಬದುಕು ಉಳಿಸಿಕೊಳ್ಳಲು, ಮತದಾನದ ಹಕ್ಕು ಉಳಿಸಲು ಈ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಚುನಾವಣಾ ಆಯೋಗದಂತೆ ಪ್ರಮಾಣ ಪತ್ರ:
ಚುನಾವಣಾ ಆಯೋಗ ಸ್ಪಷ್ಟಪಡಿಸಿರುವಂತೆ . ನಾವು ಕಾನೂನು ಪ್ರಕಾರ ಪ್ರಮಾಣ ಪತ್ರ ವಿತರಣೆ ಮಾಡುತ್ತೇವೆ. ಈ ಬಗ್ಗೆ ಚುನಾವಣಾಧಿಕಾರಿಗಳು, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ದೇಶದ ಕಾನೂನು, ಮಾನದಂಡದ ಪ್ರಕಾರ ನಾವು ಪಿಆರ್ಸಿ ಕೊಡುತ್ತಿದ್ದೇವೆ. ಪ್ರತಿಪಕ್ಷಗಳು ಎಷ್ಟು ಬೇಕಾದರೂ ಅರಚಾಡಲಿ, ಅರಚಾಡುವುದು ಅವರ ಜವಾಬ್ದಾರಿ. ನಾವು ನಮ್ಮ ಕೆಲಸ ಮಾಡಿದ್ದೇವೆ. ಅಲ್ಲದೆ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡುವುದಿಲ್ಲ. ಎಂದರು.
ಅಕ್ರಮ ಬಾಂಗ್ಲಾ ನಿವಾಸಿಗಳು ಎಲಿಮಿನೇಟ್ ಆಗಲಿದ್ದಾರೆ: ಕಂದಾಯ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಜನರ ಸೇವೆ ಮಾಡುವಲ್ಲಿ ನಮ್ಮ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಚುನಾವಣಾ ಆಯೋಗ ಎಸ್ಐಆರ್ ಮಾಡಲು ಪ್ರಾರಂಭ ಮಾಡಿದೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಯಾರೂ ಶಾಶ್ವತವಾಗಿ ನಿವಾಸಿಗಳಾಗಿದ್ದಾರೆ, ಅದರ ದಾಖಲೆ ಇರಬೇಕು ಎಂದಿದೆ. ಆ ನಿಟ್ಟಿನಲ್ಲಿ ಪಿಆರ್ಸಿ ಕೊಡಬೇಕು ಎಂದು ನಿರ್ಧರಿಸಿದ್ದೇವೆ.
ಯಾವ ಆಧಾರದಲ್ಲಿ ಕೊಡಬೇಕು ಎಂಬುದಕ್ಕೆ ನಿಯಮ ಮಾಡಿದ್ದೇವೆ. ರಾಜ್ಯದಲ್ಲಿ ಉದ್ಯೋಗ, ವಿವಾಹ ಆಗಿದ್ದರೆ, ರಾಜ್ಯದಲ್ಲಿ 10 ವರ್ಷ ಇರಬೇಕು. ರಾಜ್ಯದಲ್ಲಿ ಜನಿಸಿದ ಆಧಾರದಲ್ಲಿ ಈ ಪಿಆರ್ಸಿ ನೀಡಲು ತೀರ್ಮಾನ ಮಾಡಲಾಗಿದೆ. ರಾಜ್ಯದಲ್ಲಿ ಹಲವರು ಹೊರಗಿನವರಿದ್ದಾರೆ ಎಂಬ ಪ್ರಶ್ನೆಗಳು ಮೂಡುತ್ತವೆ. ಅನೇಕ ಬಾಂಗ್ಲಾದವರು ಅಕ್ರಮವಾಗಿ ಇದ್ದಾರೆ ಎಂಬ ಪ್ರಶ್ನೆಗಳಿವೆ. ಈ ಪ್ರಮಾಣ ಪತ್ರ ಕೊಡುವ ಮೂಲಕ ಅವರೆಲ್ಲಾ ಎಲಿಮಿನೇಟ್ ಆಗಲಿದ್ದಾರೆ ಎಂದು ತಿಳಿಸಿದರು.
ಇದನ್ನು ಮನೆ ಮನೆಗೆ ತಲುಪಿಸಲು ನಾವು ಮುಂದಾಗಿದ್ದೇವೆ. ಪ್ರವರ್ಗ ‘ಎ’ದಲ್ಲಿ 0.86 ಲಕ್ಷ ಜನರಿದ್ದಾರೆ. ಎಸ್ಸಿ, ಎಸ್ಟಿ 2.63 ಕೋಟಿ ಜನರಿದ್ದಾರೆ. ಒಟ್ಟು 4.85 ಕೋಟಿ ಜಾತಿ ಪ್ರಮಾಣ ಪತ್ರ ಕೊಡಲು ತೀರ್ಮಾನಿಸಿದ್ದೇವೆ.
ವೆಬ್ಸೈಟ್, ಹೋಬಳಿ ಮಟ್ಟದಲ್ಲಿ ಪೆಲಿಸಿಟೇಷನ್ ಕೇಂದ್ರಗಳು, ವಾಟ್ಸ್ಆ್ಯಪ್ ಮೂಲಕ ಪ್ರಮಾಣ ಪತ್ರ ಪಡೆಯಬಹುದು. ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದರೂ ಪಡೆಯಬಹುದು. ದೂರುಗಳು ಬಂದರೆ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿದ್ದೇವೆ. ತಹಶೀಲ್ದಾರ್ ನೇತೃತ್ವದ ಸಕ್ಷಮ ಪ್ರಾಧಿಕಾರ ಇರಲಿದೆ. ಮೇಲ್ಮನವಿಯನ್ನು ಡಿಸಿಗೆ ಸಲ್ಲಿಸಬಹುದು. ಅರ್ಜಿ ಹಾಕುವವರು ರಾಜ್ಯದಲ್ಲಿ ಜನಿಸಿರಬೇಕು. ತಂದೆ, ತಾಯಿ, ಕಾನೂನುಬದ್ಧ ಪೋಷಕರು ರಾಜ್ಯದಲ್ಲಿ ಕನಿಷ್ಠ 10 ವರ್ಷ ಇರಬೇಕು. ಅರ್ಜಿದಾರರು ವಸತಿ ಅಥವಾ ಸ್ಥಿರಾಸ್ತಿ ಹೊಂದಿರಬೇಕು. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕು. ಕಂದಾಯ ದಾಖಲೆ ಇರಬೇಕು. ಆಧಾರ್ನಲ್ಲಿ ಪೋಷಕರು ಸಾಮಾನ್ಯ ನಿವಾಸಿಯಾಗಿ ಇರಬೇಕು ಎಂದು ವಿವರಿಸಿದರು.
ಜಾತಿ ಪ್ರಮಾಣ ಪತ್ರ ಪಡೆಯುವ ವಿಧಾನ: ಜಾತಿ ಪ್ರಮಾಣಪತ್ರಗಳ ವಿತರಣಾ ಪ್ರಕ್ರಿಯೆಯು 20 ಜುಲೈ 2026ರಿಂದ ಆರಂಭವಾಗಲಿದ್ದು, 4 ವಿಧಾನಗಳ ಮೂಲಕ ಸಾರ್ವಜನಿಕರನ್ನು ತಲುಪಲಿದೆ.
ಮನೆ ಮನೆಗೆ ವಿತರಣೆ: ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಪಿಡಿಎಫ್ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಈ ಪ್ರತಿಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಪ್ರಮಾಣ ಪತ್ರ ವಿತರಿಸಿದ ಬಳಿಕ, ವಿತರಕರು ಮೊಬೈಲ್ ಸಂಖ್ಯೆಯನ್ನು ದಾಖಲಿಸಿ. ಆ್ಯಪ್ ಮೂಲಕ ಒಟ್ಟು ವಿತರಣೆಯ ವಿವರಗಳನ್ನು ದಾಖಲಿಸುತ್ತಾರೆ.
ವೆಬ್ಸೈಟ್ ಮೂಲಕ ಉಚಿತ ಡೌನ್ಲೋಡ್: ಸಾರ್ವಜನಿಕರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್ಸೈಟ್ ಅಭಿವೃದ್ಧಿಪಡಿಸಲಾಗಿದೆ. ಆರ್.ಡಿ.ಸಂಖ್ಯೆ, ರೇಷನ್ ಕಾರ್ಡ್ ನಂ., ಆಧಾರ್ ಸಂಖ್ಯೆಯನ್ನು ನಮೂದಿಸಿ ಜಾತಿ ಪ್ರಮಾಣಪತ್ರ ಪಡೆಯಬಹುದು. ವೆಬ್ಸೈಟ್ ಲಿಂಕ್: https://nadakacheri.karnataka.gov.in/AJSKCertificates
ಜಾತಿ ಪ್ರಮಾಣ ಪತ್ರವನ್ನು ಸಾರ್ವಜನಿಕರು ಸುಲಭವಾಗಿ ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಲು ಪ್ರತಿ ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಜಾತಿ ಪ್ರಮಾಣ ಪತ್ರ ದಾಖಲೆಗಳ ಮುದ್ರಣವನ್ನು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುವುದು.
ವಾಟ್ಸ್ಆ್ಯಪ್/ಎಸ್ಎಂಎಸ್ ಮೂಲಕ ಮಾಹಿತಿ: ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಈಗಾಗಲೇ ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ಸಂಬಂಧಿತ ಫಲಾನುಭವಿಗಳಿಗೆ ವಾಟ್ಸ್ಆಪ್ ಅಥವಾ ಎಸ್ಎಂಎಸ್ ಮೂಲಕ ಡೌನ್ಲೋಡ್ ಲಿಂಕ್ ಕಳುಹಿಸಲಾಗಿದೆ. ಇದರ ಮೂಲಕ ಅವರು ತಮ್ಮ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಶಾಶ್ವತ ನಿವಾಸ ಪ್ರಮಾಣ ಪತ್ರದ ಸೇವೆಯನ್ನು ಸರ್ಕಾರವು ಆದ್ಯತೆಯ ಮೇರೆ ಆರಂಭಿಸಿರುತ್ತದೆ. ಸಾರ್ವಜನಿಕರು ಅವಶ್ಯಕತೆಗೆ ತಕ್ಕಂತೆ ಶಾಶ್ವತ ಪ್ರಮಾಣ ಪತ್ರ ಪಡೆಯಲು ಹತ್ತಿರದ ಅರ್ಜಿಯನ್ನು ನಾಡಕಚೇರಿಯಲ್ಲಿ ಅಥವಾ ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. ಅದರ ಲಿಂಕ್ ಹೀಗಿದೆ: https://ajsk.karnataka.gov.in/nk5_online/Login/Login_Public

