ಓರ್ವ ಹುಡುಗಿ, ಅದೂ ತಾನು ಪ್ರೀತಿಸುವ ಹುಡುಗಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬುದು ಓರ್ವ ಯುವಕನಿಗೆ ಅವಮಾನದ ಮತ್ತು ಮಾನಾಪಮಾನದ ಪ್ರಶ್ನೆ ಎನಿಸುವುದು ಏಕೆ? ಆ ಯುವತಿಗೆ ಅವಳದೇ ಆದ ಆಸೆ, ಕನಸು, ಆಯ್ಕೆ, ಅಭಿರುಚಿಗಳು ಇರಬಹುದು ಎಂಬ ಪ್ರಾಥಮಿಕ ತಿಳುವಳಿಕೆ ಯುವಕರಿಗೆ ಯಾಕಿಲ್ಲ? ಅವಳ ಅಭಿಪ್ರಾಯಗಳಿಗೂ ತನ್ನದರಂತೆಯೇ ಮೌಲ್ಯ, ಗೌರವ ಇರಬೇಕು ಎಂಬುದು ಯುವಕರಿಗೆ ಯಾಕೆ ಅರ್ಥವಾಗುವುದಿಲ್ಲ? ಹಾಗಾದರೆ ಪ್ರೀತಿ ಎಂದರೆ ಅವರ ಅರ್ಥದಲ್ಲಿ ಏನು? ಪ್ರೀತಿಯಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವ, ಪರಸ್ಪರರನ್ನು ಗೌರವಿಸುವ, ಸಮಾನ ಜವಾಬ್ದಾರಿ ಹೊರುವ, ಭವಿಷ್ಯವನ್ನು ಪರಸ್ಪರ ಮಾತುಕತೆಯ ಆಧಾರದಲ್ಲಿ ಕಟ್ಟಬೇಕಾದದ್ದು ಎಂಬುದನ್ನು ಯುವಕರಿಗೆ ಕಲಿಸುವಲ್ಲಿ ನಾವೆಲ್ಲ ಸೋತಿದ್ದೇವೆಯೇ? – ಸಬಿಹಾ ಭೂಮೀಗೌಡ, ಲಿಂಗತ್ವ ತಜ್ಞರು.
ಬಿ.ಸಿ. ರೋಡಿನಲ್ಲಿ ಹಾಡುಹಗಲೇ ಸಾರ್ವಜನಿಕರ ಸಮ್ಮುಖದಲ್ಲಿ ಓರ್ವ ಪ್ರೇಮಿ (ಹಾಗೆಂದು ಕರೆಯುವುದೇ ಅಪಮಾನ) ಯು ತಾನು ಪ್ರೀತಿಸಿದವಳನ್ನು ಮಚ್ಚಿನಿಂದ ಕೊಲೆಗೈದ ಸಂಗತಿಯನ್ನು ನಾವೆಲ್ಲ ಪತ್ರಿಕೆಯಲ್ಲಿ ಓದಿದ್ದೇವೆ. ಈ ಘಟನೆಯು ಮೊದಲನೆಯದ್ದೂ ಅಲ್ಲ, ಬಹುಶಃ ಕೊನೆಯದೂ ಅಲ್ಲ. ಗಂಡು ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದರೆ ಹೆಣ್ಣು ಎರಡನೇ ಯೋಚನೆ ಮಾಡದೆ ಅದಕ್ಕೆ ಒಪ್ಪಿಗೆ ನೀಡುವುದೇ ಅವಳ ಪಾಲಿನ ಬದುಕುಳಿಯುವ ದಾರಿಯೇ? ಇಂಥ ಚಿಂತನೆಗಳ ಮೂಲ ಎಲ್ಲಿದೆ? ಇಂಥ ಅಮಾನವೀಯ ಘಟನೆಗಳು ನಡೆಯಲು ಕಾರಣಗಳೇನು ಎಂಬುದನ್ನು ಗುರುತಿಸುವುದು, ಇಂಥ ನಡೆಗೆ ಕಾರಣವಾದ ಸಂಗತಿಗಳ ಮೂಲ ಬೇರುಗಳನ್ನು ಕಿತ್ತುಹಾಕುವುದರಿಂದ ಮಾತ್ರ ಇಂಥ ಹೀನ ಕಾರ್ಯಗಳ ಪುನರಾವರ್ತನೆಯನ್ನು ತಪ್ಪಿಸಲು ಸಾಧ್ಯ.
ಓರ್ವ ಹುಡುಗಿ, ಅದೂ ತಾನು ಪ್ರೀತಿಸುವ ಹುಡುಗಿ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬುದು ಓರ್ವ ಯುವಕನಿಗೆ ಅವಮಾನದ ಮತ್ತು ಮಾನಾಪಮಾನದ ಪ್ರಶ್ನೆ ಎನಿಸುವುದು ಏಕೆ? ಆ ಯುವತಿಗೆ ಅವಳದೇ ಆದ ಆಸೆ, ಕನಸು, ಆಯ್ಕೆ, ಅಭಿರುಚಿಗಳು ಇರಬಹುದು ಎಂಬ ಪ್ರಾಥಮಿಕ ತಿಳುವಳಿಕೆ ಯುವಕರಿಗೆ ಯಾಕಿಲ್ಲ? ಅವಳ ಅಭಿಪ್ರಾಯಗಳಿಗೂ ತನ್ನದರಂತೆಯೇ ಮೌಲ್ಯ, ಗೌರವ ಇರಬೇಕು ಎಂಬುದು ಯುವಕರಿಗೆ ಯಾಕೆ ಅರ್ಥವಾಗುವುದಿಲ್ಲ? ಹಾಗಾದರೆ ಪ್ರೀತಿ ಎಂದರೆ ಅವರ ಅರ್ಥದಲ್ಲಿ ಏನು? ಎಲ್ಲವನ್ನೂ ಅಧಿಕಾರಯುತವಾಗಿ ಪಡೆಯುವುದು ಎಂದು ತಿಳಿದಿದ್ದಾರೆಯೇ? ಪ್ರೀತಿಯಲ್ಲಿ ಪರಸ್ಪರ ಅರ್ಥ ಮಾಡಿಕೊಳ್ಳುವ, ಪರಸ್ಪರರನ್ನು ಗೌರವಿಸುವ, ಸಮಾನ ಜವಾಬ್ದಾರಿ ಹೊರುವ, ಭವಿಷ್ಯವನ್ನು ಪರಸ್ಪರ ಮಾತುಕತೆಯ ಆಧಾರದಲ್ಲಿ ಕಟ್ಟಬೇಕಾದದ್ದು ಎಂಬುದನ್ನು ಯುವಕರಿಗೆ ಕಲಿಸುವಲ್ಲಿ ನಾವೆಲ್ಲ ಸೋತಿದ್ದೇವೆಯೇ? ಅಥವಾ ನಮ್ಮ ಶಿಕ್ಷಣ, ಸಾಮಾಜಿಕ ವ್ಯವಹಾರ, ಸಾಂಸ್ಕೃತಿಕ ಮಾಧ್ಯಮಗಳ ಮೂಲಕ ಇಂಥ ಲಿಂಗ ಸೂಕ್ಷ್ಮತೆಯನ್ನು ಮೂಡಿಸುವ ಹಾದಿಯಲ್ಲಿ ನಾವು ತುಂಬಾ ಹಿಂದೆ ಉಳಿದಿದ್ದರ ಪರಿಣಾಮವೇ ಇದು? ತನ್ನ ಪ್ರೀತಿಯನ್ನು ನಿರಾಕರಿಸಿದ, ತನ್ನ ಅಧಿಕಾರವನ್ನು ನಿರಾಕರಿಸಿದ, ತನ್ನನ್ನು ಪ್ರಶ್ನಿಸಿದ, ತನ್ನಿಂದ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ, ತನ್ನನ್ನು ಉಪೇಕ್ಷಿಸಿದ, ಯುವತಿಗೆ /ಹೆಂಡತಿಗೆ/ ಅಕ್ಕ- ತಂಗಿಯರಿಗೆ ‘ಬುದ್ಧಿ ಕಲಿಸುವುದು’ ಎಂದರೆ ತನ್ನ ಬಲ ಪ್ರದರ್ಶನ ಮಾಡುವುದು, ಅವರನ್ನು ಭಯದಲ್ಲಿ ಇಡುವುದು ಅಥವಾ ಅದಾವುದೂ ಅಲ್ಲವಾದರೆ ಅವರು ಬದುಕಲೇ ಅರ್ಹರಲ್ಲವೆಂದು ಯೋಚಿಸುವ, ತೀರ್ಮಾನಿಸುವ ಯುವಕರ ಮತ್ತು ಗಂಡಸರ ಈ ವರ್ತನೆಯನ್ನು ಹೇಗೆ ನಾವು ಪರಿಭಾವಿಸಬೇಕು?

ನಾವು ಇಂಥ ಪ್ರಕರಣಗಳನ್ನು ಬಿಡಿಬಿಡಿ ಪ್ರಕರಣಗಳಾಗಿ ಅಥವಾ ಅಕಸ್ಮಾತಾಗಿ, ದುರದೃಷ್ಟವಶಾತ್ ನಡೆದ ಪ್ರಕರಣಗಳಾಗಿ ನೋಡುವುದರಲ್ಲೇ ತಪ್ಪು ಅಡಗಿದೆ. ಇವುಗಳ ಹಿಂದೆ ಒಂದು ತಾತ್ವಿಕತೆ ಅಡಗಿರುತ್ತದೆ. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ದೀರ್ಘ ಕಾಲದಿಂದ ಯಾಜಮಾನ್ಯ ಅಥವಾ ಅಧಿಕಾರವನ್ನು ಸ್ಥಾಪಿಸಿದೆ ಎಂದರೆ ಅದು ತನ್ನ ನಡೆಗೆ ಸಮರ್ಥನೆಯಾಗಿ ಒಂದು ತಾತ್ವಿಕತೆಯನ್ನು ಹುಟ್ಟು ಹಾಕಿರುತ್ತದೆ. ಸ್ತ್ರೀ- ಪುರುಷರ ನಡುವೆ ಇಂತಹ ತಾತ್ವಿಕತೆಯನ್ನು ಪುರುಷಪ್ರಧಾನತೆಯು ಅನಾದಿಕಾಲದಿಂದ ಚಲಾವಣೆಯಲ್ಲಿ ಇಟ್ಟಿದೆ. ಮತ್ತು ಆ ತಾತ್ವಿಕತೆಯನ್ನು ತನ್ನ ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳ ಮುಖಂಡರು ಮತ್ತು ಸಂಸ್ಥೆಗಳ ಮೂಲಕ ಪದೇ ಪದೇ ಹೇರುವ ಮೂಲಕ ಗಟ್ಟಿಗೊಳಿಸುತ್ತಿರುವುದು ನಮ್ಮ ಕಣ್ಣ ಮುಂದಿನ ಸತ್ಯ.
ಈ ತಾತ್ವಿಕತೆಯು ಜನರಿಂದ ‘ಮೌನ ಒಪ್ಪಿಗೆ’ಯನ್ನು ಪಡೆದಿರುತ್ತದೆ. ಇದನ್ನು ‘ಒಪ್ಪಿತ ಯಾಜಮಾನ್ಯ’ಎಂದು ಕರೆಯುತ್ತೇವೆ. ಹುಡುಗಿ /ಮಗಳು /ಅಕ್ಕ ತಂಗಿ / ಹೆಂಡತಿ/ ತಾಯಿ ಆದವರಿಗೆ ಏನು ಒಳ್ಳೆಯದು, ಯಾವ ಗುಣಗಳನ್ನು ಅವರು ಹೊಂದಿರಬೇಕು, ಯಾವುದು ಅವರ ಆದರ್ಶವಾಗಿರಬೇಕು, ಅವರ ಬದುಕಿನ ಸಾರ್ಥಕತೆ ಯಾವುದರಲ್ಲಿದೆ ಎಂಬುದನ್ನೆಲ್ಲ ಪುರುಷರೇ ನಿರ್ಧರಿಸಿ ಜಾರಿಗೆ ತಂದಿರುವುದು ಈ ತಾತ್ವಿಕತೆಯ ಇನ್ನೊಂದು ಮುಖ. ಇದನ್ನು ಒಪ್ಪಿದವರು ‘ಸಾಮಾಜಿಕ ಮಾನ್ಯತೆ’ಯನ್ನು ಪಡೆಯುವುದು, ಪ್ರಶ್ನಿಸಿದವರು ಮತ್ತು ನಿರಾಕರಿಸಿದವರು ‘ಸಾಮಾಜಿಕ ಬಹಿಷ್ಕಾರ’ಕ್ಕೆ ಒಳಗಾಗುವುದು ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಇನ್ನೂ ಚೋದ್ಯದ ಸಂಗತಿ ಎಂದರೆ ಇಂತಹ ‘ಸ್ತ್ರೀ ವಿರೋಧಿ ಮೌಲ್ಯ’ಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಸಮಾಜವು ಮಹಿಳೆಯರ ಮೇಲೆಯೇ ಹೇರಿದೆ.
ಇನ್ನೊಂದೆಡೆ ನಾವು ಹುಡುಗರಿಗೆ / ಯುವಕರಿಗೆ/ ಪುರುಷರಿಗೆ ಲಿಂಗಸೂಕ್ಷ್ಮತೆಯ ಅರಿವನ್ನು ಮೂಡಿಸದೆ ನಿರ್ಲಕ್ಷವನ್ನು ತೋರಿದ್ದೇವೆ. ಓರ್ವ ತುಂಟ, ಕಿಡಿಗೇಡಿ, ಕೋಪಿಷ್ಟ, ಮುಂಗೋಪಿ ಯುವಕ/ ಹುಡುಗನನ್ನು ತಿದ್ದುವ ಬದಲು ಅವನನ್ನು ಅವನ ಗುಣಗಳಿಗಾಗಿ ಮೆಚ್ಚುವುದು, ಪ್ರೋತ್ಸಾಹಿಸುವುದು, ಅದು ಅವನ ‘ಹುಡುಗುತನ’ ಎಂದು ನಿರ್ಲಕ್ಷ ಮಾಡುವುದು ಒಂದೆಡೆಯಾದರೆ, ಅವನೊಳಗಿನ ಲಜ್ಜೆ, ಸಂಕೋಚ, ಭಯ, ವಿಧೇಯತೆ ಮುಂತಾದ ಗುಣಗಳನ್ನು ಲೇವಡಿ ಮಾಡುತ್ತಲೋ, ಅವುಗಳಿಗೆ ನಕಾರಾತ್ಮಕತೆ ತೋರುತ್ತಲೋ ಅವನನ್ನು ‘ಗಟ್ಟಿಗ’ನನ್ನಾಗಿ ಮಾಡುತ್ತಿದ್ದೇವೆ ಎಂದು ಹೆಮ್ಮೆ ತೋರುವ ಕೆಲಸ ಇನ್ನೊಂದೆಡೆ ನಡೆಯುತ್ತದೆ. ಪರಿಣಾಮವಾಗಿ ಇನ್ನೊಬ್ಬರಿಗೆ ಆಜ್ಞೆ ಮಾಡಬೇಕಾದವನು, ನಿರ್ಧಾರ ಕೈಗೊಳ್ಳಬೇಕಾದವನು, ಆಯ್ಕೆಯ ಅಧಿಕಾರವುಳ್ಳವನು, ಎಲ್ಲರ ಒಳಿತನ್ನು ತೀರ್ಮಾನಿಸುವವನು, ಮನೆಯಲ್ಲಿ ಮೊದಲ ಪ್ರಾಶಸ್ತ್ಯ ಪಡೆಯಬೇಕಾದವನು ತಾನೆಂಬ ಸಾಮಾಜೀಕರಣಕ್ಕೆ ಯುವಕರನ್ನು ಮತ್ತು ಗಂಡು ಮಕ್ಕಳನ್ನು ಒಡ್ಡಿಬಿಟ್ಟಿದ್ದೇವೆ. ಇದರ ದೂರಗಾಮಿ ಪರಿಣಾಮವೇ ತನ್ನ ಸಹಸಂಗಾತಿಯಾದವಳು ತನ್ನಂತೆ ಓರ್ವ ಮನಸ್ಸು, ಆಯ್ಕೆ, ಕನಸು, ಆದರ್ಶ, ಗುರಿಗಳನ್ನು ಹೊಂದಿರುವವಳು ಎಂಬುದನ್ನೇ ಆತ ಮರೆಯುವಂತೆ ಈ ಸಾಮಾಜೀಕರಣವು ಮಾಡಿಬಿಟ್ಟಿದೆ.

ಇವತ್ತಿನ ಎಲ್ಲಾ ಹಿಂಸೆ ಕ್ರೌರ್ಯಗಳ ಮೂಲವೇ ಇಲ್ಲಿದೆ. ಇವತ್ತು ನಾವು ನೀಡುತ್ತಿರುವ ಸಾಲು ಸಾಲು ಸಿನಿಮಾಗಳನ್ನೇ ಗಮನಿಸಿ. ನಾಯಕನ ಕೈಯಲ್ಲಿ ಕತ್ತಿ, ಮಚ್ಚು, ತಲವಾರುಗಳು ಅತ್ಯಂತ ‘ಸಹಜ ಆಭರಣ’ಗಳಂತೆ ಶೋಭಿಸುತ್ತಿವೆ. ತನಗೆ ವಿರುದ್ಧ ಮಾತನಾಡಿದವರ ತಲೆ ಕತ್ತರಿಸುವ, ಅವರನ್ನು ಇನ್ನಿಲ್ಲದಂತೆ ಹೊಸಕಿ ಹಾಕುವ ಹೊಸ ಹೊಸ ದಾರಿಗಳನ್ನು ಅವು ಬಿಚ್ಚಿಡುತ್ತ, ಯುವಕರಿಗೆ ‘ಪುರುಷತ್ವ’ದ ಮಾದರಿಗಳನ್ನು ಸಾರುತ್ತಿವೆ. ಸಾರ್ವಜನಿಕ ವಲಯದಿಂದ ಇಂಥವುಗಳಿಗೆ ವಿರೋಧ ಎಲ್ಲಿ ವ್ಯಕ್ತವಾಗುತ್ತಿದೆ? ಈ ಅಸಹಜ ‘ಗಂಡುತನ’, ‘ಪುರುಷತ್ವ’ದ ವಿಷ ಉಂಡವರೇ ವಿಚಾರಹೀನರಾದಾಗ ಸಮಾಜದಲ್ಲಿ ಮಹಿಳೆಯರ ಮೇಲೆ ಹಿಂಸೆ, ಕ್ರೌರ್ಯ, ಕೊಲೆಗಳು ನಡೆಯುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಕ್ರೌರ್ಯ, ಹಿಂಸೆ, ದೌರ್ಜನ್ಯಗಳ ಹಿಂದೆ ಮಹಿಳೆಯರ ಮೇಲಿನ ತಮ್ಮ ಯಾಜಮಾನ್ಯ, ಅಧಿಕಾರ, ಹಿಡಿತವನ್ನು ಕಳೆದುಕೊಳ್ಳುತ್ತಿರುವ ಭಯದ ಪಾಲು ಅಧಿಕವಾಗಿರುವುದನ್ನು ಮರೆಯಲಾಗದು.
ಸಮಾಜದಲ್ಲಿರುವ ಸ್ತ್ರೀ- ಪುರುಷರ ಪಡಿಯಚ್ಚು ಪಾತ್ರಗಳು (ಸ್ಟೀರಿಯೋಟೈಪ್ ರೋಲ್) ಬದಲಾಗದೆ ನಾವು ಸಮಾನತೆಯ ಮತ್ತು ಲಿಂಗಸಮನ್ಯಾಯದ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ಸಾಮಾಜಿಕರ ಲಿಂಗತ್ವ ಕುರುಡುತನ(ಜೆಂಡರ್ ಬ್ಲೈಂಡ್ನೆಸ್) ವನ್ನು ಅಳಿಸಲು ಯೋಜನಾಬದ್ಧ, ದೀರ್ಘಕಾಲೀನ ಮತ್ತು ನಿರಂತರವಾದ ಕೆಲಸಗಳು ಆಗಬೇಕಿದೆ.
ಅವುಗಳಲ್ಲಿ ಯುವಕರಿಗೆ ಲಿಂಗ ಸೂಕ್ಷ್ಮತಾ ತರಬೇತಿಗಳನ್ನು ವ್ಯಾಪಕವಾಗಿ ನೀಡುವಂತಾಗಬೇಕು, ಶೈಕ್ಷಣಿಕ ಪಠ್ಯಗಳಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಲಿಂಗಸಮನ್ಯಾಯದ ವಿಚಾರಗಳು ಒಳಗೊಳ್ಳುವಂತೆ ಮೇಲ್ವಿಚಾರಣೆ ಮಾಡಬೇಕು, ಯಾವುದೇ ಒಂದು ಗುಣ ‘ಮೌಲ್ಯ’ವೆಂದರೆ ಇಬ್ಬರಿಗೂ ಅನ್ವಯವಾಗಬೇಕು ಮತ್ತು ‘ಅವಗುಣ’ ಎಂದಾದಲ್ಲಿ ಅದು ಇಬ್ಬರಿಗೂ ಅನ್ವಯವಾಗಬೇಕು. ‘ತೋಳ್ಬಲವೇ ಬಲವಲ್ಲ ; ಕ್ಷಮೆ, ಸಹನೆ, ತಾಳ್ಮೆ, ವಿನಯ ಇವು ನಿಜವಾದ ಬಲ’ ಎಂಬ ನಿಲುವಿನ ಪ್ರತಿಪಾದನೆ ಆಗಬೇಕು.
ಸಬಿಹಾ ಭೂಮೀಗೌಡ
ಇವರು ಕನ್ನಡದ ಪ್ರಮುಖ ವಿದ್ವಾಂಸರು, ವಿಮರ್ಶಕರು, ಹೋರಾಟಗಾರರು, ಲಿಂಗತ್ವ ತಜ್ಞರು ಮತ್ತು ವಿಶ್ರಾಂತ ಕುಲಪತಿಗಳು.
ಇದನ್ನೂ ಓದಿ- ಬಂಟ್ವಾಳದಲ್ಲಿ ಯುವತಿಯ ಹತ್ಯೆ ; ಕೋಮು ಪ್ರಚೋದನೆಗೆ ತಪ್ಪಿದ ನೆಲೆ


