ಟೆಹ್ರಾನ್ : ಇರಾನ್‌ನಲ್ಲಿ ಹತ್ಯೆಗೀಡಾದ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಆರು ದಿನಗಳ ಅಂತ್ಯಕ್ರಿಯೆಯಲ್ಲಿ 41 ರಿಂದ 43 ಮಿಲಿಯನ್ ಜನರು ಭಾಗವಹಿಸಿದ್ದರು ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ.
ಇರಾನ್‌ನ ಪ್ರೆಸ್ ಟಿವಿ ಖಮೇನಿ ಅವರ ಅಂತ್ಯಕ್ರಿಯೆಯನ್ನು “ಜಗತ್ತು ಇದುವರೆಗೆ ಕಂಡಿರದ ಅತಿದೊಡ್ಡ ಮೆರವಣಿಗೆ” ಎಂದು ಕರೆದಿದೆ. ಟೆಹ್ರಾನ್, ಕೋಮ್, ನಜಾಫ್, ಕರ್ಬಲಾ ಮತ್ತು ಮಶಾದ್ ಎಂಬ ಐದು ನಗರಗಳಲ್ಲಿ ಸಮಾರಂಭಗಳು ನಡೆದವು.
ಕಳೆದ ಶನಿವಾರ ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾ ಧಾರ್ಮಿಕ ಸಂಕೀರ್ಣದಲ್ಲಿ ಹತ್ತಾರು ಸಾವಿರ ಇರಾನಿಯನ್ನರು ಒಟ್ಟುಗೂಡಿದಾಗ ಅಧಿಕೃತ ಸಾರ್ವಜನಿಕ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ಪ್ರಾರಂಭವಾದವು, ಅಲ್ಲಿ ಖಮೇನಿ ಅವರ ಶವಪೆಟ್ಟಿಗೆಯನ್ನು ಪ್ರದರ್ಶಿಸಲಾಗಿತ್ತು.
ಇರಾನ್‌ನ ಅವರ ಹುಟ್ಟೂರಾದ ಮಶ್ಹಾದ್ನಲ್ಲಿರುವ ಇಮಾಮ್ ರೆಜಾ ಸ್ಮಾರಕ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಲಕ್ಷಾಂತರ ಜನರ ಪ್ರಾರ್ಥನೆಯ ನಡುವೆ ಅಂತ್ಯಕ್ರಿಯೆ ಸಾಗಿತು. ಈ ಸಂದರ್ಭದಲ್ಲಿ ಅವರ ಮಗ ಮತ್ತು ಅವರ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್, ಮುಖ್ಯ ನ್ಯಾಯಮೂರ್ತಿ ಘೋಲಮ್ ಹೊಸೇನ್ ಮೊಹ್ಸೆನಿ ಎಜೈ ಮತ್ತು ಖಮೇನಿ ಅವರ ಹಿರಿ ಮಗ ಮುಸ್ತಫಾ ಖಮೇನಿ ಸೇರಿದಂತೆ ಲಕ್ಷಾಂತರ ಜನರು ಖಮೇನಿಗೆ ವಿದಾಯ ಹೇಳಿದರು
ರಾಜ್ಯ ಪ್ರಸಾರವಾಹಿನಿ ಐಆರ್ಐಬಿ ತನ್ನ ವರದಿಯಲ್ಲಿ, ಇಸ್ಲಾಮಿಕ್ ಕ್ರಾಂತಿಯ ಹುತಾತ್ಮ ನಾಯಕನ ಅಂತ್ಯಕ್ರಿಯೆಯು ಇಮಾಮ್ ರೆಜಾ ಸ್ಮಾರಕ ಕೇಂದ್ರದಲ್ಲಿ ನಡೆಯಿತು ಎಂದು ತಿಳಿಸಿದೆ.
ಇರಾನ್‌ನ ಪ್ರಾದೇಶಿಕ ಮಿತ್ರರಾಷ್ಟ್ರಗಳಾದ ಗಾಜಾದಿಂದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್, ಲೆಬನಾನ್‌ನಿಂದ ಹೆಜ್ಬೊಲ್ಲಾ ಮತ್ತು ಯೆಮೆನ್‌ನಿಂದ ಹೌತಿಗಳ ಪ್ರತಿನಿಧಿಗಳು ಹಾಜರಿದ್ದರು.
ಮಧ್ಯ ಟೆಹ್ರಾನ್‌ನಲ್ಲಿರುವ ಅವರ ಕಾಂಪೌಂಡ್ ಮೇಲೆ ಯುಎಸ್-ಇಸ್ರೇಲಿ ದಾಳಿಯಿಂದ ಕೊಲ್ಲಲ್ಪಟ್ಟ ನಾಲ್ಕು ತಿಂಗಳಿಗಿಂತ ಹೆಚ್ಚು ಸಮಯದ ನಂತರ, ಖಮೇನಿ ಅವರನ್ನು ದೇಶದ ಪವಿತ್ರ ಶಿಯಾ ದೇಗುಲದಲ್ಲಿ ಸಮಾಧಿ ಮಾಡಲಾಯಿತು.
ಕಳೆದೆರಡು ದಿನಗಳ ಹಿಂದೆ ವಾಷಿಂಗ್ಟನ್ ಮತ್ತು ಟೆಹ್ರಾನ್ ಪಡೆಗಳು ದಾಳಿ ಮತ್ತು ಪ್ರತಿದಾಳಿ ನಡೆಸುವ ಮೂಲಕ ಮತ್ತೆ ಯುದ್ಧಾರಂಭಕ್ಕೆ ಮುನ್ನುಡಿ ಬರೆದಿವೆ. ಅಮೆರಿಕದ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಟೆಹ್ರಾನ್ ಮತ್ತು ಮಶ್ಹಾದ್ ನಡುವಿನ ರೈಲು ಮಾರ್ಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

