ಬೆಂಗಳೂರು : ನಾನು ಕೇಂದ್ರ ಸಚಿವನಾಗಿದ್ದರೂ ರಾಜ್ಯ ರಾಜಕಾರಣದಲ್ಲೇ ಇದ್ದೇನೆ. ಮುಂದೆ ರಾಜ್ಯಕ್ಕೆ ಹಿಂದಿರುಗುತ್ತೇನೆ ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ. ಹೀಗಾಗಿ ಪಕ್ಷದ ಸಂಘಟನೆಯ ಜವಾಬ್ದಾರಿ ನನಗಿದೆ. ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ. ಆದರೆ ಈಗಲೇ ಅಲ್ಲ ಎಂದರು.
ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ. ಹಾಗಾಗಿ ಇವತ್ತೇ, ನಾಳೆ ದಿನವೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಉತ್ತರಿಸಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಅಧಿಕವಾಗಿ ಇವೆ. ಹೀಗಾಗಿ ಅಲ್ಲಿ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬ ಒತ್ತಡ ಇದೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರ ಜೊತೆ ಚರ್ಚಿಸುತ್ತೇನೆ ಎಂದರು.
ಜೆಡಿಎಸ್ನ ಹಿರಿಯೂರು ಕ್ಷೇತ್ರದ ನಾಯಕರು ಹಾಗೂ ಮುಖಂಡರ ಹಲವು ಸಭೆಗಳನ್ನು ಈಗಾಗಲೇ ನಡೆಸಿದ್ದೇನೆ. ಎಲ್ಲರೂ ನಮ್ಮ ಪಕ್ಷದ ಅಭ್ಯರ್ಥಿಯನ್ನು ಹಾಕಬೇಕು ಎನ್ನುತ್ತಿದ್ದಾರೆ. ಈ ಬಗ್ಗೆ ಇನ್ನು ಸಮಯ ಇದೆ. ನಿರ್ಧರಿಸಲಾಗುವುದು ಎಂದರು.
35 ಬಿಇಓಗಳಿಗೆ ನೋಟಿಸ್ ಯಾಕೆ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣಿ ಪ್ರಕ್ರಿಯೆಯಲ್ಲಿ ಗುಂಪು ಗುಂಪಾಗಿ ಪರಿಷ್ಕರಣೆ ನಡೆದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಹೇಳಿಕೆ ಗಮನಿಸಿದ್ದೇನೆ. ನಾನು, ಪ್ರಹ್ಲಾದ್ ಜೋಶಿ ಸೇರಿ ನಿಯೋಗ ಹೋಗಿ ದಾಖಲೆ ಸಮೇತ ದೂರು ಕೊಟ್ಟಿದ್ದೇವೆ. ರಾಮನಗರ, ಯಶವಂತಪುರ ಸೇರಿ ವಿವಿಧೆಡೆ ಗುಂಪು ಗುಂಪಾಗಿ ಎಸ್ಐಆರ್ ಮಾಡಿರುವ ದಾಖಲೆಗಳನ್ನು ಸೇರಿಸಿ ಕೊಟ್ಟಿದ್ದೇವೆ. ಸರಿಯಾಗಿ ಎಸ್ಐಆರ್ ನಡೆದಿದ್ದರೆ 35 ಬಿಇಓ ಗಳಿಗೆ ಯಾಕೆ ನೋಟಿಸ್ ಕೊಟ್ಟರು ಎಂದು ಕೇಂದ್ರ ಸಚಿವರು ಪ್ರಶ್ನೆ ಮಾಡಿದರು.
ಹೆಚ್ಎಂಟಿ ಜಾಗದ ದಾಖಲೆ ಪರಿಶೀಲಿಸಿ
ಎಚ್ಎಂಟಿ ಜಾಗಕ್ಕೂ ಹಾಗೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಆ ಜಮೀನಿನ ಮೇಲೆ ಅರಣ್ಯ ಇಲಾಖೆಗೆ ಯಾವುದೇ ಹಕ್ಕು ಇಲ್ಲ. ಈ ಬಗ್ಗೆ ಸಚಿವರು ದಾಖಲೆ ಪರಿಶೀಲನೆ ಮಾಡಬೇಕು ಎಂದು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹೆಚ್ಎಂಟಿ ಭೂಮಿಯ ಮೇಲೆ ಹಿಂದಿನ ಅರಣ್ಯ ಸಚಿವರಿಗೆ ಯಾಕೋ ವಿಪರೀತ ಆಸಕ್ತಿ ಇದೆ. ಯಾವ ಕಾರಣಕ್ಕೆ ಅವರು ಈ ಪರಿಯ ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.
ಹೆಚ್ಎಂಟಿ ಭೂಮಿಯ ಬಗ್ಗೆ ಇಷ್ಟೆಲ್ಲಾ ಮಾತನಾಡುವ ಖಂಡ್ರೆ, ಹೆಚ್ಎಂಟಿ ಜಮೀನಿನ ಪಕ್ಕದಲ್ಲಿಯೇ ಜಕ್ಕೂರು ವಿಮಾನ ಚಾಲನಾ ತರಬೇತಿ ಕೇಂದ್ರವಿದೆ. ಅದರ ಎದುರಿಗೆ ಇರುವ ಜಕ್ಕೂರು ಪ್ಲಾಂಟೇಶನ್ ನಲ್ಲಿ ಅನೇಕರು ಮನೆಗಳನ್ನು ಕಟ್ಟಿದ್ದಾರೆ ಕೊಂಡಿದ್ದಾರೆ. ಅಲ್ಲಿ ಸಾಕಷ್ಟು ಅರಣ್ಯ ಭೂಮಿ ಗುಳುಂ ಆಗಿದೆ. 444 ಎಕರೆ ಭೂಮಿಯಲ್ಲಿ ಜೈವಿಕ ಉದ್ಯಾನ ಮಾಡುವುದು ನಮ್ಮ ಗುರಿ ಎಂದು ಹೇಳಿದ್ದೀರಿ. ಅರಮನೆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆ ಹೇಳಿದ್ದು. ಅಲ್ಲಿ ನೋಡಿದರೆ ಉದ್ದಕ್ಕೂ ಕಲ್ಯಾಣಿ ಮಂಟಪಗಳು ತಲೆ ಎತ್ತಿ ನಿಂತಿವೆ. ಆ ಕಲ್ಯಾಣ ಮಂಟಪಗಳಿಗೆ ಯಾವ ಆಧಾರದ ಮೇಲೆ ಅನುಮತಿ ಕೊಟ್ಟಿದ್ದೀರಿ. ಜೈವಿಕ ಉದ್ಯಾನವನ ಮಾಡುವುದು ಅಂದರೆ ಇದೇನಾ ಖಂಡ್ರೆ ಅವರೇ ಎಂದು ಪ್ರಶ್ನಿಸಿದರು.
ಹೆಚ್ಎಂಟಿ ಜಾಗದ ಬಗ್ಗೆ ರಾಜ್ಯ ಸರ್ಕಾರದ ನಡುವೆ ವ್ಯಾಜ್ಯವಿದೆ. ಅದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಜತೆಗೆ ರಾಷ್ಟ್ರದ ಹೆಮ್ಮೆಯಾಗಿದ್ದ ಹೆಚ್ಎಂಟಿ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಣೆ ಆಗುವ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಅರಣ್ಯ ಇಲಾಖೆ ಭೂಮಿ ತೆರವು ಮಾಡಿ ಎಂದು ಆದೇಶ ನೀಡಿದೆ. ಸರಕಾರಿ ಸೇವೆಯಿಂದ ನಿವೃತ್ತಿ ಆಗುವುದಕ್ಕೆ ಕೇವಲ 15 ದಿನಗಳ ಹಿಂದೆ ಭೂಮಿ ಬಿಟ್ಟುಕೊಡುವಂತೆ ಕಾನೂನುಬಾಹಿರವಾಗಿ ಆದೇಶ ಹೊರಡಿಸಿದ್ದಾರೆ ಎಂದು ಆರೋಪಿಸಿದರು.

