ಬೆಂಗಳೂರು : ರಾಜ್ಯದಲ್ಲಿ ಕ್ಷೀಣಗೊಂಡಿದ್ದ ಮುಂಗಾರು ಮಳೆ ನಿಧಾನವಾಗಿ ಚುರುಕುಗೊಂಡಿದೆ. ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನೀಡಿದೆ.
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ನಿಧಾನವಾಗಿ ಆರಂಭವಾದ ಮಳೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯ ವ್ಯಾಪಿಸಬಹುದು ಎಂಬ ನಿರೀಕ್ಷೆ ರೈತರಲ್ಲಿ ಮೂಡಿದೆ. ಒಂದೇ ದಿನದಲ್ಲಿ ಸುರಿದ ಭಾರೀ ಮಳೆಗೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿ 20 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಮೂಡಿಗೆರೆ ತಾಲೂಕಿನ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ ಹೊರಡಿಸಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಸಾಧಾರಣವಾಗಿದ್ದ ಮಳೆ ಕಳೆದ ರಾತ್ರಿ ಹಾಗೂ ಇಂದು ಬೆಳಗ್ಗಿನಿಂದ ಮತ್ತಷ್ಟು ತೀವ್ರಗೊಂಡಿದೆ.
ಹೊಸನಗರ ತಾಲೂಕಿನದ್ಯಾಂತ ಕಳೆದ ಎರಡು ದಿನಗಳಿಂದ ಭಾರಿ ಮಳೆ ಹಿನ್ನೆಲೆಯಲ್ಲಿ ಇಂದು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೊಸನಗರ ತಹಶೀಲ್ದಾರ್ ಭರತ್ ರಾಜ್ ಅವರು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಬೆಳಗಾವಿಯಾದ್ಯಂತ ಮಳೆ
ಪಶ್ಚಿಮ ಘಟ್ಟ ಪ್ರದೇಶ ಮತ್ತು ಖಾನಾಪುರ ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಬತ್ತಿ ಹೋಗಿದ್ದ ನದಿಗಳಿಗೆ ಜೀವಕಳೆ ಬಂದಿದೆ. ಮಲಪ್ರಭಾ ನದಿಯು ಕಳೆದ ನಾಲ್ಕು ದಿನಗಳ ಹಿಂದೆ ಸಂಪೂರ್ಣವಾಗಿ ಒಣಗಿತ್ತು. ಆದರೆ, ಈಗ ಪಶ್ಚಿಮ ಘಟ್ಟದಲ್ಲಿನ ಮಳೆಯಿಂದಾಗಿ ನದಿಯು ಮೈದುಂಬಿ ಹರಿಯುತ್ತಿದ್ದು, 1,500 ರಿಂದ 2,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಲಪ್ರಭಾ ನದಿಯು ಸವದತ್ತಿ ಬಳಿ ಇರುವ ನವಿಲುತೀರ್ಥ ಜಲಾಶಯವನ್ನು ಸೇರುತ್ತದೆ. ಈ ಹಿಂದೆ ಖಾಲಿಯಾಗಿದ್ದ ಜಲಾಶಯಕ್ಕೂ ಈಗ ನೀರು ಹರಿದು ಬರುತ್ತಿದ್ದು, ಜಲಾಶಯಕ್ಕೂ ಜೀವಕಳೆ ಬಂದಿದೆ.
ಖಾನಾಪುರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮಲಪ್ರಭಾ ಮಾತ್ರವಲ್ಲದೆ, ಘಟಪ್ರಭಾ, ಕೃಷ್ಣಾ, ದೂದ್ ಗಂಗಾ, ವೇದ್ ಗಂಗಾ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಸಪ್ತ ನದಿಗಳೂ ಕೂಡ ಕೇವಲ ನಾಲ್ಕೇ ದಿನದಲ್ಲಿ ಮೈದುಂಬಿ ಹರಿಯುತ್ತಿವೆ. ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ, ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗುವ ಆತಂಕವೂ ಹೆಚ್ಚಾಗಿದೆ.
ಕೆಎಸ್ಎನ್ಡಿಎಂಸಿ ಬಿಡುಗಡೆ ಮಾಡಿದ ವರದಿಯಂತೆ ಶಿವಮೊಗ್ಗ, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೀಲವಾಡೆ ಎಂಬಲ್ಲಿ 195.5 ಮಿ. ಮೀ. ಮಳೆಯಾಗಿದೆ. ಪಾರವಾಡದಲ್ಲಿ 183.5 ಮಿ.ಮೀ.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 158.5 ಮೀ. ಹಾಗೂ ಉಡುಪಿ ಜಿಲ್ಲೆಯ ಕಾರ್ಕ ಳ ತಾಲ್ಲೂಕಿನ ನೀರೆ ಎಂ ಬಲ್ಲಿ 125 ಮಿ.ಮೀ . ಮಳೆಯಾಗಿದೆ ಎಂದು ವದರಿಯಾಗಿದೆ.
ರಾಜ್ಯದಾದ್ಯಂತ ಹಲವೆಡೆ 50 ಮಿ.ಮೀ ಗಿಂತ ಹೆಚ್ಚು ಮಳೆಯಾಗಿರುವುದು ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ ಎಂದು ಕೆಎಸ್ಎನ್ಎಂಡಿಸಿ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿತ್ರದುರ್ಗ, ಹಾಸನ ಹಾಗೂ ಮೈಸೂರು ಭಾಗಗಳಲ್ಲಿ ಮುಂಗಾರು ಮಳೆ ಸಾಧಾರಣವಾಗಿ ಮುಂದುವರಿಯಲಿದೆ. ಆರಂಭದಲ್ಲಿ ಕೈಕೊಟ್ಟಿರುವ ಮುಂಗಾರು ಮಳೆ ಜುಲೈ ಮೊಲದ ವಾರದಲ್ಲಿ ಚುರುಕು ಪಡೆದುಕೊಂಡಿದ್ದು ರೈತರಲ್ಲಿ ಸಂತಸ ಮನೆ ಮಾಡಿದೆ.
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಭಾರಿ ಮಳೆ, ದಕ್ಷಿಣ ಒಳನಾಡು ಮತ್ತಯ ಮಲೆನಾಡು ಜಿಲ್ಲೆಗಳಲ್ಲಿ ಜುಲೈ 8 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಕಲಬುರ್ಗಿಯಲ್ಲಿ ಸಾಧಾರಣ ಮಳೆ
ಉತ್ತರ ಒಳನಾಡು ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಇತರ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಭಾರೀ ಗಾಳಿಯೊಂದಿಗೆ ಹಗುರ ಮಳೆಯಾಗುವ ಮುನ್ಸೂಚನೆ ಇದೆ.
ರಾಯಚೂರಿನಲ್ಲಿ ಅಧಿಕ ತಾಪಮಾನ
ಇದೇ ವೇಳೆ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಅತ್ಯಧಿಕತ ತಾಪಮಾನ ದಾಖಲಾಗಿತ್ತು. ಇಲ್ಲಿ 32.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ಐದು ದಿನಗಳಲ್ಲಿ ಇಲ್ಲೂ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.

