ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ತನ್ನ ಸಂಯೋಜಿತ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ವರ್ಷದಿಂದ ತ್ರಿಭಾಷಾ ನೀತಿಯನ್ನು ಜಾರಿಗೊಳಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಆದರೆ, ಈ ಪರಿಷ್ಕೃತ ನೀತಿಯು ಪ್ರಸಕ್ತ ಸಾಲಿನ 10ನೇ ತರಗತಿಯ ಬ್ಯಾಚ್ಗೆ ಅನ್ವಯಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಶಿಫಾರಸುಗಳ ಅನ್ವಯ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾರ್ಥಿಗಳು ಎರಡು ಭಾರತೀಯ ಭಾಷೆಗಳು ಸೇರಿದಂತೆ ಒಟ್ಟು ಮೂರು ಭಾಷೆಗಳನ್ನು ಕಲಿಯುವುದನ್ನು ಇದು ಕಡ್ಡಾಯಗೊಳಿಸಿದೆ.
ಸಿಬಿಎಸ್‌ಇ ಪ್ರಕಾರ, ಈ ನೀತಿಯ ಮುಖ್ಯ ಉದ್ದೇಶ ಬಹುಭಾಷಾ ಪ್ರಾವೀಣ್ಯತೆ ಮತ್ತು ಸಾಂಸ್ಕೃತಿಕ ಬೇರುಗಳನ್ನು ಬಲಪಡಿಸುವುದು ಹಾಗೂ ಭಾಷಾ ಕಲಿಕೆಯನ್ನು ಹೆಚ್ಚು ಅರ್ಥಪೂರ್ಣ, ಆಕರ್ಷಕ ಮತ್ತು ಶ್ರೀಮಂತವಾಗಿಸುವುದರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡುವುದಾಗಿದೆ.
10ನೇ ತರಗತಿಗೆ ಮೂರನೇ ಭಾಷೆ ಪರೀಕ್ಷೆ ಇಲ್ಲ
ಪ್ರಸ್ತುತ 7, 8 ಮತ್ತು 9ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಎಕ್ಸಾಂನಲ್ಲಿ ಮೂರನೇ ಭಾಷೆಯ ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎಂದು ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ.
ಈಗಾಗಲೇ ಎರಡು ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿರುವ ಸದ್ಯದ 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು, ಅದೇ ಭಾಷೆಗಳೊಂದಿಗೆ ಹೆಚ್ಚುವರಿಯಾಗಿ ಒಂದು ಸ್ಥಳೀಯ ಭಾರತೀಯ ಭಾಷೆಯನ್ನು ಮುಂದುವರಿಸಲಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಈ ನೀತಿಯು ಸುಲಭವಾಗಿ ಜಾರಿಯಾಗಲು ಅನುವಾಗುವಂತೆ, ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯನ್ನು ಕಲಿಯಲು ನೆರವಾಗುವ ನಿಟ್ಟಿನಲ್ಲಿ ಸಿಬಿಎಸ್‌ಇ ಹಾಗೂ ಎನ್‌ಸಿಇಆರ್‌ಟಿ ಜಂಟಿಯಾಗಿ ತರಗತಿವಾರು ಪೂರಕ ಕಲಿಕಾ ಸಾಮಗ್ರಿಗಳನ್ನು ಒದಗಿಸಲಿವೆ.
ಭಾಷೆಗಳ ಪಟ್ಟಿ: ಪರಿಷ್ಕೃತ ಭಾಷಾ ನೀತಿಯಡಿ, 9ನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಮೂರು ಭಾಷೆಗಳನ್ನು ಕಲಿಯಲಿದ್ದು, ಅದರಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಭಾಷೆಗಳಾಗಿರಬೇಕು. ಇದರಲ್ಲಿ ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಲಿ, ಪಂಜಾಬಿ, ಗುಜರಾತಿ, ಒಡಿಯಾ ಮತ್ತು ಅಸ್ಸಾಮಿ ಸೇರಿದಂತೆ ಇತರ ಭಾಷೆಗಳು ಒಳಗೊಂಡಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಅರೇಬಿಕ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಪ್ರೌಢ ಶಿಕ್ಷಣ ಹಂತದಲ್ಲಿ ಮೂರನೇ ಭಾಷೆಯನ್ನು ಪರಿಚಯಿಸುತ್ತಿರುವುದು, ಮಧ್ಯಮ ಹಂತದ (6 ರಿಂದ 8ನೇ ತರಗತಿ) ಭಾಷಾ ಕಲಿಕೆಯ ಮುಂದುವರಿದ ಭಾಗವಾಗಿದೆ ಎಂದು ಸಿಬಿಎಸ್‌ಇ ಹೇಳಿದೆ.

