ಅಂಧಭಕ್ತ : (ಭಗವಾದ್ವಜ ಹಿಡಿದು ಕುಣಿದಾಡುತ್ತಾ)
ಕರಾಳ ದಿನ ಇವತ್ತು ಕರಾಳ ದಿನ. ಹತ್ಯಾ ದಿನ ಇವತ್ತು ಹತ್ಯಾ ದಿನ..
ಪತ್ರಕರ್ತ : ಹೋ ಅದ್ಯಾವ ಕರಾಳ ದಿನ, ಯಾರ ಹತ್ಯಾ ದಿನ. ಹಿಂಗ್ಯಾಕೆ ಚಡ್ಡಿಯೊಳಗ ತೊಣಸಿ ಹೊಕ್ಕಂತೆ ಕುಣೀತಿದ್ದಿಯಪ್ಪಾ.
ಅಂಧಭಕ್ತ : ಹೋ ಪತ್ರಕರ್ತ. ಬಾರಣ್ಣಾ ಸರಿಯಾದ ಸಮಯಕ್ಕೆ ಬಂದೆ. ಇವತ್ತು ಯಾವ ದಿನ ಗೊತ್ತಾ?
ಪತ್ರಕರ್ತ : ಇವತ್ತು ಗುರವಾರ.. ಗುರು ರಾಯರ ವಾರ. ವಾರ ಬಂತಮ್ಮಾ ಗುರುವಾರ ಬಂತಮ್ಮಾ ಅಂತಾ ರಾಯರ ಭಜನೆ ಮಾಡೋದು ಬಿಟ್ಟು ಇದೇನಿದು ಕರಾಳ..ಹತ್ಯೆ..
ಅಂಧಭಕ್ತ : ಹಾಂ ಅಲ್ಲೇ ಇರೋದು ಗುಟ್ಟು. ಇವತ್ತು ಸಂವಿಧಾನದ ಆಶಯಗಳನ್ನು ಕೊಲೆಮಾಡಿದ ದಿವಸ ಅನ್ನೊದಾದ್ರೂ ಗೊತ್ತಾ.
ಪತ್ರಕರ್ತ : ಕಳೆದ 12 ವರ್ಷದಿಂದ ಸಂಘಿ ಸರಕಾರದಿಂದ ದಿನಾ ಸಂವಿಧಾನದ ಕೊಲೆ ಆಗ್ತಾನೇ ಇದೆ ಅಲ್ವಾ.. ಇವತ್ತೇನು ವಿಶೇಷ?
ಅಂಧಭಕ್ತ : ಐತೆ.. ವಿಶೇಷ ಐತೆ. ಏನಪಾಂತಂದ್ರೆ ಆ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ನಿನ್ನೆಗೆ 50 ವರ್ಷ ಆಯ್ತು. ಅವತ್ತೇ ಸಂವಿಧಾನದ ಹತ್ಯೆ ಮಾಡಲಾಯ್ತು. ನಮ್ಮ ಕೇಂದ್ರದ ಮೋದಿ ಸರಕಾರ “ಸಂವಿಧಾನ ಹತ್ಯಾ ದಿವಸ್” ಆಚರಿಸ್ತಾ ಇದೆ.
ಪರ್ತಕರ್ತ : ಅಲೆಲೆ ಹೀಗಾ ಸಮಾಚಾರ. ಆಮೇಲೆ..
ಅಂಧಭಕ್ತ : ಆಮೇಲೇನು ನಮ್ಮ ವಿಶ್ವಗುರುಗಳು “ತುರ್ತು ಪರಿಸ್ಥಿತಿ ಹೇರಿಕೆಗೆ ಐವತ್ತು ವರ್ಷಗಳು ಕಳೆದಿವೆ. ಸಂವಿಧಾನವನ್ನು ಹತ್ಯೆ ಮಾಡಿದ ಈ ಪಾಪವನ್ನು ಭಾರತದ ಯುವ ಪೀಳಿಗೆ ಎಂದೂ ಮರೆಯಬಾರದು” ಅಂತಾ ಹೇಳಿದ್ದಾರೆ.
ಪರ್ತಕರ್ತ : ಅಲ್ಲಪಾ ಅಂಧಭಕ್ತಾ. ತುರ್ತು ಪರಿಸ್ಥಿತಿ ಹೇರಿಕೆಗೆ ಐವತ್ತು ವರ್ಷ ಆಯ್ತು ಅಂತಾ ನಿಮಗೆ ಸಂಭ್ರಮವೋ ಇಲ್ಲಾ ಸಂಕಟವೋ ಅದನ್ನ ಮೊದಲು ಹೇಳು.
ಅಂಧಭಕ್ತ : ನಮಗಂತೂ ಸಂಭ್ರಮ, ಆ ಕಾಂಗ್ರೆಸ್ಸಿಗರಿಗೆ ಸಂಕಟ ಅಷ್ಟೇ.
ಪರ್ತಕರ್ತ : ಮತ್ತೆ ಹನ್ನೆರಡು ವರ್ಷದಿಂದ ಈ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನ ಅಗೋಚರವಾಗಿ ಹೇರಿದ್ದಾರಲ್ಲಾ ಅದರ ಆಚರಣೆ ಯಾವಾಗ?
ಅಂಧಭಕ್ತ : ಯಾರು ಹಂಗೇಳಿದ್ದು. ನೀವು ಹಿಂಗೆಲ್ಲಾ ಅಪಪ್ರಚಾರ ಮಾಡಬಾರ್ದು..
ಪರ್ತಕರ್ತ : ಈ ದೇಶದಲ್ಲಿ ಕೇಂದ್ರ ಸರಕಾರವನ್ನ, ಸಂಘಪರಿವಾರವನ್ನ ವಿರೋಧಿಸಿದವರಿಗೆ ನೀವೇನು ಹೇಳ್ತೀರಿ?
ಅಂಧಭಕ್ತ : ಅಂತವ್ರೆಲ್ಲಾ ದೇಶದ್ರೋಹಿಗಳು, ಪಾಕಿಸ್ತಾನಕ್ಕೆ ಹೋಗಿ ಅಂತೀವಿ. ಇಲ್ಲಾ ಯಾವುದಾದ್ರೂ ಒಂದು ಕೇಸ್ ಹಾಕಿಸಿ ಜೈಲಿಗೆ ಕಳಿಸ್ತೀವಿ. ಮೋದಿ ಶಾ ಜೋಡಿ ಅಂದ್ರೆ ಸುಮ್ಮನೇನಾ?
ಪರ್ತಕರ್ತ : ಹಾಂ.. ಇದನ್ನೇ ಇಂದಿರಮ್ಮನವರು ಐವತ್ತು ವರ್ಷದ ಹಿಂದೆ ಮಾಡಿದ್ರು. ವಿರೋಧಿಸಿದವರನ್ನ ರಾಜದ್ರೋಹದ ಆರೋಪದಲ್ಲಿ ಜೈಲಿಗೆ ಹಾಕಿದ್ರು. ಈಗ ನಿಮ್ಮ ಮೋಶಾರವರು ಮಾಡ್ತಿರೋದೇನು?
ಅಂಧಭಕ್ತ : ಅದನ್ನೇ..
ಪರ್ತಕರ್ತ : ಇಂದಿರಮ್ಮ ತುರ್ತು ಪರಿಸ್ಥಿತಿ ಅಂತಾ ಘೋಷಣೆ ಮಾಡಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ಕೊಂಡ್ರು, ಈಗ ಮೋದಿ ಶಾ ಜೋಡಿ ಘೋಷಣೆ ಮಾಡದೇ ಅದೇ ಕೆಲಸಾ ಮಾಡ್ತಿದೆಯಲ್ವಾ. ಅದಕ್ಕೆ ನಮ್ಮ ದೇಶ ಪತ್ರಿಕಾ ಸ್ವಾತಂತ್ರ್ಯದಲ್ಲಿ 180 ದೇಶಗಳ ಪೈಕಿ 159 ನೇ ನಂಬರಿನಲ್ಲಿರೋದು. ಇದು ಸಂವಿಧಾನದ ನಿತ್ಯ ಹತ್ಯೆ ಅಲ್ವಾ?
ಅಂಧಭಕ್ತ : ಅದೆಂಗೆ ಹತ್ಯೆ ಆಗುತ್ತೆ?
ಪರ್ತಕರ್ತ : ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಮುಂತಾದವುಗಳನ್ನು ಕೇಂದ್ರ ಸರಕಾರ ತನ್ನ ಅಡಿಯಾಳಾಗಿಸಿಕೊಂಡು ವಿರೋಧ ಪಕ್ಷಗಳನ್ನ ಮಟ್ಟ ಹಾಕಲು ಬಳಸಿಕೊಳ್ತಾ ಇರೋದು ಸಂವಿಧಾನದ ಆಶಯಗಳ ಹತ್ಯೆ ಅಲ್ವಾ?
ಅಂಧಭಕ್ತ : ಹೋ ಹಂಗಾ.. ಏನೇ ಆಗಲಿ, ದೇಶದ್ರೋಹಿಗಳನ್ನ ಸುಮ್ಮನೆ ಬಿಡಬಾರ್ದು. ಜೈಲಿಗೆ ಹಾಕಬೇಕು. ಏನೇ ಆಗಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಲೇ ಬೇಕು.
ಪರ್ತಕರ್ತ : ಶಹಬ್ಬಾಸ್. ವಿರೋಧಿಸಲೇಬೇಕು. ಆದರೆ ನಿಮ್ಮ ಆರೆಸ್ಸೆಸ್ ತುರ್ತು ಪರಿಸ್ಥಿತಿಯನ್ನ ಯಾಕೆ ಆಗ ವಿರೋಧಿಸಲಿಲ್ಲಾ?
ಅಂಧಭಕ್ತ : ಯಾಕೆಂದ್ರೆ ಆರೆಸ್ಸೆಸ್ ಬ್ಯಾನ್ ಮಾಡಿ ಲೀಡರ್‌ಗಳನ್ನ ಜೈಲಿಗೆ ಹಾಕಿದ್ರಲ್ಲಾ.. ಹೆಂಗೆ ವಿರೋಧಿಸೋದು.
ಪರ್ತಕರ್ತ : ಆ ತುರ್ತು ಪರಿಸ್ಥಿತಿಯಲ್ಲಿ ಪ್ರಗತಿಪರರು, ಸಾಹಿತಿಗಳು, ಚಿಂತಕರು, ವಿರೋಧ ಪಕ್ಷದವರು ಹೀಗೆ ತುರ್ತು ಪರಿಸ್ಥಿತಿ ವಿರೋಧಿಸಿದವರನ್ನೆಲ್ಲಾ ಹಿಡಿದು ಜೈಲಿಗೆ ಹಾಕಲಾಗಿತ್ತು ಹೌದಲ್ವೊ..
ಅಂಧಭಕ್ತ : ಹೌದು.. ಅದಕ್ಕೆ ಕರಾಳ ದಿನ ಅನ್ನೋದು.
ಪರ್ತಕರ್ತ : ಎಲ್ಲರೂ ತುರ್ತು ಪರಿಸ್ಥಿತಿ ಹೇರಿದ್ದ 21 ತಿಂಗಳು ಜೈಲಲ್ಲಿದ್ರು. ಆದರೆ ನಿಮ್ಮ ವಾಜಪೇಯಿಯವರು ಮಾತ್ರ ಯಾಕೆ ಒಂದೇ ತಿಂಗಳಿಗೆ ಪೆರೋಲ್ ಪಡೆದು ಜೈಲಿಂದ ಹೊರಗೆ ಬಂದ್ರು ಹೆಂಗೇ.. ?
ಅಂಧಭಕ್ತ : ಅದೆಲ್ಲಾ ನಂಗೆ ಗೊತ್ತಿಲ್ಲಾ.
ಪರ್ತಕರ್ತ : 1975 ಜುಲೈ 4 ರಲ್ಲಿ ಆರೆಸ್ಸೆಸ್ ಗೆ ನಿಷೇಧ ಹೇರಲಾಯ್ತು. ಆಗ ಆರೆಸ್ಸೆಸ್ಸಿನ ಅಧಿನಾಯಕರು ಯಾರಾಗಿದ್ರು?
ಅಂಧಭಕ್ತ : ಯಾರೋ ಒಬ್ಬರು ಆಗಿದ್ರು. ಯಾರು ಅಂತಾ ನೀನೇ ಹೇಳಿದ್ರಾಯ್ತು.
ಪರ್ತಕರ್ತ : ಬಾಳಾ ಸಾಹೇಬ್ ದೇವರಸರು ಸರಸಂಘ ಸಂಚಾಲಕರಾಗಿದ್ರು. ಜೈಲಲ್ಲಿದ್ದ ಅವ್ರು ಏನು ಮಾಡಿದ್ರು?
ಅಂಧಭಕ್ತ : ನನಗೇನು ಗೊತ್ತು. ಆಗ ನಾ ಇನ್ನೂ ಹುಟ್ಟೇ ಇರಲಿಲ್ಲ. ಬಹುಷಃ ತುರ್ತು ಪರಿಸ್ಥಿತಿ ಖಂಡಿಸಿ ಘನಘೋರ ಉಗ್ರ ಹೋರಾಟ ಮಾಡಿರಬೇಕು ಅಲ್ವಾ?
ಪರ್ತಕರ್ತ : ನೋ.. ಇಲ್ಲವೇ ಇಲ್ಲ. ತುರ್ತು ಪರಿಸ್ಥಿತಿ ಬೆಂಬಲಿಸಿ ಇಂದಿರಾಗಾಂಧಿಯವರಿಗೆ ನಾಲ್ಕು ಪತ್ರ ಬರೆದ್ರು.
ಅಂಧಭಕ್ತ : ಹಾಂ.. ಹಂಗಾ?
ಪರ್ತಕರ್ತ : ಮೊದಲು ಬಾಯಿ ಮುಚ್ಚು. 1975 ಆಗಸ್ಟ್ 22 ರಂದು ಮೊದಲ ಪತ್ರ ಬರೆದು “ಇಂದ್ರಮ್ಮನೋರೆ ನಿಮ್ಮ ಸ್ವಾತಂತ್ರ್ಯ ದಿನದ ಭಾಷಣ ಸಕಾಲಿಕವಾಗಿತ್ತು” ಅಂತೆಲ್ಲಾ ಹೊಗಳಿ ನಂತರ ದಯವಿಟ್ಟು ಆರೆಸ್ಸೆಸ್ ಮೇಲಿನ ನಿಷೇಧ ಹಿಂತೆಗೆದುಕೊಳ್ಳಿ ಎಂದು ಬೇಡಿಕೊಂಡರು.
ಅಂಧಭಕ್ತ : ಹಂಗ್ಯಾಕೆ ಬರದ್ರು ?
ಪರ್ತಕರ್ತ : ಅವರ ಪತ್ರಕ್ಕೆ ಇಂದ್ರಮ್ಮಾ ಕ್ಯಾರೇ ಅನ್ನಲಿಲ್ಲ. ಕಾದೂ ಕಾದೂ ಬೇಸಾರಾಗಿ ನವೆಂಬರ್ 10 ರಂದು ಮತ್ತೂ ಒಂದು ಪತ್ರ ಬರೆದ್ರು. ಅದರಲ್ಲಿ “ಇಂದಿರಾರವರ ಆಯ್ಕೆ ಅಸಿಂಧು ಎಂದು ತೀರ್ಪಿತ್ತ ಅಲ್ಲಹಾಬಾದ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ತೀರ್ಪು ಸರಿಯಾಗಿದೆ” ಎಂದು ಅಭಿನಂದಿಸಿದ್ದರು ಹಾಗೂ ಆರೆಸ್ಸೆಸ್ ಯಾವುದೇ ರಾಜಕೀಯ ಗಲಭೆಗಳಲ್ಲಿ ಭಾಗವಹಿಸಿಲ್ಲವಾದ್ದರಿಂದ ನಿಷೇಧ ಹಿಂತೆಗೆದುಕೊಳ್ಳಬೇಕು ಅಂತಾ ಮತ್ತೆ ಬೇಡಿಕೊಂಡರು.
ಅಂಧಭಕ್ತ : ಅಯ್ಯೋ ಹಿಂಗೆ ಪತ್ರ ಬರೆದಿದ್ರಾ?
ಪರ್ತಕರ್ತ : ಇದಕ್ಕಾದ್ರೂ ಉತ್ತರ ಬರುತ್ತಾ ಅಂತಾ ಕಾದರೂ ಇಂದ್ರಮ್ಮಾ ನಿರ್ಲಕ್ಷ ಮಾಡಿದ್ರು. ಉತ್ತರಕ್ಕಾಗಿ ಕಾದು ಸಾಕಾಗಿ ಮತ್ತೆ ಜನವರಿ 12 ರಂದು ವಿನೋಭಾ ಭಾವೆಯವರ ಮೂಲಕ ಮತ್ತೊಂದು ಪತ್ರ ರವಾನಿಸಿದರು. ಅದರಲ್ಲಿ “ಆರೆಸ್ಸೆಸ್ ಮೇಲಿನ ನಿಷೇಧ ರದ್ದು ಪಡಿಸಿದರೆ ಸಂಜಯ ಗಾಂಧಿಯವರ 20 ಅಂಶಗಳ ಕಾರ್ಯಕ್ರಮ ಹಾಗೂ ಇಂದಿರಾಗಾಂಧಿ ಸರಕಾರದ ಎಲ್ಲಾ ಯೋಜನೆಗಳನ್ನೂ ಬೆಂಬಲಿಸುತ್ತೇವೆ” ಎಂದು ಬರೆದಿದ್ದರು.
ಅಂಧಭಕ್ತ : ಈ ಸಲ ಇಂದ್ರಮ್ಮ ಉತ್ತರ ಬರದ್ರಾ ಇಲ್ಲಾ ನಿಷೇಧ ವಾಪಸ್ ಪಡೆದ್ರಾ?
ಪರ್ತಕರ್ತ : ಊ ಹುಂ. ಯಾವುರ ದಾಸಯ್ಯಾ ನೀನು ಅಂತಾನೂ ಇಂದಿರಮ್ಮಾ ಕೇಳಲಿಲ್ಲ. ಅದೇ ತಿಂಗಳ ಕೊನೆಯಲ್ಲಿ ಭಾವೆಯವರ ಮೂಲಕ ನಾಲ್ಕನೇ ಪತ್ರ ಬರೆದು ಕಳಿಸಿದ್ರು. ಏನೂ ಪ್ರಯೋಜನ ಆಗಲಿಲ್ಲ.
ಅಂಧಭಕ್ತ : ನೋಡಿದ್ರಾ ಆ ಇಂದ್ರಮ್ಮಾ ಅದೆಷ್ಟು ಹಠಮಾರಿ ಅಂತಾ? ಇಂದ್ರಮ್ಮನವರನ್ನ ಬೆಂಬಲಿಸ್ತೀನಿ ಅಂದ್ರೂ ಉತ್ತರಿಸಲಿಲ್ಲಾ ಅಂದ್ರೆ ಅದೆಷ್ಟು ಕೊಬ್ಬಿರಬೇಕು ಆಯಮ್ಮನಿಗೆ?
ಪರ್ತಕರ್ತ : ಕೊನೆಗೂ 1977 ಮಾರ್ಚ್ 21 ರಂದು ತುರ್ತು ಪರಿಸ್ಥಿತಿ ರದ್ದುಗೊಳಿಸಿ ದೇಶಾದ್ಯಂತ ಚುನಾವಣೆ ಘೋಷಿಸಿದರು ಇಂದ್ರಮ್ಮ.
ಅಂಧಭಕ್ತ : ಹಾಂ ಇಲ್ಲೇ ಇರೋದು ಗಮ್ಮತ್ತು. ಆಗ ನಮ್ಮ ಆರೆಸ್ಸೆಸ್ಸಿನವರು ಚುನಾವಣೆಯಲ್ಲಿ ಇಂದ್ರಮ್ಮನನ್ನ ಸೋಲಿಸಿ ಮಣ್ಣು ಮುಕ್ಕಿಸಿದರು ಹೌದಲ್ವೋ..
ಪರ್ತಕರ್ತ : ಇಂದ್ರಮ್ಮನನ್ನ ಸೋಲಿಸಿದ್ದು ಆರೆಸ್ಸೆಸ್ ಅಲ್ಲಪ್ಪಾ, ಜನರ ಆಕ್ರೋಶ. ಅದೇ ಜನ ಮುಂದಿನ ಚುನಾವಣೆಯಲ್ಲಿ ಮತ್ತೆ ಇಂದಿರಮ್ಮನವರಿಗೆ ಪಟ್ಟ ಕಟ್ಟಿದ್ದು ಎಂಬುದು ನೆನಪಿರಲಿ.
ಅಂಧಭಕ್ತ : ಇರ್ಬೋದು ಇರ್ಬೋದು. ನಮ್ಮ ಜನಕ್ಕೆ ಬುದ್ದಿ ಇಲ್ಲಾ ಏನ್ ಮಾಡೋದು?
ಪರ್ತಕರ್ತ : ಹೌದು ನೀನೇಳಿದ್ದು ನಿಜ. ದೇಶದಲ್ಲಿ ಬೆಲೆಯೇರಿಕೆ, ನಿರುದ್ಯೋಗ ತಾಂಡವವಾಡುತ್ತಿದ್ದರೂ ಕಳೆದ ಮೂರು ಚುನಾವಣೆಯಲ್ಲೂ ಮೋದಿ ಸರಕಾರವನ್ನೇ ಆಯ್ಕೆ ಮಾಡ್ತಾ ಇದ್ದಾರಲ್ಲಾ.. ನಿಜವಾಗ್ಲೂ ಜನರಿಗೆ ಬುದ್ದಿ ಇಲ್ಲ.
ಅಂಧಭಕ್ತ : ಅದೇ ಬೇರೆ, ಇದೇ ಬೇರೆ. ಏನೇ ಆಗಲಿ ಸಂವಿಧಾನ ಹತ್ಯಾ ದಿನವನ್ನ ಕರಾಳ ದಿನವಾಗಿ ಆಚರಿಸಲೇ ಬೇಕು, ಆಚರಿಸುತ್ತಿದ್ದೇವೆ.. ಅಷ್ಟೇ.
ಪರ್ತಕರ್ತ : ಅಲ್ಲಪ್ಪಾ ಕರಾಳ ದಿನವಾದ ತುರ್ತು ಪರಿಸ್ಥಿತಿಯನ್ನ ವಿರೋಧಿಸದೇ ಬೆಂಬಲಿಸಿದ್ದು ಆರೆಸ್ಸೆಸ್. ಹೀಗಿರುವಾಗ ಈಗ ಸಂಘ ಪರಿವಾರದ ಅಂಗ ಬಿಜೆಪಿ ಸರಕಾರ ಅದು ಹೇಗೆ ತುರ್ತು ಪರಿಸ್ಥಿತಿಯನ್ನ ಸಂವಿಧಾನ ಹತ್ಯಾ ದಿವಸ ಅಂತಾ ಆಚರಿಸ್ತಾ ಇದೆ? ಆ ನೈತಿಕತೆ ಇವರಿಗೆ ಇದೆಯಾ?
ಅಂಧಭಕ್ತ : ಓ ಅದೆಲ್ಲಾ ನಮಗೆ ಗೊತ್ತಿಲ್ಲಾ. ಇವತ್ತು ಕರಾಳ ದಿನ ಆಚರಿಸಬೇಕು ಅಷ್ಟೇ..
ಪರ್ತಕರ್ತ : ಇತಿಹಾಸ ಏನು ? ಆಗ ಬೆಂಬಲಿಸಿದವರೇ ಈಗ ಯಾಕೆ ವಿರೋಧಿಸ್ತಿದ್ದಾರೆ? ಇದರ ಹಿಂದಿರುವ ರಾಜಕಾರಣ ಏನು? ಅನ್ನೋದನ್ನಾದ್ರೂ ತಿಳಿದು ನಂತರ ಕರಾಳ ದಿನ ಆಚರಿಸಬೇಕಲ್ವಾ?
ಅಂಧಭಕ್ತ : ಅದೆಲ್ಲಾ ನಮಗೆ ಬೇಕಾಗಿಲ್ಲ. ಇವತ್ತು ಕರಾಳ ದಿನ, ಸಂವಿಧಾನ ಹತ್ಯಾ ದಿನ. ಜೈ ಮೋದೀಜಿ, ಜೈ ಶ್ರೀರಾಮಜೀ ( ಎನ್ನುತ್ತಾ ಬಿಜೆಪಿ ಬಾವುಟ ಹಿಡಿದು ಹೊರಡುತ್ತಾನೆ)
ಪರ್ತಕರ್ತ : ಇಂತವರಿಗೆ ಎಷ್ಟು ಹೇಳಿದ್ರೂ ಅಷ್ಟೆ. ಬರೀ ದ್ವೇಷ ತುಂಬಿಸಿಕೊಂಡಿರುವ ಅಂಧಭಕ್ತರ ಬಂಜರು ಮೆದುಳಲ್ಲಿ ವಿಚಾರಗಳ ಬೀಜ ಬಿತ್ತಲು ಸಾಧ್ಯವೇ ಇಲ್ಲ. ಹೌದು. ತುರ್ತು ಪರಿಸ್ಥಿತಿ ಕರಾಳ ದಿನ ಎಂಬುದು ನಿಜ. ಆದರೆ ಈಗ ಹನ್ನೆರಡು ವರ್ಷದಿಂದ ಈ ದೇಶದಲ್ಲಿರೋದು ಅಗೋಚರ ಅಘೊಷಿತ ತುರ್ತು ಪರಿಸ್ಥಿತಿ ಎನ್ನುವುದೂ ನಿಜ. ಆಗ ಜನರು ಅದನ್ನೂ ವಿರೋಧಿಸಿ ಇಂದಿರಮ್ಮನನ್ನು ಸೋಲಿಸಿದ್ದರು. ಈಗ ಈ ಸಂವಿಧಾನ ವಿರೋಧಿ ಸರಕಾರವನ್ನೂ ಸೋಲಿಸಬೇಕಿದೆ. ಸಂವಿಧಾನದ ಆಶಯಗಳನ್ನು ಜನರೇ ಎತ್ತಿ ಹಿಡಿಯಬೇಕಿದೆ.
(ಹಿನ್ನೆಲೆಯಲ್ಲಿ ಹಾಡು)
ಘೋಷಿತವೋ ಅಘೋಷಿತವೋ
ತುರ್ತು ಪರಿಸ್ಥಿತಿ ಜನರ ಹಕ್ಕಿಗೆ ಮಾರಕ
ಗೋಚರವೊ ಅಗೋಚರವೋ
ಸರ್ವಾಧಿಕಾರ ದೇಶದ ಒಳಿತಿಗೆ ಹಾನಿಕಾರಕ
ಸರ್ವಾಧಿಕಾರ ಅಳಿಸೋಣ, ಪ್ರಜಾಪ್ರಭುತ್ವ ಉಳಿಸೋಣ,
ಸಂವಿಧಾನದ ಆಶಯಗಳನು ಎತ್ತಿ ಹಿಡಿಯೋಣ.
ನಾವು ಎತ್ತಿ ಹಿಡಿಯೋಣ..
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಸಹಬಾಳ್ವೆಯ ಸುಂದರ ನೇಯ್ಗೆಯ ನಾಟಕ ʼಸ್ವಾತಂತ್ರ್ಯದ ಓಟʼ


